ಕಾಂಗ್ರೆಸ್ ಸಮಾವೇಶದ ಕಸ, ಬಿಜೆಪಿಯಿಂದ ಸ್ವಚ್ಛ ಭಾರತ್

ರಾಮುಲು
Advertisement

ಬಳ್ಳಾರಿ: ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಿಜೆಪಿ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರು ಭಾನುವಾರ ಸ್ವಚ್ಛಭಾರತ್ ನಡೆಸಿದರು…
ಶನಿವಾರ ನಡೆದ ಕಾಂಗ್ರೆಸ್ ಸಮಾವೇಶದಿಂದ ಮೈದಾನದಲ್ಲಿ ಸಂಗ್ರಹಗೊಂಡಿದ್ದ ಕಸ, ಕಡ್ಡಿ ತ್ಯಾಜ್ಯವನ್ನು ಬಿಜೆಪಿ ನಾಯಕರು ಸ್ವಚ್ಛಗೊಳಿಸಿದರು. ಸಚಿವ ಬಿ. ಶ್ರೀರಾಮುಲು, ಶಾಸಕ ಜಿ. ಸೋಮಶೇಖರರೆಡ್ಡಿ ಸಹ ಪೊರಕೆ ಹಿಡಿದು ಮೈದಾನ ಗುಡಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಸುಗುಣಾ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಪಾಲಿಕೆ ಸದಸ್ಯರಾದ ಅಶೋಕ್ ಕುಮಾರ್, ಶ್ರೀನಿವಾಸ್ ಮೋತ್ಕರ್, ಮಾಧ್ಯಮ ಸಹ ಸಂಚಾಲಕ ರಾಜೀವ್ ತೊಗರಿ ಸೇರಿ ಕಾರ್ಯಕರ್ತರೆಲ್ಲರೂ ಪೊರಕೆ ಹಿಡಿದು ಸಾಥ್ ನೀಡಿದರು.
ರಾಹುಲ್ ಗಾಂಧಿ ಸಮಾವೇಶದಿಂದ ಮೈದಾನ ತುಂಬೆಲ್ಲ ಎಲ್ಲೆಂದರಲ್ಲಿ ಕುಡಿವ ನೀರಿನ ಬಾಟಲ್, ಪೇಪರ್, ಉಪಹಾರದ ಬಾಕ್ಸ್‌ಗಳು ಬಿದ್ದಿದ್ದವು. ಬೆಳಗಿನ ಜಾವ ವಾಯು ವಿಹಾರಕ್ಕೆಂದು ಮೈದಾನಕ್ಕೆ ಬಂದಿದ್ದ ಜನರು ಕಸ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ಟ್ರ್ಯಾಕ್ಟರ್ ತುಂಬಿಸಿ ಹೊರಹಾಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಕಾಂಗ್ರೆಸ್ ಸಂಸ್ಕೃತಿಯೇ ದೇಶವನ್ನು ಅಸ್ವಚ್ಛ ಮಾಡುವುದಾಗಿದೆ. ಪ್ರಧಾನಿ ಮೋದಿ ಅವರು ಸ್ವಚ್ಛತೆಗೆ ಒತ್ತು ನೀಡಿದ ಮೇಲೆ ಸ್ವಚ್ಛ ಭಾರತವಾಗುತ್ತಿದೆ ಎಂಬುದನ್ನು ಇಂದಿನ ನಮ್ಮ ಕಾರ್ಯದಿಂದಲೂ ತೋರಿಸಿದ್ದೇವೆ ಎಂದರು.
ಸೋಮಶೇಖರ ರೆಡ್ಡಿ ಮಾತನಾಡಿ. ರೆಡ್ಡಿಗಳ ಮೇಲೆ ಸಿದ್ದರಾಮಯ್ಯಗೆ ಪ್ರೀತಿ ಜಾಸ್ತಿ. ಅದಕ್ಕೆ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಶ್ರೀರಾಮುಲು