ಹುಬ್ಬಳ್ಳಿ: ವಿಧಾನಸೌಧವನ್ನು ಸಂಪೂರ್ಣ ರಾಡಿ ಮಾಡಿ ಹೋಗಿದ್ದು ಕಾಂಗ್ರೆಸ್. ಅದನು ಸರಿಪಡಿಸಲು ನಮಗೆ ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಗುರುವಾರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನೀಡಿರುವ ವಿಧಾನಸೌಧಕ್ಕೆ ಬಿಜೆಪಿಯಿಂದ ಕಳಂಕ ಅಂಟಿಕೊಂಡಿದ್ದು ಗೊಂಜಲು ಹಾಕಿ ಶುದ್ಧಗೊಳಿಸುತ್ತೇವೆ ಎಂಬ ಹೇಳಿಕೆ ಪ್ರತಿಕ್ರಿಯಿಸಿ, ಆರ್ಕಾವತಿ ಹಗರಣದಲ್ಲಿ ಜಮೀನು ಡಿನೋಟಿಫಿಕೇಶನ್‌ನಲ್ಲಿ ೯೦೦ ಕೋಟಿ ಹಗರಣ ಮಾಡಿ ರಾಜ್ಯದಲ್ಲಿ ರಾಡಿ ಮಾಡಿದವರು ಕಾಂಗ್ರೆಸ್. ವಿರೋಧ ಪಕ್ಷದ ನಾಯಕನಾಗಿದ್ದಾಗ ಎಲ್ಲವನ್ನು ಹೊರ ತಂದಿದ್ದೇನೆ. ಇಷ್ಟೆಲ್ಲಾ ಆದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಇದರ ಬಗ್ಗೆ ಮಾತನಾಡುವ ನೈತಿಕ ಇಲ್ಲ ಎಂದು ಹರಿಹಾಯ್ದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನವರು ಹಲವು ಗಿಮಿಕ್‌ಗಳನ್ನು ಮಾಡುತ್ತಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹಾಗೂ ರಮೇಶ ಜಾರಕಿಹೊಳಿ ಅವರ ವಿರುದ್ಧ ಚುನಾವಣೆ ಅಕ್ರಮದ ಕುರಿತು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಒಂದಾಗಿದೆ. ದೂರು ದಾಖಲಿಸುವ ಮೂಲಕ ಪ್ರಚಾರ ತೆಗೆದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಮೇಲೆ ಹಾಗೂ ರಾಜ್ಯಾಧ್ಯಕ್ಷರ ಮೇಲೆ ದೂರು ನೀಡುತ್ತಾರೆ ಎಂದರೆ, ಯಾವ ರೀತಿ ಕೀಳು ಮಟ್ಟಕ್ಕೆ ಕಾಂಗ್ರಸ್‌ನವರು ಹೋಗಿದ್ದಾರೆ ಎನ್ನುವುದು ಸಾಬೀತಾಗುತ್ತದೆ. ಅವರು ಈ ಹಿಂದೆ ಯಾವ ರೀತಿ ಚುನಾವಣೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗಲೇ ಅವರು ಬಹಿರಂಗವಾಗಿ ಕುಕ್ಕರ್ ಹಂಚುವ ಮೂಲಕ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಬೇರೆಯವರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಜ.೨೭ ರ ರಾತ್ರಿ ಹುಬ್ಬಳ್ಳಿಗೆ ಬರುತ್ತಾರೆ. ಜ.೨೮ ರಂದು ಬಿವಿಬಿ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅದಾದ ಬಳಿಕ ಧಾರವಾಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕುಂದಗೋಳದಲ್ಲಿ ರೋಡ್ ಶೋ ಮಾಡಲಿದ್ದಾರೆ ಎಂದು ಹೇಳಿದರು