ದಾವಣಗೆರೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಭಾರತ್ ಜೋಡೋ ಪಾದಯಾತ್ರೆಯ ರೀತಿಯಲ್ಲೇ ರಾಜ್ಯ ನಾಯಕರು ಮೂರು ಪ್ರತ್ಯೇಕ ಯಾತ್ರೆಗಳನ್ನು ನಡೆಸಲಿದ್ದಾರೆ ಮುಂದಿನ ತಿಂಗಳಿಂದ ಪ್ರಾಂತ್ಯವಾರು ಯಾತ್ರೆ ಆರಂಭವಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಭಾನುವಾರ ಬಾಪೂಜಿ ಅತಿಥಿ ಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯದ ಮೂರೂ ವಿಭಾಗಗಳಲ್ಲಿ ಯಾತ್ರೆ ನಡೆಯಲಿದೆ. ಪ್ರತಿಯೊಂದು ಕ್ಷೇತ್ರಕ್ಕೆ ಯಾತ್ರೆಗಳು ಸಂಪರ್ಕಿಸಲಿವೆ. ಮುಂಬರುವ ದಿನಗಳಲ್ಲಿ ಯಾತ್ರೆಗಳ ಕುರಿತು ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು ಎಂದರು.
ಕರ್ನಾಟಕ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತಿವೆ. ಇದರಿಂದಾಗಿ ಐಟಿಬಿಟಿ ಸಂಸ್ಥೆಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಇಲ್ಲಿನ ವಿದ್ಯಾವಂತ ಯುವಕರಿಗೆ ಕೆಲಸ ಸಿಗುತ್ತಿಲ್ಲ. ನಿರುದ್ಯೋಗಿಗಳಾಗುತ್ತಿದ್ದಾರೆ. ಬೆಂಗಳೂರು ಐಟಿಬಿಟಿಗೆ ಹೆಸರುವಾಸಿ. ಇಲ್ಲಿಗೆ ಬಂದ ಕಂಪೆನಿಗಳು ಹೈದರಾಬಾದ್, ಚೆನ್ನೈ ಗೆ ಹೋಗುತ್ತಿವೆ. ಇದರಿಂದಾಗಿ ಆರ್ಥಿಕವಾಗಿ ಹೊಡೆತ ಬೀಳುತ್ತಿದೆ ಎಂದು ಆರೋಪಿಸಿದರು.