ರಾಮನಗರ: ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತ ಪಕ್ಷ ಕಾಂಗ್ರೆಸ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ “ಪಂಚಗ್ಯಾರಂಟಿಗಳ ಕಾಂಗ್ರೆಸ್ ಸರಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು; ʼಕಾಸಿಗಾಗಿ ಪೋಸ್ಟಿಂಗ್!!ʼ ಎಂದು ಬರೆದಿದ್ದಾರೆ.
ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ದಂಧೆಗೆ ʼಹುಂಡಿʼ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಟಾಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ!! ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? CMO ಅಂದರೆ C M of Karnataka ವೋ ಅಥವಾ Corruption of Karnataka ವೋ?? 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ(!?) ಯಾವುದು? ಮೂರೊಪ್ಪತ್ತೂ ಶಿಫಾರಸು ಪತ್ರಗಳನ್ನು ಟೈಪಿಸಿ, ಸಿಎಂ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಧಿಕಾರಿಗಳು ತಲ್ಲೀನರಾಗಿದ್ದಾರೆನ್ನುವುದು ಖಾತ್ರಿ. ವರ್ಗಾವರ್ಗಿಯ ಪೇಮೆಂಟ್ ಕೋಟಾ ನಿಯಂತ್ರಣ ಮಾಡುತ್ತಿರುವ ಆ ʼರಿಮೋಟ್ ಕಂಟ್ರೋಲ್ʼ ಬಗ್ಗೆ ಜನಕ್ಕೆ ಅರ್ಥವಾಗುತ್ತಿದೆ. ಈ ಕಾಂಗ್ರೆಸ್ ಸರಕಾರ ಬಂದ ಮೊದಲ ದಿನದಿಂದಲೇ ʼಕಾಸಿಗಾಗಿ ಪೋಸ್ಟಿಂಗ್ʼ ದಂಧೆ ಶುರುವಾಗಿದೆ. ʼಸರಕಾರದ ಕೆಲಸ ದೇವರ ಕೆಲಸʼ ಎನ್ನುವುದರ ಬದಲು ʼಬಂದಿದ್ದನ್ನು ಬಿಡದೇ ಬಾಚಿಕೋ..ʼ ಎಂಬುದು ಈ ಸರಕಾರದ ಧ್ಯೇಯನೀತಿ ಆಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ, ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ” ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.