ಬಳ್ಳಾರಿ:ಭಾರತ್ ಜೋಡೋ ಯಾತ್ರೆಯ ಭಾಗವಾಗಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಏಕೈಕ ಬಹಿರಂಗ ಸಮಾವೇಶಕ್ಕೆ ವೇದಿಕೆ ನಿರ್ಮಿಸುವ ಮುನ್ನ ಜಿಲ್ಲಾ ಕಾಂಗ್ರೆಸ್ ನಿಂದ ಇಂದು ಸಮಾವೇಶ ನಡೆಯುವ ಎಕ್ಸ್ ಮುನ್ಸಿಪಲ್ ಮೈದಾನದಲ್ಲಿ ಸುದರ್ಶನ ಹೋಮ ಕೈಗೊಳ್ಳಲಾಯಿತು.
ಮೇಯರ್ ರಾಜೇಶ್ವರಿ ಸಬ್ಬರಾಯುಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್. ಆಂಜನೇಯಲು, ಮುಖಂಡರಾದ ವಿಷ್ಣು ಬೋಯಪಾಟಿ, ಕಲ್ಕಂಬ ಪಂಪಾಪತಿ, ಮುಂಡ್ರಿಗಿ ನಾಗರಾಜ, ವೆಂಕಟೇಶ್ ಹೆಗಡೆ, ಸಂಗನಕಲ್ಲು ವಿಜಯಕುಮಾರ್, ಕೊಳಗಲ್ ಅಂಜಿನಿ ಸಮ್ಮುಖದಲ್ಲಿ ಹೋಮ ಕೈಗೊಳ್ಳಲಾಯಿತು.
ಭಾರತ್ ಜೋಡೋ ಯಾತ್ರೆ ಈಗಾಗಲೇ ಕರ್ನಾಟಕ ಪ್ರವೇಶ ಮಾಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುವ ಯಾತ್ರೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶಕ್ಕೆ ಸಾಕ್ಷಿ ಆಗಲಿದೆ. ರಾಜ್ಯದ ಯಾವುದೇ ಭಾಗದಲ್ಲಿ ಬಹಿರಂಗ ಸಮಾವೇಶ ಇರುವುದಿಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ಅವರು ಜಯ ಸಾಧಿಸಿದ್ದ ಹಿನ್ನೆಲೆಯಲ್ಲಿ ಇಲ್ಲಿಯೇ ಸಮಾವೇಶ ಕೈಗೊಳ್ಳಬೇಕು ಎಂಬ ಆಶಯ ರಾಹುಲ್ ಗಾಂಧಿ ಅವರದ್ದು. ಈ ಕಾರಣಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವನ್ನು ಇಂದು ಹೋಮದ ಮೂಲಕ ಆರಂಭಿಸಲಾಯಿತು. ಅಕ್ಟೋಬರ್ 14 ಅಥವಾ 15ರಂದು ಸಮಾವೇಶ ನಡೆಯುವ ಸಾಧ್ಯತೆ ಇದೆ. ನಾಗರಾಜ ಶಾಸ್ತ್ರಿ ಮತ್ತವರ ತಂಡ ಹೋಮ ನೆರವೇರಿಸಿದರು.