ದಾವಣಗೆರೆ: ಆಪರೇಷನ್ ಕಮಲ ಅನ್ನೋದು ಮೂರ್ಖತನದ ಪರಮಾವಧಿ, ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಇಂತಹ ಗಿಮಿಕ್ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಯಾರೂ ಬೀಳಿಸಲ್ಲ, ಅವರಾಗೇ ಅವರ ಸರ್ಕಾರ ಬೀಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ್, ಶಾಮನೂರು ಶಿವಶಂಕರಪ್ಪ, ರಾಯರೆಡ್ಡಿ ಅವ್ರೇ ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಸಿಎಂ ಗಾದಿಗೆ ಕಿತ್ತಾಡ್ತಿದ್ದಾರೆ. ಸಿದ್ದು ಗುಂಪು ಒಂದ್ ಕಡೆ ಸಭೆ ಮಾಡುತ್ತೆ. ಡಿಕೆಶಿ ಗುಂಪು ಮತ್ತೊಂದು ಕಡೆ ಸಭೆ ಮಾಡ್ತಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಅವರೇ ಕಿತ್ತಾಡಿಕೊಂಡು ಅಧಿಕಾರ ಕಳೆದುಕೊಳ್ತಾರೆ ಎಂದು ಆರೋಪಿಸಿದರು.
ಅಪರೇಷನ್ ಕಮಲ ಮಾಡಬೇಕು ಅಂದರೆ ೯೦ ಜನ ಶಾಸಕರುಗಳನ್ನು ಅಪರೇಷನ್ ಮಾಡಬೇಕು. ಅವ್ರಿಗೆ ಯಾರು ದುಡ್ಡು ಕೊಟ್ಟು ಕರೆದುಕೊಂಡು ಬರ್ತಾರೆ. ೩ ಸಾವಿರ ಕೋಟಿ ಬಂಡವಾಳ ಹಾಕಿ ಬಿಜೆಪಿಲೀ ಯಾರೂ ಸಿಎಂ ಆಗಬೇಕು ಅಂತ ಇಲ್ಲ. ಬಿಜೆಪಿಲೀ ಯಾರೂ ಸಿಎಂ ಆಗಬೇಕು ಎಂದು ಪ್ರಯತ್ನ ಪಡುತ್ತಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಭಾಗ್ಯಗಳಿಗೆ ೬೫-೭೦ ಸಾವಿರ ಕೋಟಿ ಸಾಲ ಮಾಡ್ತಿದೆ, ರಾಜ್ಯದಲ್ಲಿ ಅಭಿವೃದ್ಧಿ ಅನ್ನೋದು ಶೂನ್ಯವಾಗಿದೆ. ಸರ್ಕಾರದ ಅಭಿವೃದ್ಧಿ ಶೂನ್ಯ ಮರೆಮಾಚಲು ಆಪರೇಷನ್ ಕಮಲ, ಹುಲಿ ಉಗುರು ಅಂತ ನಾಟಕ ಮಾಡ್ತಿದ್ದಾರೆ ಎಂದು ದೂರಿದರು. ಈ ಬಾರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ರೆ ಸ್ಪರ್ಧಿಸುತ್ತೇನೆ. ಪಕ್ಷ ಬೇರೆಯವರಿಗೆ ಟಿಕೆಟ್ ಕೊಟ್ರು ಸಫೋರ್ಟ್ ಮಾಡ್ತಿನಿ. ಯಾರಿಗೆ, ಯಾವುದೇ ಜಾತಿ ಅವ್ರಿಗೆ ಟಿಕೆಟ್ ಕೊಟ್ರು ಸಪೋರ್ಟ್ ಮಾಡ್ತಿವಿ. ಆದರೆ, ಹಾವೇರಿ-ಗದಗ ಜಿಲ್ಲೆಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದರು. ಈಶ್ವರಪ್ಪ ಪುತ್ರ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಈಶ್ವರಪ್ಪ ಪುತ್ರ ಹಾವೇರಿಗೆ ಬಂದರೆ ಗೆಲ್ಲೋದು ಕಷ್ಟ. ಪರೋಕ್ಷವಾಗಿ ಕೆ.ಎಸ್.ಈಶ್ವರಪ್ಪ ಪುತ್ರನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.