ಕಾಮನ್ವೆಲ್ತ್‌ ಕ್ರೀಡಾ ಸಾಧನೆ ಅಮೃತೋತ್ಸವಕ್ಕೆ ಕೊಡುಗೆ

editorial
Advertisement

ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ನಮ್ಮ ಯುವಕ-ಯುವತಿಯರು ಒಟ್ಟು ೬೧ ಪದಕಗಳನ್ನು ಗಳಿಸಿ ಹೊಸ ಯುಗ ಆರಂಭಿಸಿದ್ದರೆ. ದೇಶಕ್ಕೆ ಸ್ವಾತಂತ್ರ‍್ಯ ಬಂದು ೭೫ ವರ್ಷಗಳಾಗಿದೆ. ಕ್ರೀಡೆಯಲ್ಲಿ ನಾವು ಮೊದಲಿನಿಂದಲೂ ಹಿಂದುಳಿದದ್ದು ನಿಜ. ಕ್ರೀಡೆಗಿಂತ ಕ್ರೀಡಾರಂಗದಲ್ಲಿ ರಾಜಕೀಯವೇ ಹೆಚ್ಚಾಗಿತ್ತು. ಈಗ ಅದಕ್ಕೆ ಕಡಿವಾಣ ಹಾಕಿರಿಂದ ಗ್ರಾಮೀಣ ಪ್ರತಿಭೆ ಹೊರಬರಲು ಸಾಧ್ಯವಾಯಿತು. ಅದರಲ್ಲೂ ಈ ಬಾರಿ ಶೂಟಿಂಗ್ ಮತ್ತು ಬಿಲ್ಲುಗಾರಿಕೆ ಇರಲಿಲ್ಲ. ಆದರೂ ನಮಗೆ ಪದಕಗಳ ಸಂಖ್ಯೆ ಕಡಿಮೆಯಾಗಲಿಲ್ಲ. ನಮ್ಮ ಯುವ ಜನಾಂಗ ನಿರಾಸೆ ಉಂಟುಮಾಡಲಿಲ್ಲ. ೨೨ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಇದು ಮುಂದಿನ ಒಲಂಪಿಕ್ಸ್ನಲ್ಲಿ ಸಾಧಿಸುವ ಗೆಲವಿಗೆ ಸೋಪಾನ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಈಗ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಇದುವರೆಗೆ ಕ್ರಿಕೆಟ್ ಹೊರತುಪಡಿಸಿ ಉಳಿದ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತಿರಲಿಲ್ಲ. ಈಗ ಅಥ್ಲೆಟಿಕ್ಸ್ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಅದರಲ್ಲೂ ಜಾಹೀರಾತು ಸಂಸ್ಥೆಗಳು ಈಗ ಬೇರೆ ಬೇರೆ ಕ್ರೀಡೆಗಳಲ್ಲಿ ವಿಜೇತರಾದವರನ್ನು ಪ್ರಚಾರಕ್ಕೆ ಬಳಸಿಕೊಂಡು ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ ಸಂಗತಿ. ಅದರಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾಪ್ರತಿಭೆಯನ್ನು ಗುರುತಿಸಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಉತ್ತೇಜನ ನೀಡುವ ಕೆಲಸ ಮುಂದುವರಿಸಬೇಕು. ಆಗ ನೈಜ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ. ಕ್ರೀಡಾ ಪ್ರತಿಭೆಗೆ ಬಹಳ ಕಡಿಮೆ ಅವಧಿಯಲ್ಲಿ ಎಲ್ಲ ರೀತಿಯ ಸವಲತ್ತು ಸಿಗಬೇಕು. ಅದರಲ್ಲೂ ಕ್ರೀಡಾಪಟುಗಳಿಗೆ ಹೆಚ್ಚಿನ ಅಭ್ಯಾಸ ಮಾಡಲು ಮೂಲಭೂತ ಸವಲತ್ತು ಕಲ್ಪಿಸಿಕೊಡಬೇಕು. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಹಂತದಲ್ಲೂ ಸ್ಪರ್ಧೆ ಇದೆ ಇರಬೇಕು. ಪ್ರತಿಹಂತದಲ್ಲೂ ಪ್ರತಿಭೆಯೇ ಪ್ರಮುಖ ಆಧಾರವಾಗಬೇಕು. ಇದಕ್ಕೆ ಅತಿ ಹೆಚ್ಚು ವೈಜ್ಞಾನಿಕ ಉಪಕರಣಗಳನ್ನು ಬಳಸಿದರೆ ನೈಜ ಪ್ರತಿಭೆಯನ್ನು ಗುರುತಿಸಲು ಸಾಧ್ಯ. ಉತ್ತಮ ಕೋಚ್, ಉತ್ತಮ ಸವಲತ್ತು ನೀಡಿದರೆ ತಮ್ಮ ಪ್ರತಿಭೆಗೆ ಕೊರತೆ ಏನೂ ಇಲ್ಲ. ಕ್ರೀಡೆಗೆ ಇಡೀ ಜೀವನವನ್ನು ಮುಡಿಪಾಗಿಡುವ ಯುವ ಪೀಳಿಗೆ ನಮ್ಮಲ್ಲಿದೆ. ಮುಂದಿನ ವರ್ಷ ನಮ್ಮ ಜನಸಂಖ್ಯೆ ಚೀನಾವನ್ನು ಮೀರಿಸಲಿದೆ. ಹೀಗಿರುವಾಗ ಕ್ರೀಡೆಯಲ್ಲೂ ನಾವು ಮೊದಲ ಸ್ಥಾನದಲ್ಲಿರಬೇಕು. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಜನಾಂಗ ಇರುವುದು ನಮ್ಮಲ್ಲೇ. ಹೀಗಿರುವಾಗ ಕ್ರೀಡೆಯಲ್ಲಿ ನಾವು ಹಿಂದೆ ಇದ್ದೇವೆ ಎಂಬುದೇ ನಾಚಿಕೆಗೇಡಿನ ಸಂಗತಿ. ೧೯೪೭ ರಿಂದ ನಾವು ಮೂರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರಲಿಲ್ಲ. ೨೦೦೨ ರಿಂದ ನಮ್ಮಲ್ಲಿ ಕ್ರೀಡಾಲೋಕದ ಬಗ್ಗೆ ಜಾಗೃತಿ ಮೂಡಿತು ಎಂದು ಹೇಳಬಹುದು. ನಮ್ಮಲ್ಲಿ ಸಾಂಪ್ರದಾಯಿಕವಾಗಿ ಬೆಳೆದುಬಂದಿರುವ ಕ್ರೀಡೆ ಎಂದರೆ ಕುಸ್ತಿ, ಭಾರ ಎತ್ತುವ ಸ್ಪರ್ಧೆ, ಬಾಕ್ಸಿಂಗ್, ಟೇಬಲ್ ಟೆನಿಸ್, ಅಥ್ಲೆಟಿಕ್ಸ್. ಹೊಸ ಕ್ರೀಡೆಗಳಲ್ಲಿ ನಾವು ಇನ್ನೂ ನಮ್ಮ ಯುವ ಪೀಳಿಗೆಗೆ ತರಬೇತಿ ನೀಡಿಲ್ಲ. ಹೊಸ ಕ್ರೀಡೆಗಳಲ್ಲಿ ಪದಕಗಳು ಬರಬೇಕು ಎಂದರೆ ಅದಕ್ಕೆ ಸರ್ಕಾರ-ಖಾಸಗಿ ರಂಗದ ಉತ್ತೇಜನ ಬೇಕು. ಉತ್ತಮ ಸ್ಥಿತಿಯಲ್ಲಿರುವ ಉದ್ಯಮಗಳು ಅಪರೂಪದ ಕ್ರೀಡೆಗಳನ್ನು ಆಯ್ಕೆ ಮಾಡಿಕೊಂಡು ಅವರನ್ನು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಿ ಉತ್ತಮ ತರಬೇತಿ ನೀಡಬೇಕು. ಆಗ ಅವರು ಪದಕಗಳನ್ನು ತರುವುದು ಖಚಿತ. ಉತ್ತಮ ಕ್ರೀಡಾಪಟು ಯೋಧ ಇಂತೆ. ಯೋಧ ತನ್ನ ಯೌವನವನ್ನು ಗಡಿಭದ್ರತೆಗೆ ಮೀಸಲಿಡುತ್ತಾನೆ. ಅದಕ್ಕಾಗಿ ಆ ವ್ಯಕ್ತಿ ತನ್ನ ಇಡೀ ಜೀವನದ ಇತರೆ ಮಧುರ ಕ್ಷಣಗಳನ್ನು ತ್ಯಾಗ ಮಾಡಿರುತ್ತಾನೆ. ಅಂಥವರಿಗೆ ಸರ್ಕಾರ ಮತ್ತು ಸಮಾಜ ಎಲ್ಲ ಸವಲತ್ತು ಕಲ್ಪಿಸಿಕೊಡುವುದು ಕರ್ತವ್ಯ. ಪದಕ ಬಂದ ಕೂಡಲೇ ಕ್ರೀಡಾಪಟುಗಳನ್ನು ಮರೆಯಬಾರದು. ಈಗ ಹಲವು ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಕ್ರೀಡಾಪಟುಗಳಿಗೆ ಹೆಚ್ಚಿನ ಸವಲತ್ತು ಕಲ್ಪಿಸಿಕೊಡುತ್ತಿದೆ. ಇದು ಉತ್ತಮ ಲಕ್ಷಣ. ಅದೇರೀತಿ ಪ್ರತಿ ರಾಜ್ಯ ಒಂದು ಕ್ರೀಡೆಯನ್ನು ಆಯ್ಕೆಮಾಡಿಕೊಂಡು ಅದಕ್ಕೆ ಬೇಕಾದ ಎಲ್ಲ ಸವಲತ್ತು ಕಲ್ಪಿಸಿಕೊಡುವುದು ಸೂಕ್ತ. ಪ್ರತಿಭೆಗೆ ತಕ್ಕ ತರಬೇತಿ ಮತ್ತು ಉತ್ತೇಜನ ದೊರಕಿದಲ್ಲಿ ನಮ್ಮ ಯುವ ಪೀಳಿಗೆ ಹೆಚ್ಚು ಪದಕಗಳನ್ನು ಗಳಿಸುವುದು ಕಷ್ಟದ ಕೆಲಸವೇನಲ್ಲ. ಕೇವಲ ಶ್ರೀಮಂತಿಕೆ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ರಾಜಕಾರಣಿಗಳು ಬೇಕು. ಆದರೆ ಕ್ರೀಡೆಯಲ್ಲಿ ರಾಜಕೀಯ ಬೇಡ. ಯುವ ಶಕ್ತಿ ಒಂದು ವಿದ್ಯುತ್ ಪ್ರವಾಹ ಇಂತೆ. ಅದನ್ನು ಸರಿಯಾಗಿ ಒಂದು ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದರೆ ಮಾತ್ರ ಉಕ್ಕನ್ನು ಬೇಕಾದರೂ ಬಗ್ಗಿಸಬಹುದು. ಆ ಶಕ್ತಿ ಹರಿದು ಹಂಚಿ ಹೋದರೆ ಒಂದು ಹುಲುಕಡ್ಡಿಯನ್ನೂ ಅಲುಗಾಡಿಸಲಾರದು. ಈ ಮಾತು ಅಕ್ಷರಶಃ ಕ್ರೀಡಾಲೋಕಕ್ಕೆ ಅನ್ವಯಿಸುವ ಮಾತು.

editorial