ಬಳ್ಳಾರಿ: ಐರನ್, ಸ್ಟೀಲ್ ಕಂಪನಿ ಆರಂಭಕ್ಕೆಂದು ವಶಪಡಿಸಿಕೊಂಡ ಸಾವಿರಾರು ಎಕರೆ ಭೂಮಿಯನ್ನು ವಾಪಸ್ ನೀಡಬೇಕು, ಇಲ್ಲವೇ ಕಂಪನಿ ಆರಂಭಿಸಬೇಕು ಎಂದು ತಾಲ್ಲೂಕಿನ ಕುಡತಿನಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ರೈತರ ನಿರಂತರ ಧರಣಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಭೇಟಿನೀಡಿ ಧರಣಿಗೆ ಬೆಂಬಲ ಸೂಚಿಸಿದರು.
ಸೋಮವಾರ ರಾತ್ರಿ ಹೋರಾಟ ನಿರತ ರೈತರೊಂದಿಗೆ ಮಾತುಕತೆ ನಡೆಸಿದ ಎಚ್‍ಡಿಕೆ ಅವರಿಗೆ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಅವರು, ನಿಮ್ಮ ನ್ಯಾಯಯುತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆಂದು ಅತಿ ಕಡಮೆ ಬೆಲೆಯಲ್ಲಿ ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಪ್ರದೇಶದ ಕೃಷಿ ಭೂಮಿಯನ್ನು ಕೆಲ ಉಳ್ಳವರ ಕೈಗೆ ಇಡುವ ಉದ್ದೇಶ ಸರ್ಕಾರದ ನಡೆಯ ಹಿಂದೆ ಇದೆ. ಇದು ನನಗೆ ಗೊತ್ತು. ಇದೇ ಕಾರಣಕ್ಕೆ ನನ್ನ ಆಡಳಿತ ಅವಧಿಯಲ್ಲಿ ಭೂಮಿಯನ್ನು ವಾಪಸ್ ರೈತರಿಗೆ ನೀಡುವ ಯತ್ನ ಮಾಡಿದ್ದೆ. ಆದರೆ, ಅದು ಈಡೇರಲಿಲ್ಲ ಎಂದರು.
ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಈ ಕುರಿತು ಪ್ರಶ್ನೆಮಾಡಿ ಎಂದು ರೈತರು ಆಗ್ರಹಿಸಿದಾಗ, ಹಾಲಿ ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ಸರ್ಕಾರ ಯಾವುದೇ ಜನಪರ, ರೈತಪರ ನಿರ್ಧಾರ ತೆಗೆದುಕೊಳ್ಳಲ್ಲ. ಬದಲಿಗೆ ಕೇವಲ ಬಜೆಟ್‍ಗೆ ಬೇಕಾದ ಲೇಖಾನುದಾನ, ಅನುಮೋದನೆ ಪಡೆದುಕೊಳ್ಳುವ ಕೆಲಸಮಾಡಲಿದೆ. ಸದ್ಯ ಚುನಾವಣೆ ನಡೆಯುವ ತನಕ ನಿಮ್ಮ ಸಮಸ್ಯೆ ಹೀಗೆ ಇರಲಿದೆ. ಚುನಾವಣೆ ನಂತರ ನಮ್ಮ ಸರ್ಕಾರ ಬಂದ ಮೇಲೆ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸಮಾಡುವೆ. ಅಲ್ಲಿಯ ತನಕ ನಿಮ್ಮ ಹೋರಾಟದ ಜೊತೆಗೆ ನಾನಿರುವೆ ಎಂದು ವಾಗ್ದಾನ ಮಾಡಿದರು.
ಈ ವೇಳೆ ಜೆಡಿಎಸ್ ಮುಖಂಡ ಎನ್. ಸೋಮಪ್ಪ ಸೇರಿದಂತೆ ಪಕ್ಷದ ಮುಖಂಡರು, ಧರಣಿ ನಿರತ ರೈತ ಮುಖಂಡರು, ಕನ್ನಡ ಪರ ಹೋರಾಟಗಾರರು ಇದ್ದರು.