ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ

ಅನುಮತಿ
Advertisement

ಹುಬ್ಬಳ್ಳಿ: ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಮಹಾನಗರ ಪಾಲಿಕೆ ಜಾಗದಲ್ಲಿ ಗಜಾನನ ಉತ್ಸವ ಮಹಾಮಂಡಳಿಯವರು ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ ೭ ರಂದು ನಗರದ ಪಾಲಿಕೆ ಜಾಗದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಗಜಾನನ ಉತ್ಸವ ಮಹಾಮಂಡಳಿಯವರು ಮನವಿ ಸಲ್ಲಿಸಿದ್ದರು. ಈ ಕುರಿತಂತೆ ಮೇಯರ್ ಅವರು ಅರ್ಜಿ ಪರಿಶೀಲಿಸಲು ನನಗೆ ಸೂಚಿಸಿದ್ದರು. ಮಾರ್ಚ್ ೧೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧಾರವಾಡಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ ಮಹಾಮಂಡಳಿ ಅವರು ನೀಡಿದ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದರು.
ಪಾಲಿಕೆ ಜಾಗ ಆಗಿರುವುದರಿಂದ ಅನುಮತಿ ಕೊಡುವುದು ಬಿಡುವುದು ಪಾಲಿಕೆಗೆ ಸಂಬಂಧಿಸಿದ ವಿಷಯ. ಇದಕ್ಕೆ ಕಾರ್ಯ ನಿರ್ವಾಹಕರು ಆಯುಕ್ತರೇ ಆಗಿರುತ್ತಾರೆ. ಅನುಮತಿ ನೀಡಲು ಯೋಚನೆ ಮಾಡಬೇಕಾಗುತ್ತದೆ. ಈ ಮೊದಲು ಗಣೇಶೋತ್ಸವ, ಟಿಪ್ಪು ಜಯಂತಿ ಆಚರಣೆಗೆ ಬಹಳ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರಿಂದ ಪರಿಶೀಲಿಸಿ ಅನುಮತಿ ನೀಡಲಾಗಿತ್ತು. ಇದೀಗ ಹೋಳಿ ಹುಣ್ಣಿಮೆ ಮುಗಿದಿದ್ದು, ಅನುಮತಿ ನೀಡಲು ಆಗುವುದಿಲ್ಲ. ಈ ಬಗ್ಗೆ ಮಹಾಮಂಡಳದವರ ಜೊತೆ ಚರ್ಚಿಸಿ ಮನವಿಗೆ ಹಿಂಬರಹ ನೀಡಿ ಮನವೋಲಿಸಲಾಗುವುದು ಎಂದು ಹೇಳಿದರು.
ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮಾತನಾಡಿ, ಈಗಾಗಲೇ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ೪೬೨ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈಗ ಹುಣ್ಣಿಮೆ ಮುಗಿದಿರುವುದರಿಂದ ಮತ್ತು ಮಾರ್ಚ್ ೧೨ಕ್ಕೆ ಪ್ರಧಾನಮಂತ್ರಿ ಆಗಮನ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕಲ್ಪಿಸಬೇಕಾಗಿರುವುದರಿಂದ ಈ ಮನವಿಯನ್ನು ಪುರಸ್ಕರಿಸಲು ಆಗುವುದಿಲ್ಲ. ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೆ ಶಾಂತಿ ಕದಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಇದೆ ಎಂಬುದನ್ನು ನೀವು ತಿಳಿಯಬಹುದು ಎಂದರು.
ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್ ಮಾತನಾಡಿ, ನಮಗೆ ಒಂದು ದಿನದ ಮಟ್ಟಿಗಾದರೂ ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೇ ಮಹಾಮಂಡಳದವರು ಸೇರಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಧಿಕಾರಿಗಳು ಈಗಾಗಲೇ ಚರ್ಚಿಸಿದ್ದಾರೆ. ಪ್ರಧಾನಮಂತ್ರಿ ಮೋದಿ ಆಗಮನ ಕಾರಣ ಇಟ್ಟುಕೊಂಡು ಅಸಮರ್ಥತೆ ಹೊರ ಹಾಕಿದ್ದಾರೆ. ಅವರು ಕೊಡುವ ಹಿಂಬರಹವನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.