ಕುಡಿವ ನೀರಿಗಾಗಿ ರಾಸುಗಳೊಂದಿಗೆ ರೈತರ ಪ್ರತಿಭಟನೆ

Advertisement

ಶ್ರೀರಂಗಪಟ್ಟಣ: ಕಾವೇರಿ‌ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತೀರ್ಮಾನದಂತೆ ತಮಿಳುನಾಡಿಗೆ ನೀರು ಹರಿಸಿದ್ದೇ ಆದಲ್ಲಿ ನಾಡಿನ ಜನ-ಜಾನುವಾರಗಳಿಗೆ ಕುಡಿಯಲು ನೀರಿಲ್ಲದಂತಾಗುತ್ತದೆ ಎಂದು ರೈತ ಮುಖಂಡರು ರಾಸುಗಳೊಂದಿಗೆ ಪ್ರತಿಭಟನೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ಕುವೆಂಪು ವೃತ್ತದ ಬಳಿ ರಾಸುಗಳೊಂದಿಗೆ ಜಮಾಯಿಸಿದ ನೂರಾರು ರೈತರು ನಮಗೆ ಕುಡಿಯಲು ನೀರು ಕೊಡಿ ಎಂದು‌ ರಾಜ್ಯ ಸರ್ಕಾರವನ್ನು‌ ಆಗ್ರಹಿಸಿದರು.


ಸರ್ಕಾರದ ನಿರ್ಧಾರ ತಮಿಳುನಾಡಿನ ಓಲೈಕೆಯ ತಂತ್ರವಾಗಿದ್ದು, ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರದ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕನ್ನಂಬಾಡಿ ಅಣೆಕಟ್ಟೆ ಯಿಂದ ನೀರು ಬಿಟ್ಟಿದ್ದೇ ಆದಲ್ಲಿ, ಬೆಳೆಗಳಿಗೆ ಕಟ್ಟು ನೀರು ನೀಡುವುದಿರಲಿ ಕುಡಿಯಲು ಸಹ ನೀರಿಲ್ಲದಂತಾಗುತ್ತದೆ ಎಂದು‌‌ ಆಕ್ರೋಶ ವ್ಯಕ್ತಪಡಿಸಿ ಪಟ್ಟಣದ ಮುಖ್ಯ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಎದುರು ಸುಮಾರು‌ ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರು.