ಕಾರ್ಕಳ(ಉಡುಪಿ): ಇಕ್ಕೇರಿ ನಾಯಕರ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದ ಕಾರ್ಕಳ ಕೋಟೆಯಲ್ಲಿ 300ಕ್ಕೂ ಅಧಿಕ ಫಿರಂಗಿ ಗುಂಡುಗಳು ಪತ್ತೆಯಾಗಿವೆ.
ಇಕ್ಕೇರಿ ನಾಯಕನ ಅಧಿಕಾರದ ಬಳಿಕ ಕಾರ್ಕಳ ಕೋಟೆ ಟಿಪ್ಪುವಿನ ಪಾಲಾಗಿತ್ತು. ಆ ಕಾಲವಧಿಯಲ್ಲಿ ಫಿರಂಗಿಗಾಗಿ ಬಳಸುತ್ತಿದ್ದ ಬೆಣಚು ಕಲ್ಲಿನಿಂದ ಸಿದ್ಧಪಡಿಸಲಾಗಿದ್ದ ವಿವಿಧ ಗಾತ್ರಗಳ ಗುಂಡು ಅವಾಗಿವೆ.
ಟಿಪ್ಪುವಿನ ಅಧಿಕಾರವಧಿಯ ಬಳಿಕ ಬ್ರಿಟಿಷರ ಪಾಲಾಗಿದ್ದ ಇದೇ ಕೋಟೆಯಲ್ಲಿ ಟಿಪ್ಪು ಪರವಾಗಿ ಅಧಿಕಾರ ಹೊಂದಿದ್ದ ಕುಟುಂಬವೊಂದು ಇದೇ ಕೋಟೆಯ ಪರಿಧಿಯಲ್ಲಿ ವಾಸ ಮಾಡಿಕೊಂಡಿತ್ತಲ್ಲದೇ ಭೂಮಿಯ ಅಧಿಕಾರ ಹೊಂದಿತ್ತು ಎನ್ನಲಾಗಿದೆ. ಇತ್ತೀಚೆಗೆ ಕಾರ್ಕಳ ಕೋಟೆಯನ್ನು ಕೆಲವು ಉದ್ಯಮಿಗಳು ಖರೀದಿಸಿ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿ, ಅಲ್ಲಿಯ ಭೂಮಿಯನ್ನು ಅಗೆಯುತ್ತಿದ್ದ ವೇಳೆ ಸುಮಾರು ಐದಡಿ ಆಳದಲ್ಲಿ ಫಿರಂಗಿ ಗುಂಡುಗಳು ಪತ್ತೆಯಾಗಿವೆ.
ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ಕಾರ್ಕಳ ತಾಲೂಕು ಪ್ರಭಾರ ತಹಶೀಲ್ದಾರ್ ಪುರಂದರ ಹೆಗ್ಡೆ ಘಟನಾ ಸ್ಥಳಕ್ಕೆ ಅಗಮಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ವಿವಿಧ ಗಾತ್ರದ ಸುಮಾರು 300ಕ್ಕೂ ಅಧಿಕ ಗುಂಡುಗಳನ್ನು ಸಂಗ್ರಹಿಸಿ ಅವುಗಳನ್ನು ಕಾರ್ಕಳ ಪೊಲೀಸರ ವಶಕ್ಕೆ ನೀಡಿದ್ದಾರೆ. ಸಣ್ಣ ಗಾತ್ರದ ಗುಂಡು ಸುಮಾರು ಅರ್ಧ ಕೆ.ಜಿಯಷ್ಟಿದರೆ, ದೊಡ್ಡ ಗಾತ್ರದ ಗುಂಡು 1 ಕೆ.ಜಿ. ಭಾರ ಹೊಂದಿದೆ ಎಂದು ಕಂದಾಯ ಮೂಲಗಳಿಂದ ತಿಳಿದುಬಂದಿದೆ.
ಕಂದಾಯ ನಿರೀಕ್ಷಕ ಗುರುಪ್ರಸಾದ್, ಗ್ರಾಮಕರಣಿಕ ಪ್ರವೀಣ್, ಭಾರತೀಯ ಪುರತಾತ್ವ ಸರ್ವೇಕ್ಷಣ ಇಲಾಖೆಯ ಪ್ರವೀಣ ಗೋಕುಲ್, ಪೊಲೀಸ್ ಸಿಬ್ಬಂದಿ, ಗುಪ್ತಚರ ವಿಭಾಗದವರು ಉಪಸ್ಥಿತರಿದ್ದರು.
ಕಾರ್ಕಳ ಕೋಟೆಯಲ್ಲಿತ್ತು ವೀರಮಾರುತಿ ಗುಡಿ:
ಕಾರ್ಕಳದ ಕೊಟೆಯಲ್ಲಿ ವೀರಮಾರುತಿಯ ಗುಡಿಯೊಂದು ಇತ್ತು. ಇಕ್ಕೇರಿ ರಾಜನ ಆಳ್ವಿಕೆಯ ಕಾಲಘಟ್ಟದಲ್ಲಿ ಕೋಟೆಯ ರಕ್ಷಣೆ ಮಾಡುತ್ತಿದ್ದ ರಾಮಕ್ಷತ್ರಿಯ ಸಮುದಾಯದವರು ಆರಾಧಿಸುತ್ತಿದ್ದರು. ಟಿಪ್ಪುವಿನ ಕಾಲಘಟ್ಟದಲ್ಲಿ ಧರಾಶಾಹಿಯಾಗಿದ್ದ ವೀರಮಾರುತಿಯ ಏಕಶಿಲಾ ಮೂರ್ತಿಯನ್ನು ಪಕ್ಕದ ಮಾರಿಯಮ್ಮ ಶ್ರೀಕ್ಷೇತ್ರದಲ್ಲಿ ಒಂದು ಭಾಗದಲ್ಲಿ ಪ್ರತಿಷ್ಠಾಪನೆ ಗೈದು ಆರಾಧಿಸುತ್ತಾ ಬಂದಿದ್ದರು. ಇತ್ತೀಚೆಗಷ್ಟೇ ಮಾರಿಯಮ್ಮ ಕ್ಷೇತ್ರ ಪುನರ್ ನಿರ್ಮಾಣ ಕಾರ್ಯ ನಡೆಯುವ ಸಂದರ್ಭದಲ್ಲಿ ವೀರಮಾರುತಿ ಗುಡಿಯ ಪುನರ್ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.