ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರ ನಡುರಾತ್ರಿ (ಭಾರತೀಯ ಕಾಲಮಾನ) ಅಧಿಕೃತವಾಗಿ ತೆರೆ ಬಿದ್ದಿದೆ.
ಜುಲೈ 28ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾದ ಕೂಟ ಅತ್ಯಂತ ಯಶಸ್ಸಿಯಾಗಿ ನಡೆಯಿತು. ವಿವಿಧ ವಿವಿಧ ದೇಶಗಳ ಕ್ರೀಡಾಪಟುಗಳು ತಮ್ಮಲ್ಲಿನ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಪದಕಗಳನ್ನು ಬಾಚಿಕೊಂಡರು.
ಹನ್ನೊಂದು ದಿನಗಳ ಕಾಲ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 72 ರಾಷ್ಟ್ರಗಳು ಐದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡು ಪದಕಕ್ಕಾಗಿ ಸೆಣಸಾಟ ನಡೆಸಿದರು.
ಸೋಮವಾರ ರಾತ್ರಿ ನಡೆದ ಪಥಸಂಚಲನದಲ್ಲಿ ಕೂಟದಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ಕ್ರೀಡಾಪಟುಗಳು ಪಾಲ್ಗೊಂಡು ಶಿಸ್ತುಬದ್ಧವಾಗಿ ತಮ್ಮ ತಮ್ಮ ರಾಷ್ಟ್ರ ಧ್ವಜಗಳೊಂದಿಗೆ ಸಾಗುವ ದೃಶ್ಯ ಮನಮೋಹಕವಾಗಿತ್ತು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮಕ್ಕೆ ಹೆಚ್ಚಿನ ರಂಗು ನೀಡಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂಗ್ಲೆಂಡ್‌ನಲ್ಲಿ ವಾಸಿಸಿರುವ ಪಂಜಾಬಿಗಳು ಪ್ರಸ್ತುತಪಡಿಸಿದ ನೃತ್ಯ ಮೈದಾನದಲ್ಲಿ ನೆರದಿದ್ದ ಕ್ರೀಡಾಭಿಮಾನಿಗಳ ಮನ ಸೂರೆಗೊಂಡಿತು. ಜೊತೆಗೆ ಪಾಪ್ ಸಂಗೀತಗಾರರು ಹಾಡು ಸೇರಿದಂತೆ ಇತರಸಾಂಸ್ಖೃತಿಕ ಕಾರ್ಯಕ್ರಮ ಜನರ ಮನ ತಣಿಸುವಲ್ಲಿ ಯಶ್ಸಸಿಯಾಯಿತು.
ಆಸ್ಟ್ರೇಲಿಯಾ 67 ಚಿನ್ನ, 57 ಬೆಳ್ಳಿ ಹಾಗೂ 54 ಕಂಚಿನ ಪದಕ ಸೇರಿದಂತೆ ಒಟ್ಟು 178 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು.
ಒಟ್ಟು 176 (57 ಚಿನ್ನ, 66 ಬೆಳ್ಳಿ, 53 ಕಂಚು) ಪಡೆದ ಆತಿಥೇಯ ಇಂಗ್ಲೆಂಡ್ ಎರಡನೇ ಸ್ಥಾನ ಪಡೆದರೆ, ಕೆನಡಾ, 92 ಪದಕ (26 ಚಿನ್ನ, 32 ಬೆಳ್ಳಿ, 34 ಕಂಚು) ಗಳಿಸಿ ಮೂರನೇ ಸ್ಥಾನ ಗಳಿಸಿತು.
22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕ ಸೇರಿದಂತೆ ಒಟ್ಟಾರೆಯಾಗಿ 61 ಪದಕ ಪಡೆದ ಭಾರತ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆಯಿತು.
20 ಬಂಗಾರ, 12 ಬೆಳ್ಳಿ ಹಾಗೂ 17 ಕಂಚಿನ ಪದಕ ಸೇರಿದಂತೆ ಒಟ್ಟು 49 ಪದಕ ಗಳಿಸಿದ ನ್ಯೂಜಿಲೆಂಡ್ ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತು.
ಮುಂದಿನ ಕಾಮನ್‌ವೆಲ್ತ್ ಕ್ರೀಡಾಕೂಟ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಕಾಮನ್‌ವೆಲ್ತ್ ಕ್ರೀಡಾ ಧ್ವಜವನ್ನು ಆ ರಾಷ್ಟ್ರದ ಕೂಟದ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.