ಕಾಳಾಪುರದಲ್ಲಿ ಮಾರಾಮಾರಿ: ಸಿರಿಗೆರೆ-ಉಜ್ಜಿನಿ ಪೀಠದ ಭಕ್ತರ ನಡುವೆ ಜಗಳ

Advertisement

ಬಳ್ಳಾರಿ: ದೇವಸ್ಥಾನದ ವಿಷಯಕ್ಕೆ ಸಂಬಂಧಿಸಿದಂತೆ ಉಜ್ಜಿನಿ ಪೀಠದ ಭಕ್ತರು ಹಾಗೂ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಪೀಠದ ಭಕ್ತರ ನಡುವೆ ಬೈಕ್ ರ‍್ಯಾಲಿ ವೇಳೆ ಮಾರಾಮಾರಿ ನಡೆದ ಘಟನೆ ಶನಿವಾರ ಕಾಳಾಪುರ ಗ್ರಾಮದಲ್ಲಿ ನಡೆದಿದೆ.
ಕೊಟ್ಟೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ನಿಮಿತ್ತ ಸಿರಿಗೆರೆ ಮಠದ ಭಕ್ತರು ಸಿರಿಗೆರೆಯಿಂದ ಕೊಟ್ಟೂರು ತನಕ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಬೈಕ್ ರ‍್ಯಾಲಿಯಲ್ಲಿ ಕೆಲ ದುಷ್ಕರ್ಮಿಗಳು ಕಾಳಾಪುರ ಗ್ರಾಮಕ್ಕೆ ಬರುತ್ತಲೇ ಏಕಾಏಕಿ ಗ್ರಾಮಸ್ಥರ ಮನೆ ಮೇಲೆ ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವರ ಪೈಕಿ ಓರ್ವ ವೃದ್ಧೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮದಲ್ಲಿ ನಿಷೇದಾಜ್ಞೆ ಜಾರಿಮಾಡಿ, ದುಷ್ಕರ್ಮಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.