ಕಾವೇರಿ ನೀರು ಕೇಳುವವರು ಅದರ ಜಲಮೂಲ ರಕ್ಷಣೆಗೂ ಮುಂದಾಗಬೇಕು.ನೀರು ಮಾತ್ರ ನಮಗೆ ಬೇಕು. ಜಲಮೂಲ ರಕ್ಷಣೆ ನಮ್ಮದಲ್ಲ ಎನ್ನುವುದು ನೈಸರ್ಗಿಕ ನ್ಯಾಯವಲ್ಲ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುವ ಸರ್ವಪಕ್ಷಗಳ ಸಭೆ ಮಾದರಿಯಾಗಲಿ. ಇಡೀ ಕಾವೇರಿ ಕಣಿವೆ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು ಸುಪ್ರೀಂ ಕೋರ್ಟ್ ಮುಂದೆ ರಾಜ್ಯದ ಪರಿಸ್ಥಿತಿಯನ್ನು ವಿವರವಾಗಿ ಮಂಡಿಸುವ ಕೆಲಸ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುವುದು ಅಗತ್ಯ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಬದಿಗಿಟ್ಟು ರಾಜ್ಯದ ಹಿತ ಕಾಪಾಡುವುದಕ್ಕೆ ಸಭೆಯ ಕಾಲವನ್ನು ಬಳಸಿಕೊಳ್ಳಬೇಕು. ಪರಸ್ಪರ ದೂಷಣೆಗೆ ಅವಕಾಶ ಬೇಡ. ಹಳೆಯ ಘಟನೆಗಳನ್ನು ಕೆದಕಿ ಪರಸ್ಪರ ಕೆಸರು ಎರಚುವ ಕೆಲಸವನ್ನು ಖಂಡಿತ ಮಾಡಬಾರದು. ಕಾವೇರಿ ವಿವಾದ ಇಂದು ನಿನ್ನೆಯದಲ್ಲ.
ಸ್ವಾತಂತ್ರ್ಯ ಪೂರ್ವದಿಂದಲೂ ಬೆಳೆದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬೇಕಾದಷ್ಟು ಒಪ್ಪಂದಗಳು, ಕರಾರುಗಳು ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಹಲವು ಆದೇಶಗಳನ್ನು ನೀಡಿದೆ. ಹೀಗಿರುವಾಗ ಹೊಸದಾಗಿ ಹೇಳುವಂತಹದು ಏನೂ ಇಲ್ಲ. ಆದರೆ ಹವಾಮಾನ ವೈಪರೀತ್ಯದಿಂದ ಮಳೆ ಕೈಕೊಟ್ಟಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರುವುದು ಅಗತ್ಯ.
ಈಗ ಕರ್ನಾಟಕದಲ್ಲಿ ಕಾವೇರಿ ಒಂದೇ ಅಲ್ಲ, ಹಲವು ನದಿಗಳು ತುಂಬಿ ಹರಿಯುತ್ತಿಲ್ಲ. ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದು ನಿಜ. ನಂತರದ ದಿನಗಳಲ್ಲಿ ಮಳೆ ಇಳಿಮುಖಗೊಂಡಿತು. ಕೆಆರ್ಎಸ್ನಲ್ಲೂ ಉತ್ತಮ ಒಳಹರಿವು ಇತ್ತು. ಅದರಂತೆ ನೀರು ತಮಿಳುನಾಡಿಗೂ ಹರಿದುಹೋಯಿತು. ಈಗ ಎಲ್ಲ ಕಡೆ ಮಳೆ ಇಲ್ಲ. ಜಲಾಶಯಗಳಲ್ಲಿ ಶೇಕಡ ೫೦ ರಷ್ಟೂ ನೀರಿನ ಸಂಗ್ರಹವಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.
ರಾಜ್ಯದ ಜನತೆ ನೀರಿಗಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ತಮಿಳುನಾಡಿಗೆ ಅಂತರ್ಜಲ ಇದೆ. ನಮಗೆ ಅದೂ ಇಲ್ಲ. ಅವರಿಗೆ ನೀರಾವರಿಗೆ ನೀರು ಬೇಕು.
ನಮಗೆ ಕುಡಿಯಲು ಬೇಕು. ಈ ವ್ಯತ್ಯಾಸವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಇದಕ್ಕೆ ಒಕ್ಕೊರಲ ಕೂಗು ಇರಬೇಕು.
ಕಾವೇರಿ ಸೇರಿದಂತೆ ಹಲವು ನದಿಗಳ ಮೂಲ ಪಶ್ಚಿಮಘಟ್ಟಗಳು. ಅದರ ರಕ್ಷಣೆಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ರಾಜ್ಯಗಳು ಚಕಾರ ಎತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟ ಆದೇಶ ನೀಡಿಲ್ಲ. ತುಂಗಾ ನದಿಯ ಮೂಲಕ್ಕೆ ಸಂಚಕಾರ ಬರುತ್ತದೆ ಎಂದು ಕುದುರೆಮುಖ ಕಂಪನಿ ಮುಚ್ಚಲು ಆದೇಶ ನೀಡಿದ ಸುಪ್ರೀಂ ಕೋರ್ಟ್ ಕಾವೇರಿ ಜಲಮೂಲವಾದ ಕೊಡಗಿನ ಅರಣ್ಯ ರಕ್ಷಣೆಗೆ ಕಣಿವೆಯಲ್ಲಿ ಬರುವ ಎಲ್ಲ ರಾಜ್ಯಗಳು ನೆರವು ನೀಡಬೇಕು ಎಂದು ಎಲ್ಲೂ ಹೇಳಿಲ್ಲ.
ಇದನ್ನು ನ್ಯಾಯಾಲಯದ ಗಮನಕ್ಕೆ ತರುವುದು ಮುಖ್ಯ. ಕೊಡಗಿನ ರಕ್ಷಣೆ ಕರ್ನಾಟಕದ ಜನರದ್ದು, ಕಾವೇರಿ ನೀರು ಪಾಲು ಮಾತ್ರ ತಮಿಳುನಾಡಿನದು ಎಂದು ಹೇಳುವುದು ನೈಸರ್ಗಿಕ ನ್ಯಾಯವಾಗುವುದಿಲ್ಲ. ನಿಸರ್ಗ ಉದಾರವಾಗಿ ಕೊಡುಗೆ ನೀಡುತ್ತದೆ.
ಅದು ಮಾನವನ ಅಗತ್ಯ ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದು ನಮಗೆ ದಾರಿದೀಪವಾಗಬೇಕು. ನದಿಪಾತ್ರದಲ್ಲಿ ಕೆಳಭಾಗದಲ್ಲಿರುವ ಜನರ ರಕ್ಷಣೆ ಅಗತ್ಯ ಎಂಬುದು ಎಷ್ಟು ಮುಖ್ಯವೋ ನದಿ ಜಲಮೂಲವನ್ನು ರಕ್ಷಿಸುವುದೂ ಅಷ್ಟೇ ಪ್ರಮುಖ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಕೊಡಗಿನವರು ಇಲ್ಲಿಯವರೆಗೆ ಕಾವೇರಿಯ ಮೇಲೆ ಭಾವನಾತ್ಮಕ ನಂಟು ಹೊಂದಿದ್ದು ಅದರ ರಕ್ಷಣೆ ಕೈಗೊಂಡಿದ್ದಾರೆ. ಆದರೆ ಅವರನ್ನು ರಕ್ಷಿಸುವವರು ಯಾರು? ಅವರು ಕೃಷಿ ಮಾಡಲು ಸೀಮಿತ ಅವಕಾಶವಿದೆ. ಕೈಗಾರಿಕೆ ಇಲ್ಲ. ಅವರು ಬದುಕುವುದು ಹೇಗೆ ಎಂಬುದರ ಬಗ್ಗೆ ಕಾವೇರಿ ಕಣಿವೆ ಜನ ಚಿಂತಿಸಬೇಕು.
ಕಾವೇರಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಬಾರದು ಎಂದರೆ ಕೊಡಗು ರೀತಿ ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯ. ಸರ್ವಪಕ್ಷಗಳ ಸಭೆ ಈ ವಿಷಯದಲ್ಲಿ ಅರ್ಥಪೂರ್ಣ ತೀರ್ಮಾನ ಕೈಗೊಳ್ಳುವಂತಾಗಬೇಕು. ನ್ಯಾಯಾಲಯವೂ ಸರ್ವ ಪಕ್ಷಗಳ ಸಭೆಯ ತೀರ್ಮಾನಕ್ಕೆ ತಲೆದೂಗುವಂತೆ ಆಗಬೇಕು.