ಕಾಂಗ್ರೆಸ್ ಶಾಸಕರ ಅನರ್ಹತೆ ಪ್ರಸ್ತಾವನೆ ತಿರಸ್ಕಾರ

Advertisement

ಪಣಜಿ: ಕಲಂಗುಟ್ ಶಾಸಕ ಮೈಕಲ್ ಲೋಬೋ ಮತ್ತು ಮಡಗಾಂವ್ ಶಾಸಕ ದಿಗಂಬರ ಕಾಮತ್ ವಿರುದ್ಧ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಸಲ್ಲಿಸಿದ್ದ ಅನರ್ಹತೆ ಅರ್ಜಿಯನ್ನು ಗೋವಾ ವಿಧಾನಸಭಾಧ್ಯಕ್ಷ ರಮೇಶ ತವಡ್ಕರ್ ತಿರಸ್ಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ೮ ಜನ ಕಾಂಗ್ರೆಸ್ ಬಂಡಾಯ ಶಾಸಕರ ವಿರುದ್ಧದ ಎರಡನೇ ಅರ್ಜಿಯ ಪರಿಣಾಮ ಏನಾಗಬಹುದೆಂಬುದು ಕುತೂಹಲಕಾರಿಯಾಗಿದೆ.
ಜುಲೈ ೨೦೨೨ ರಲ್ಲಿ ಮುಂಗಾರು ಅಧಿವೇಶನಕ್ಕೆ ಒಂದು ದಿನ ಮೊದಲು ಪ್ರತ್ಯೇಕ ಗುಂಪು ರಚಿಸುವ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿದ್ದರು. ನಂತರ ಕಾಂಗ್ರೆಸ್ ಸಭೆಗೂ ಲೋಬೋ ಹಾಗೂ ಕಾಮತ್ ಗೈರು ಹಾಜರಾಗಿದ್ದರು. ಇದಾದ ನಂತರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಅವರು ದಿಗಂಬರ ಕಾಮತ್ ಮತ್ತು ಮೈಕೆಲ್ ಲೋಬೋ ವಿರುದ್ಧ ಅನರ್ಹತೆಗಾಗಿ ಸ್ಪೀಕರ್ ರಮೇಶ್ ತಾವಡ್ಕರ್ ಅವರ ಮುಂದೆ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪವನ್ನು ಸಲ್ಲಿಸಿದರು.
ಈ ಬಗ್ಗೆ ಎರಡು ಕಡೆಗಳಲ್ಲಿ ಹೈಕೋಟ್‌ನಲ್ಲಿ ವಾದ ಪ್ರತಿವಾದಗಳು ನಡೆದವು. ಪಾಟ್ಕರ್ ಅವರ ಪರ ಅಡ್ವಕೇಟ್ ಅಭಿಜಿತ್ ಗೋಸಾವಿ ವಾದ ಮಂಡಿಸಿದರೆ, ಲೋಬೋ ಮತ್ತು ಕಾಮತ್ ಪರ ಪರಾಗ್ ರಾವ್ ಪ್ರಕರಣದ ವಾದ ಮಂಡಿಸಿದ್ದರು. ಅಂತಿಮ ವಿಚಾರಣೆ ಬಳಿಕ ಸ್ಪೀಕರ್ ನಿರ್ಧಾರವನ್ನು ಕಾಯ್ದಿರಿಸಿದ್ದರು.
ಅಂತಿಮವಾಗಿ ತೀರ್ಪು ನೀಡುವಾಗ ಸ್ಪೀಕರ್ ಅಮಿತ್ ಪಾಟ್ಕರ್ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇದು ಕಾಮತ್ ಮತ್ತು ಲೋಬೋ ಅವರಿಗೆ ದೊಡ್ಡ ಸಮಾಧಾನ ತಂದಿದೆ.
೮ ಬಂಡಾಯ ಶಾಸಕರ ವಿರುದ್ಧ ಅಮಿತ್ ಪಾಟ್ಕರ್ ಮತ್ತು ಗಿರೀಶ ಚೋಡಣಕರ್ ಅವರು ಎರಡು ಪ್ರತ್ಯೇಕ ಅನರ್ಹತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ೮ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯ ವಿಚಾರಣೆಯನ್ನು ಬೇಗ ಪೂರ್ಣಗೊಳಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸ್ಪೀಕರ್‌ಗೆ ಸೂಚಿಸಿತ್ತು.