ಕಾಡಾನೆಗಳು ಹಳ್ಳಿ ನುಗ್ಗುತ್ತಿವೆ. ಬೆಳೆ ಮತ್ತು ಜೀವ ರಕ್ಷಣೆಯೇ ಕಷ್ಟಸಾಧ್ಯವಾಗಿರುವ ಸ್ಥಿತಿಯಲ್ಲಿ ಜನರೆಲ್ಲ ನಮಗೆ ಛೀಮಾರಿ ಹಾಕುತ್ತ, ಇನ್ನೇನು ದಾಳಿ ಮಾಡುವ ಹಂತಕ್ಕೆ ಬಂದಿದ್ದಾರೆ. ಸೆಪ್ಟೆಂಬರ್ ೨೨ರಂದು ವಿಧಾನಸಭೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಾಡುಪ್ರಾಣಿಗಳ ಹಾವಳಿ ಮತ್ತು ತಮ್ಮ ಕ್ಷೇತ್ರದಲ್ಲಿ ವಿಶೇಷವಾಗಿ ಕಾಡಾನೆಗಳ ಉಪಟಳದ ಬಗ್ಗೆ ಆತಂಕಭರಿತರಾಗಿ ಹೇಳಿದ ಮಾತಿದು.
ಸರಿಯಾಗಿ ಎರಡು ತಿಂಗಳಿಗೆ, ಮೊನ್ನೆ ನವೆಂಬರ್ ೨೦ರಂದು ಎಂ.ಪಿ.ಕುಮಾರಸ್ವಾಮಿ ಮೇಲೆ ಕಾಡಾನೆಗಳಿಂದ ಬೇಸತ್ತ ಜನ ದಾಳಿ ಮಾಡಿದರು. ಅವರ ಅಂಗಿ ಹರಿದು ದೂಡಾಡಿದರು. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ರಕ್ಷಿಸಿ ಕರೆತಂದರು.
ಅಂದು ಮುಂಜಾನೆ ಅವರ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಕಾಡಾನೆ ತುಳಿತದಿಂದ ಸಾವನ್ನಪ್ಪಿದರೆ ಮತ್ತಿಬ್ಬರು ಓಡಿ ಪರಾರಿಯಾಗಿದ್ದರು. ಶಾಸಕರಿಗೆ ಜನರ ನೋವು, ಆಕ್ರೋಶ ಅರ್ಥವಾಗುತ್ತದೆ. ಅವರೇನೂ ದೂರು ನೀಡಲಿಲ್ಲ. ಚುನಾವಣೆ ಸಮಯ ಬೇರೆ. ಜನರ ತಪ್ಪಲ್ಲ, ನಾವು ಜನರೊಟ್ಟಿಗೇ ಇರಬೇಕಿತ್ತು. ಆದರೆ ಪೊಲೀಸರು ಹಾದಿ ತಪ್ಪಿಸಿದರೆಂದರು.
ಶಾಸಕರ ಮೇಲಿನ ಹಲ್ಲೆ ದೇಶಾದ್ಯಂತ ಸುದ್ದಿಯಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎನ್ನುವ ಭಾವನೆ ಜನರದ್ದಿರಬಹುದು. ಕುಮಾರಸ್ವಾಮಿಯವರೂ ಕೂಡ ಅಂದು ವಿಧಾನಸಭೆಯಲ್ಲಿ ಆನೆ ಉಪಟಳದ ಬಗ್ಗೆ ಪ್ರಸ್ತಾಪಿಸುತ್ತ ಮಾರ್ಮಿಕವಾಗಿ ಸರ್ಕಾರದ ನೀತಿಯನ್ನು, ಧೋರಣೆಯನ್ನು ಟೀಕಿಸಿದ್ದರು. ಸಾಯಲೂ ಸಿದ್ಧರಾಗಿ, ನಾವು ನಂತರ ಪರಿಹಾರ ಕೊಡುತ್ತೇವೆ' ಎನ್ನುತ್ತದೆ ಸರ್ಕಾರ. ನ್ಯಾಯಾಲಯ ಮತ್ತು ಪರಿಸರವಾದಿಗಳಿಗೆ ಆನೆ ಮತ್ತು ವನ್ಯಪ್ರಾಣಿಗಳು ಬೇಕು. ಆದರೆ ಜನ ಜೀವಭಯದಿಂದ ಬದುಕುವಂತಾಗಿದೆ. ಬಹುಶಃ ಜನರು ನಮ್ಮ ಮೇಲೆ ದಾಳಿ ಮಾಡಿದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂದಿದ್ದರು. ಹಾಗೇ ಆಯಿತು ನೋಡಿ. ಶಾಸಕರ ಮೇಲೆ ದಾಳಿಯಾದ ಮೇಲೆ ಮುಖ್ಯಮಂತ್ರಿ ತುರ್ತು ಉನ್ನತ ಮಟ್ಟದ ಸಭೆ ನಡೆಸಿ ಒಂದು ಟಾಸ್ಕ್ ಫೋರ್ಸ್ ರಚಿಸಿದರು. ಅರಣ್ಯ ಅಧಿಕಾರಿಗಳ ಮತ್ತು ಸಿಬ್ಬಂದಿ ವಿಶೇಷ ಕಾರ್ಯಪಡೆಯನ್ನು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ರಚಿಸಿ ಅವರಿಗೆ ಆನೆ ನಿಯಂತ್ರಣಕ್ಕೆ ಬೇಕಾದ ವಾಕಿಟಾಕಿ, ಪಟಾಕಿಗಳು, ವಾಹನಗಳು, ಆನೆಗಳು ಹಳ್ಳಿಗೆ ನುಗ್ಗುವ ಮೊದಲು ಮಾಹಿತಿ ರವಾನಿಸುವುದು, ಜಾಗೃತಗೊಳಿಸುವುದು, ಆನೆಗಳನ್ನು ಓಡಿಸುವುದು ಇತ್ಯಾದಿ ಈ ಟಾಸ್ಕ್ಫೋರ್ಸಿನ ಕೆಲಸ. ಎಷ್ಟು ದಿನ ನಡಿದೀತು ಇಂತಹ ಟಾಸ್ಕ್ಫೋರ್ಸ್ !? ಇದು ಈಗಿರುವ ಪ್ರಶ್ನೆ. ಕಾಡು ಪ್ರಾಣಿಗಳು ವಿಶೇಷವಾಗಿ ಆನೆ, ಹುಲಿ, ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ ಇತ್ಯಾದಿ ವನ್ಯಪ್ರಾಣಿಗಳ ಉಪಟಳ ಕಾಡಂಚಿನ ಹಳ್ಳಿಗಳಿಗಷ್ಟೇ ಈಗ ಸೀಮಿತವಾಗಿಲ್ಲ. ಇಡೀ ಮೈಸೂರು ನಗರವನ್ನೇ ಕಾಡಾನೆ ತಲ್ಲಣಗೊಳಿಸಿದ್ದನ್ನು ಜನ ಮರೆತಿಲ್ಲ. ಹಾಗೆಯೇ ಕೇವಲ ನಿನ್ನೆಯಷ್ಟೇ ಕಾಡಾನೆಗಳು ರಾಜಧಾನಿ ಬೆಂಗಳೂರು ಸಮೀಪವೇ ಜನರನ್ನು ಅಟ್ಟಾಡಿಸಿವೆ. ಹಾಸನ, ಸಕಲೇಶಪುರ, ಮೈಸೂರು, ಮಂಗಳೂರು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಜನ ಬದುಕುತ್ತಿರುವುದೇ ಈಗ ವನ್ಯಪ್ರಾಣಿಗಳ ಆತಂಕದಿಂದ. ಸರ್ಕಾರಿ ಅಂಕಿಸಂಖ್ಯೆಗಳ ಪ್ರಕಾರವೇ, ಸೆಪ್ಟೆಂಬರ್ ಅಂತ್ಯಕ್ಕೆ ಕಳೆದ ಐದು ವರ್ಷಗಳಲ್ಲಿ ೯೫ ಮಂದಿ ಕಾಡಾನೆಯಿಂದ ಸತ್ತರು. ಅವರ ಅವಲಂಬಿತರಿಗೆ ೭.೫೦ ಲಕ್ಷ ರೂ., ಪರಿಹಾರವನ್ನೇನೋ ಕೊಟ್ಟು ಸರ್ಕಾರ ತಣ್ಣಗಾಯಿತು. ಆದರೆ ಈ ಉಪಟಳವನ್ನು ನಿಲ್ಲಿಸುವವರು ಯಾರು? ಇದೇ ಮಾತನ್ನೇ ಈಗ ಜನಾಕ್ರೋಶಕ್ಕೆ ಗುರಿಯಾಗಿರುವ ಎಂ.ಪಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದು. ಇಪ್ಪತ್ತೈದು ವರ್ಷಗಳ ಹಿಂದೆ ಕಾಳಿ ನದಿಯ ಪಕ್ಕದ ಹಳ್ಳಿಗೆ ಸೈಕಲ್ನಲ್ಲಿ ಹೋಗುತ್ತಿದ್ದ ಫಾರೆಸ್ಟ್ ಗಾರ್ಡ್ ಓರ್ವನನ್ನು ಒಂಟಿ ಸಲಗ ಎತ್ತಿ ಹತ್ತಾರು ಮರಗಳಿಗೆ ಸೊಂಡಿಲಿನಿಂದ ಕುಕ್ಕಿ ಅಪ್ಪಳಿಸಿ ಸಾಯಿಸಿದ್ದು ಅಂದಿನ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಇತ್ತೀಚೆಗೆ ಆನೆ, ಚಿರತೆ, ಕಾಡೆಮ್ಮೆ ಮನುಷ್ಯನ ಮೇಲೆ ನಡೆಸುವ ದಾಳಿ, ನಗರಕ್ಕೆ ನುಗ್ಗುವ, ಬೆಳೆ-ಮನೆ ಧ್ವಂಸ ಮಾಡುವ ವಿದ್ಯಮಾನಗಳು ಮಾಮೂಲಿಯಾಗಿಬಿಟ್ಟಿವೆ. ನಿಜ. ಸರ್ಕಾರ ಮತ್ತು ಜನರ ಅಭಿಪ್ರಾಯ ಕೂಡ ಜನರ ಜೀವಕ್ಕಿಂತ ವನ್ಯ ಪ್ರಾಣಿಗಳ ಜೀವಗಳಿಗೆ, ಅವುಗಳ ಸಂರಕ್ಷಣೆಗೆ ಪ್ರಾಧಾನ್ಯತೆ ನೀಡುತ್ತಿವೆ ಏಕೆ? ಅವುಗಳ ನಾಶಕ್ಕೆ ನಾವಷ್ಟೇ ಕಾರಣರೇ? ಎಂಬುದು ಕಾಡಂಚಿನ ಜನರ ಪ್ರಶ್ನೆ. ಕಳೆದ ಆಗಸ್ಟ್ನಲ್ಲಿ ಬೆಳಗಾವಿ ನಗರವೇ ಸ್ತಬ್ಧವಾಗಿತ್ತು. ಚಿರತೆ ಕಾಣಿಸಿಕೊಂಡು ಹದಿನೈದು ದಿನಗಳವರೆಗೆ ಶಾಲೆ-ಕಾಲೇಜುಗಳು ಬಂದ್ ಆಗಿದ್ದವು. ಅದನ್ನು ಓಡಿಸಲು, ಹಿಡಿಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಯಿತು. ಅದೇ ರೀತಿ, ಕೆ.ಆರ್.ಪೇಟೆ, ಕೊಡಗು, ಹಾಸನ, ಕೊಪ್ಪಳ, ಹಾವೇರಿ, ದಾವಣಗೆರೆ ತಾಲ್ಲೂಕಿನ ನ್ಯಾಮತಿ ಇತ್ಯಾದಿ ಕಡೆಗಳಲ್ಲೆಲ್ಲ ಇತೀಚಿನ ದಿನಗಳಲ್ಲಿಯೇ ಚಿರತೆ ದಾಳಿಗಳು ನಡೆದವು. ಜನರೂ ಸತ್ತರು. ದನಕರುಗಳೂ ಕೊಲ್ಲಲ್ಪಟ್ಟವು. ವ್ಯಾಖ್ಯಾನಿಸುವುದು ಹೀಗೆ. ಅವು ಅಡವಿಯಲ್ಲಿ ಸ್ವಚ್ಛಂದವಾಗಿದ್ದವು. ಬೇಟೆಯಾಡುತ್ತ ತಮ್ಮ ಆಹಾರ ಪಡೆದುಕೊಳ್ಳುತ್ತಿದ್ದವು. ಪರಿಸರ, ಜೀವಸಂಕುಲದ ಸಮತೋಲನ ಕಾದುಕೊಂಡಿದ್ದವು. ಮನುಷ್ಯರು ಕಾಡಿಗೆ ಹೋಗಿ ಲಗ್ಗೆ ಇಟ್ಟು ಈ ಸಮತೋಲನ ಅಸಮತೋಲನವಾಯಿತು. ಅವು ಓಡಾಡುವ ಮರಗಿಡಗಳು ನಾಶವಾದವು. ಸಹ್ಯಾದ್ರಿಯ ಗಾತ್ರ ಕಡಿಮೆಯಾಯಿತು. ಗಣಿ ಮತ್ತು ಉದ್ಯಮಗಳು ಕಾಡಲ್ಲಿಯೇ ಆರಂಭವಾದ ಹಿನ್ನೆಲೆಯಲ್ಲಿ ವನ್ಯ ಪ್ರಾಣಿಗಳೆಲ್ಲ ಈಗ ನಾಡಿಗೆ(ಜನವಸತಿಗೆ) ಲಗ್ಗೆ ಇಟ್ಟಿವೆ ! ಅವುಗಳಿಗೂ ಬದುಕುವ ಹಕ್ಕು ಇದೆಯಲ್ಲ? ಈ ನೆಲ, ಕಾಡು, ಪರಿಸರ ಎಲ್ಲವೂ ಅವುಗಳ ವಾಸಸ್ಥಾನಕ್ಕಾಗಿಯೇ ಇವೆ. ಮನುಷ್ಯನ ದುರಾಸೆಯೇ ಇದಕ್ಕೆ ಕಾರಣ ಎನ್ನುವುದು !! ನ್ಯಾಯಾಲಯ ಕೂಡ, ಕೇವಲ ಭಾರತದ್ದಲ್ಲ, ವಿಶ್ವದ ಎಲ್ಲ ನ್ಯಾಯಾಲಯಗಳೂ ಕೂಡ ಪ್ರಾಣಿಗಳ ಸಂರಕ್ಷಣೆಗೆ, ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಿವೆ. ಆದರೆ ಜನಸಾಮಾನ್ಯರ ಪ್ರಶ್ನೆ, ಯಾರದ್ದೋ ಧೋರಣೆಗೆ, ಯಾವುದೋ ಯೋಜನೆಗಳಿಗೆ, ತಪ್ಪು ನೀತಿ ನಿರ್ಧಾರಗಳಿಂದ ಕಾಡು ಕಡಿಮೆಯಾಗಿ ಪ್ರಾಣಿಗಳು ಜನವಸತಿಯತ್ತ ನುಗ್ಗಿದರೆ ಜನಕ್ಕಿಂತ ಪ್ರಾಣಿಗಳ ಜೀವ ಹೆಚ್ಚಾಯಿತೇ ಎನ್ನುವುದು? ಈ ಪ್ರಶ್ನೆಗೆ ಉತ್ತರ ನೀಡಬೇಕಾದವರು ಯಾರು? ಇದಕ್ಕೆ ಪರಿಹಾರ ಏನು? ಅರಣ್ಯ ಇಲಾಖೆಯ ಕಾಯ್ದೆ ಕಟ್ಟಳೆಗಳು, ಸತ್ತ ನಂತರ ಪರಿಹಾರ, ನಷ್ಟಕ್ಕೆ ಪರಿಹಾರ ಎನ್ನುವುದಾದರೆ ಅವುಗಳಿಂದ ರಕ್ಷಣೆಯ ಕ್ರಮವೇನು ಎನ್ನುವ ಯೋಚನೆ ಬಹುಶಃ ಹೊಳೆಯುತ್ತಿಲ್ಲವೇನೋ? ಆನೆಗಳ ಭ್ರೂಣ ಹತ್ಯೆ, ಸಂತಾನ ಶಕ್ತಿ ಹರಣ, ಇತ್ಯಾದಿ ಯೋಜನೆಗಳೇನೋ ಬಂದವು. ಆದರೆ ಹಾರಾಡುವ ಮಂಗ, ಗರ್ಜಿಸುವ ಚಿರತೆ- ಹುಲಿ, ಘೀಳಿಡುವ ಕಾಡುಕೋಣ, ಕಾಡುಹಂದಿ, ಇವುಗಳ ಉಪಟಳ ನಿಯಂತ್ರಣಕ್ಕೆ ಹತ್ತಾರು ಉಚಿತ ಸಲಹೆ ಬಂದರೂ ಕೂಡ, ತಂತಿ ಬೇಲಿ ನಿರ್ಮಿಸಿ, ಎಲೆಕ್ಟ್ರಿಕ್ ಫೆನ್ಸಿಂಗ್ ಮಾಡಿ, ದೊಡ್ಡ ದೊಡ್ಡ ಅಗಲದ ಕಾಲುವೆ ತೋಡಿ ಇತ್ಯಾದಿಗಳೆಲ್ಲ ಖರ್ಚಿನ ಬಾಬತ್ತುಗಳಾಗಿವೆ. ಜನರ ಮೂಲಭೂತ ಸೌಕರ್ಯಗಳಿಗೆ ಒದಗಿಸಲು ಹಣವಿಲ್ಲದ ಈ ಸ್ಥಿತಿಯಲ್ಲಿ ಕಾಡು ಪ್ರಾಣಿಗಳ ನಿಯಂತ್ರಣ ಮತ್ತು ಸಂರಕ್ಷಣೆಗೆ ಆದಾಯವೆಲ್ಲಿ? ಇಷ್ಟಕ್ಕೂ ಇಡೀ ರಾಷ್ಟ್ರ ನಿಂತಿರುವುದು ಮತದಾರ ಮತ್ತು ಚುನಾವಣೆಯ ಹಿನ್ನೆಲೆಯಲ್ಲಿ. ಹಾಗಾಗಿ ಪ್ರಾಣಿಗಳೇನೂ ಮತದಾರರಲ್ಲವಲ್ಲ !? ಆನೆಗಳ ನಿಯಂತ್ರಣಕ್ಕೆ ಈಗ ಟಾಸ್ಕ್ಫೋರ್ಸ್ ರಚನೆಯಾಗುತ್ತಿದೆ. ಈ ಟಾಸ್ಕ್ಫೋರ್ಸ್ ಕೂಡ ಕಾಡಾನೆ ನಿಯಂತ್ರಿಸಲು
ಬಿಳಿಯಾನೆ’ಯಾಗುತ್ತದೆಯೇ ವಿನಾ, ಇದರಿಂದ ಇನ್ನೇನೂ ಆಗದು. ಹದ್ದುಬಸ್ತು ಇಡಲು ಸಿಬ್ಬಂದಿಯಿಂದ ಸಾಧ್ಯವೇ ಎನ್ನುವ ಪ್ರಶ್ನೆ.
ಶಾಸಕ ಕುಮಾರಸ್ವಾಮಿಯ ಮೇಲಿನ ಹಲ್ಲೆ ರಾಜಕೀಯ ತಿರುವು ಪಡೆದುಕೊಳ್ಳುವುದರ ಜೊತೆಗೆ, ಉಳಿದ ಸಮಸ್ಯೆಗಳಿಗೂ ಪರಿಹಾರ ಬೇಕಿದ್ದರೆ ಶಾಸಕರ ಮೇಲೆ ಹಲ್ಲೆ ಮಾಡಿ ಎನ್ನುವ ಉತ್ತೇಜನವನ್ನು ಪರೋಕ್ಷವಾಗಿ ನೀಡಿದಂತಾದೀತೇನೋ? ಕುಮಾರಸ್ವಾಮಿ ಸ್ವಭಾವ ಮತ್ತು ಅವರ ಗುಣಧರ್ಮ, ಜನರೊಟ್ಟಿಗೆ ಬೆರೆಯುವ ರೀತಿ ಎಲ್ಲವೂ ಶ್ಲಾಘನಾರ್ಹವೇ. ಸರಳ, ಸಜ್ಜನಿಕೆ ಎಲ್ಲವೂ ಸರಿಯೇ. ಟೀಕೆ ಟಿಪ್ಪಣಿಗಳಿಲ್ಲ. ಆದರೆ ಅಂಥವರ ಮೇಲೆಯೇ ಜನಾಕ್ರೋಶ ಆರಂಭವಾಯಿತೇ? ಎನ್ನುವುದು ಆಶ್ಚರ್ಯ. ಅವರೇ ಹೇಳಿಕೊಂಡಂತೆ, ನಾನು ಜನರೊಟ್ಟಿಗೆ ಇರುವವ, ಅಲ್ಲಿಯೇ ಇರಬೇಕಿತ್ತು…
ಇಷ್ಟಕ್ಕೂ ಅರಣ್ಯದಂಚಿನ ಗ್ರಾಮಗಳ ಜನ ಬರೀ ಕಾಡು ಪ್ರಾಣಿಗಳಿಂದಷ್ಟೇ ಅಲ್ಲ. ಸರ್ಕಾರದ ನೀತಿ ಧೋರಣೆಗಳಿಂದಲೇ ಆಕ್ರೋಶಿತರಾಗಿದ್ದಾರೆ. ಏಕೆಂದರೆ ಅವರ ಸಾಗುವಳಿ, ಕೃಷಿಭೂಮಿ, ಮೂಲಭೂತ ಸೌಕರ್ಯ, ಬದುಕಿಗೆ ಪೂರಕವಾದ ಯಾವುದೇ ಕೆಲಸ ಕಾರ್ಯ ಸರ್ಕಾರದಿಂದ ಆಗಿಲ್ಲ. ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ, ಹುಲಿ-ಆನೆ ಕಾಡಿಡಾರ್ ಇತ್ಯಾದಿಗಳಿಗಾಗಿ ತೆರವು ಮಾಡುವ ಜನರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲಾದೀತೇ? ಅವರ ಬದುಕಿಗೆ ನೆರವು ದೊರಕೀತೇ? ಅಸಾಧ್ಯವಾದ, ದೂರದೃಷ್ಟಿಯಿಲ್ಲದ ಯೋಜನೆಗಳಿಂದ ಕಾಡು, ಮೇಡು, ಪ್ರಾಣಿ, ಪರಿಸರ ನಾಶವಾಯಿತು. ಹಾಗೆಯೇ ಜನರ ಬದಕೂ ಕೂಡ ಜೀವಚ್ಛವವಾಗಿದೆ. ಜನಾಕ್ರೋಶ ಮಡುಗಟ್ಟಿದೆ. ಇದನ್ನು ಅರ್ಥ ಮಾಡಿಕೊಳ್ಳುವ, ಕೇಳುವ ಕಿವಿ, ಕಣ್ಣು, ಮನಸ್ಸುಗಳಿಲ್ಲ.