ನಮ್ಮ ಸಂಸ್ಥೆಯ ಮೂಲ ಉದ್ದೇಶವೇ ಶಿಕ್ಷಕರಿಗೆ ತರಬೇತಿ ನೀಡುವುದು. ಅವರಿಗೆ ಹೊಸ ಶತಮಾನದ ಕೌಶಲ್ಯಗಳನ್ನು ಕಲಿಸಿ, ತರಗತಿಗೆ ತಯಾರು ಮಾಡುವುದು ನಮ್ಮ ಮೂಲ ಕೆಲಸವಾಗಿತ್ತು. ಆಗ ಸಂಸ್ಥೆ ಹೊಸದಾಗಿದ್ದರಿಂದ ಹೆಚ್ಚಿನ ತರಬೇತಿಗಳು ಬರುತ್ತಿರಲಿಲ್ಲ. ಅದು ಹೊಸ ವಿಷಯಗಳನ್ನು ತಿಳಿಯುವ, ಅದಕ್ಕೆ ಸರಿಯಾಗಿ ಪಾವರ್‌ಪಾಯಿಂಟ್‌ಗಳನ್ನು ಮಾಡುವ, ಚಟುವಟಿಕೆಗಳನ್ನು ಸಿದ್ಧಪಡಿಸಿಕೊಳ್ಳುವ ಸಮಯ. ಉತ್ಸಾಹದಿಂದ ನೂರಾರು ಘಟಕಗಳನ್ನು ಸಿದ್ಧಮಾಡಿಟ್ಟುಕೊಂಡೆವು. ಆಗೊಂದು ಅನಿರೀಕ್ಷಿತವಾದ ಪ್ರಸಂಗವೊಂದು ಜರುಗಿ ನಮ್ಮ ಕಾರ್ಯಕ್ಕೊಂದು ಹೊಸ ದಿಕ್ಕು ನೀಡಿತು.
ಒಂದು ದಿನ ನಮ್ಮ ಕಚೇರಿಗೆ ವೈದ್ಯರೊಬ್ಬರು ಬಂದರು. ಅವರು ಕೊಯಿಮತ್ತೂರಿನವರು. ಅವರ ಹೆಂಡತಿಯೂ ವೈದ್ಯೆ. ಅವರಿಗೆ ಒಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕೆಂಬ ಯೋಚನೆ ಬಂದು, ತಮ್ಮದೇ ಎಂಟು ಎಕರೆಯಷ್ಟು ತೆಂಗಿನತೋಟವನ್ನು ತೆಗೆದು ಶಾಲೆಯನ್ನು ನಿರ್ಮಾಣ ಮಾಡಿದ್ದರು. ಆಗಲೇ ಅವರು ಸುಮಾರು ಆರು ಕೋಟಿ ರೂಪಾಯಿಗಳಷ್ಟು ಹಣವನ್ನು ಶಾಲೆಗೆ ಹಾಕಿದ್ದರು. ಆದರೆ ಶಾಲೆ ಬೆಳೆಯುವ ಲಕ್ಷಣ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕೇವಲ ಎಂಭತ್ತು! ಯಾರ ಮೂಲಕವೋ ನನ್ನ ಬಗ್ಗೆ ಕೇಳಿ ತಿಳಿದುಕೊಂಡು ನನ್ನಲ್ಲಿಗೆ ಬಂದಿದ್ದರು. ತಮ್ಮ ಪ್ರಯತ್ನಗಳನ್ನೆಲ್ಲ ವಿವರಿಸಿ, ಶಾಲೆ ಯಾಕೆ ಬೆಳೆಯುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ತಮ್ಮ ಕೊರಗನ್ನು ಹೇಳಿಕೊಂಡರು. ನಾನು ಅವರಿಗೆ ಹೇಳಿದೆ, “ಇಲ್ಲಿ ಕುಳಿತುಕೊಂಡು ಶಾಲೆಯ ಬೆಳವಣಿಗೆಯ ಬಗ್ಗೆ ಮಾತನಾಡಲಾರೆ. ಮುಂದಿನ ವಾರ ಅಲ್ಲಿಗೆ ಬಂದು ಶಾಲೆಯನ್ನು ನೋಡಿ, ಏನು ಮಾಡಬಹುದು ಎಂಬುದನ್ನು ಹೇಳುತ್ತೇನೆ”. ಅವರೂ ಒಪ್ಪಿದರು. ಮರುವಾರ ಕೊಯಿಮತ್ತೂರಿಗೆ ಹೋಗಿ ಎರಡು ದಿನವಿದ್ದು ಶಾಲೆಯ ಆವರಣ, ವ್ಯವಸ್ಥೆ, ಶಿಕ್ಷಕರ ತರಗತಿಗಳನ್ನು ಕೂಲಂಕಷವಾಗಿ ನೋಡಿ ವಿಷಯಗಳನ್ನು ಬರೆದಿಟ್ಟುಕೊಂಡೆ. ಮೂರನೆಯ ದಿನ ಶಾಲೆಯ ಚೇರಮನ್‌ರನ್ನು ಕಂಡಾಗ, “ಸರ್, ಈ ಶಾಲೆ ಬೆಳೆಯಲಾರದು. ಹೀಗೆಯೇ ಮುಂದುವರೆದರೆ ಈಗಿರುವಷ್ಟು ವಿದ್ಯಾರ್ಥಿಗಳೂ ಉಳಿಯಲಾರರು” ಎಂದೆ. ಅವರಿಗೆ ಗಾಬರಿಯಾಯಿತು. “ಅಲ್ಲ, ನಾನು ಅಷ್ಟು ಖರ್ಚು ಮಾಡಿ ವಿಶಾಲವಾದ ಕಟ್ಟಡ, ಪ್ರಯೋಗಶಾಲೆಗಳು, ಹಾಸ್ಟೆಲ್‌ಗಳು, ಈಜುಗೊಳ ಇವನ್ನೆಲ್ಲ ವ್ಯವಸ್ಥಿತವಾಗಿ ಮಾಡಿದ್ದೇನೆ. ತಾವು ನೋಡಿದ್ದಿರಿ, ಆಡಳಿತ ಕಟ್ಟಡ ಎಷ್ಟು ಸುಂದರವಾಗಿದೆ. ನೆಲಕ್ಕೆ ಇಟ್ಯಾಲಿಯನ್ ಮಾರ್ಬಲ್ ಹಾಕಿಸಿದ್ದೇನೆ” ಎಂದು ಚಿಂತೆಯಿಂದ ನುಡಿದರು. “ಸರ್, ಪಾಲಕರು ಶಾಲೆಯ ಹಾಸುಗಲ್ಲುಗಳನ್ನು ನೋಡಲು ಬರುವುದಿಲ್ಲ. ಸುಂದರವಾದ ಅಮೃತಶಿಲೆಯನ್ನು ನೋಡಬೇಕೆಂದಿದ್ದರೆ ಆಗ್ರಾಕ್ಕೆ ಹೋಗಿ ತಾಜಮಹಲ್ ನೋಡುತ್ತಾರೆ. ನಿಮ್ಮ ಶಾಲೆಗೇಕೆ ಬರುತ್ತಾರೆ? ಅವರು ಬರುವುದು ನಿಮ್ಮ ಶಾಲೆಯಲ್ಲಿ ಒಳ್ಳೆಯ, ಮೌಲ್ಯಯುತವಾದ ಶಿಕ್ಷಣ ದೊರೆಯುತ್ತದೆಂದು. ನಿಮ್ಮ ಶಿಕ್ಷಕರು ಒಳ್ಳೆಯವರಿದ್ದಾರೆ. ಆದರೆ ಪಾಠ ಮಾಡುವ ವಿಧಾನ ತಿಳಿಯದು. ಕೆಲವರಿಗೆ ಸರಿಯಾದ ವಿಷಯಜ್ಞಾನವೇ ಇಲ್ಲ. ನಿಮ್ಮ ಇಂಗ್ಲೀಷ್ ಶಿಕ್ಷಕರಿಗೇ ಇಂಗ್ಲೀಷ್ ಬರುವುದಿಲ್ಲ. ಶಿಕ್ಷಕರು ಸರಿಯಾಗದೆ ಇದ್ದರೆ ಶಾಲೆಗೆ ಮಕ್ಕಳು ಏಕೆ ಬಂದಾರು?” ಎಂದು ವಿವರಿಸಿದೆ. ಅವರು, “ಹಾಗಾದರೆ ನೀವೇ ಏನಾದರೂ ಮಾಡಿ ಶಾಲೆಯನ್ನು ಒಂದು ಹದಕ್ಕೆ ತನ್ನಿ” ಎಂದರು.
ಮುಂದೆ ಒಂದು ಇಡೀ ವರ್ಷ ಆ ಶಾಲೆಯ ಶಿಕ್ಷಕರೊಂದಿಗೆ ಕೆಲಸ ಮಾಡಿದೆವು. ಪ್ರತಿ ಹದಿನೈದು ದಿನಕ್ಕೊಮ್ಮೆ ನಮ್ಮಲ್ಲೊಬ್ಬರು ಅಲ್ಲಿಗೆ ಹೋಗಿ, ಎರಡು ಮೂರು ದಿನವಿದ್ದು, ಪ್ರತಿಯೊಬ್ಬ ಶಿಕ್ಷಕರ ತರಗತಿಯಲ್ಲಿ ಕುಳಿತು, ಅವರ ಲೋಪದೋಷಗಳನ್ನು ಅವರಿಗೆ ತಿಳಿಸಿ, ಸುಧಾರಿಸಲು ಮಾರ್ಗದರ್ಶನ ಮಾಡಿದೆವು. ಅದೊಂದು ನಿರಂತರವಾದ ಕಾರ್ಯ. ಶಿಕ್ಷಕರು ತಮ್ಮ ಕಲಿಕಾವಿಧಾನಗಳನ್ನು ಬದಲಿಸಿಕೊಂಡರು. ಪಾಲಕರೊಡನೆ ಸಂಪರ್ಕ ಸುಧಾರಿಸಿತು. ವರ್ಷ ಮುಗಿಯುವ ಹೊತ್ತಿಗೆ ಶಾಲೆ ಚೆನ್ನಾಗಿದೆಯೆಂಬ ಪ್ರತಿಕ್ರಿಯೆಗಳು ಪಾಲಕರಿಂದ ಬರತೊಡಗಿದವು. ಶಾಲೆಯ ಚೇರಮನ್‌ರಿಗೂ, ಆಡಳಿತವರ್ಗದವರಿಗೂ ತುಂಬ ಸಂತೋಷವಾಗಿತ್ತು. ಮುಂದೆ ಎರಡು ವರ್ಷಗಳಲ್ಲಿ ಶಾಲೆಗೆ ಸಾವಿರದ ಮೂರುನೂರು ಮಕ್ಕಳು ಸೇರಿದರು. ಅವರಲ್ಲಿ ಸುಮಾರು ಆರುನೂರು ಮಕ್ಕಳು ಹಾಸ್ಟೆಲ್‌ನಲ್ಲಿದ್ದರು. ಇಂದು ಆ ಶಾಲೆ ತುಂಬ ಪ್ರಖ್ಯಾತವಾಗಿದೆ. ಅಷ್ಟೇ ಅಲ್ಲ, ಅದರ ಶಾಖೆಗಳು ತಮಿಳುನಾಡಿನ ಪ್ರತಿಯೊಂದು ಮಹಾನಗರಗಳಲ್ಲಿ, ಬೆಂಗಳೂರಿನಲ್ಲಿ ಮತ್ತು ಮಲೇಶಿಯಾದಲ್ಲಿ ಪ್ರಾರಂಭವಾಗಿ ಅವೆಲ್ಲ ತುಂಬ ಊರ್ಜಿತವಾಗಿವೆ.
ಒಂದು ವರ್ಷದ ಕೆಲಸವಾದ ಮೇಲೆ ಚೇರಮನ್‌ರು ನನ್ನನ್ನು ಕರೆದು, “ಸರ್, ನಿಮ್ಮ ಸಂಸ್ಥೆಯಿಂದ ನೀವು ಮತ್ತು ನಿಮ್ಮ ತಂಡದವರು ಇಲ್ಲಿಗೆ ಬಂದು ಇಡೀ ವರ್ಷ ಅಷ್ಟೊಂದು ಕೆಲಸ ಮಾಡಿದ್ದೀರಿ. ಇದುವರೆಗೂ ಹೋಗಿ ಬರುವ ಗಾಡಿ ಖರ್ಚು ಬಿಟ್ಟರೆ ನೀವು ಯಾವ ಶುಲ್ಕವನ್ನೂ ಪಡೆದಿಲ್ಲ. ನಾವು ಎಷ್ಟು ಹಣ ಕೊಡಬೇಕು? ದಯವಿಟ್ಟು ಬಿಲ್ಲು ಕೊಡಿ” ಎಂದರು. ನನಗೆ ಗಾಬರಿಯಾಯಿತು. ಯಾಕೆಂದರೆ ಎಷ್ಟು ಹಣ ಕೇಳಬೇಕೆಂಬುದು ನನಗೆ ತಿಳಿದಿರಲಿಲ್ಲ. ಈ ತರಹ ಸಂಸ್ಥೆಯನ್ನು ಬೆಳೆಸುವ ಕೆಲಸವನ್ನು ಮಾಡಿದ್ದು ಇದೇ ಮೊದಲು. ಮಾಡಿದ ಈ ಕಾರ್ಯಕ್ಕೆ ಎಷ್ಟು ಹಣ ಸರಿಯಾದೀತು ಎಂಬುದು ತಿಳಿಯದೆ, ನನ್ನ ಸಹೋದ್ಯೋಗಿಗಳನ್ನು ಕೇಳಿದೆ. ಈ ವಿಷಯದಲ್ಲಿ ಅವರು ನನಗಿಂತ ಅಜ್ಞಾನಿಗಳಾಗಿದ್ದರು. ಕೊನೆಗೆ ಅಳೆದು, ಸುರಿದು, ಇಡೀ ವರ್ಷದ, ಇಡೀ ತಂಡದ ಕೆಲಸಕ್ಕೆ ಇಪ್ಪತೈದು ಸಾವಿರ ರೂಪಾಯಿಗಳನ್ನು ಕೊಟ್ಟರೆ ಸಾಕು ಎಂದು ಹೇಳಿದೆ. ನನ್ನ ಮಾತನ್ನು ಕೇಳಿ ಚೇರಮನ್ನರು ಗಹಗಹಿಸಿ ನಕ್ಕರು. “ಸರ್, ನಿಮಗೆ ಕೆಲಸ ಮಾಡುವುದು ಚೆನ್ನಾಗಿ ಗೊತ್ತಿದೆ, ಆದರೆ ಹಣ ಕೇಳಲು ಬರುವುದಿಲ್ಲ” ಎಂದು ಬಿಟ್ಟು ಎರಡೂವರೆ ಲಕ್ಷ ರೂಪಾಯಿಗಳಿಗೆ ಚೆಕ್ ಬರೆದುಕೊಟ್ಟರು. ನನಗೆ ಆಶ್ಚರ್ಯ! ನಾವು ಮಾಡಿದ ಕೆಲಸಕ್ಕೆ ಇಷ್ಟೊಂದು ಬೆಲೆ ಇದೆಯೇ ಎನ್ನಿಸಿತ್ತು. ಚೇರಮನ್‌ರು ನನ್ನ ಗೊಂದಲವನ್ನು ಕಂಡು ವಿವರಿಸಿದರು. “ಸರ್, ತಾವು ಮಾಡಿದ ಕಾರ್ಯದಿಂದ ಶಾಲೆಗೆ ಒಳ್ಳೆಯ ಹೆಸರು ಬಂದಿದೆ. ವಿದ್ಯಾರ್ಥಿಗಳ ಸಂಖ್ಯೆ ತುಂಬ ಹೆಚ್ಚಾಗಿದೆ. ನಮ್ಮ ಆದಾಯದಲ್ಲಿ ತುಂಬ ಏರಿಕೆಯಾಗಿದೆ. ನಿಜ ಹೇಳಬೇಕೆಂದರೆ ನಾನು ನಿಮಗೆ ಕೊಟ್ಟ ಹಣದ ಮೂರುಪಟ್ಟು ಕೊಟ್ಟರೂ ಕಡಿಮೆಯೇ. ಮುಂದಿನ ವರ್ಷ ನಾನು ಇನ್ನೂ ಹೆಚ್ಚಿಗೆ ಹಣ ಕೊಡುತ್ತೇನೆ. ನಿಮ್ಮ ಸಂಸ್ಥೆ ನಡೆಸಲು ಹಣ ಬೇಡವೆ? ನಿಮ್ಮಂತಹ ಸಂಸ್ಥೆಗಳಿದ್ದರೆ ತಾನೆ ನಮ್ಮಂತಹ ಅನೇಕ ಸಂಸ್ಥೆಗಳು ಬೆಳೆಯುತ್ತವೆ”. ಅವರ ಮಾತು ನನಗೆ ತೃಪ್ತಿಯನ್ನು ತಂದಿತು.
ನಾವು ವರ್ಷವಿಡೀ ಮಾಡಿದ ಕೆಲಸವನ್ನು ದಾಖಲು ಮಾಡಿದೆವು. ಮತ್ತಾವುದಾದರೂ ಇಂತಹ ಕೆಲಸ ಬಂದರೆ ಅದು ಅನುಕೂಲವಾಗುತ್ತದೆ ಎಂದುಕೊಂಡೆವು. ಅದು ಹಾಗೇ ಆಯಿತು. ನನ್ನ ಸ್ನೇಹಿತರಾದ ಬಾಬು ಧಮ್ಮಣಗಿಯವರು ಬೈಲಹೊಂಗಲದಿಂದ ಬಂದು, ಶಾಲೆ ಕಟ್ಟುವ ತಮ್ಮ ಅಪೇಕ್ಷೆಯನ್ನು ತಿಳಿಸಿದರು. ನಮಗೆ ಈಗ ತಾನೇ ಕೊಯಿಮತ್ತೂರು ಶಾಲೆಯನ್ನು ಬೆಳೆಸಿದ ಕೌಶಲ್ಯ ದೊರಕಿತ್ತಲ್ಲ, ಉತ್ಸಾಹದಿಂದ ಕೆಲಸ ಪ್ರಾರಂಭಿಸಿದೆವು. ಹಿಂದಿನ ಅನುಭವ ಪ್ರಯೋಜನಕ್ಕೆ ಬಂದಿತು. ಶಾಲೆಗೆ ಜಾಗೆ ನೋಡುವುದರಿಂದ ಹಿಡಿದು, ವಾಸ್ತುಶಿಲ್ಪಿಗಳೊಡನೆ ಕಟ್ಟಡದ ರೂಪರೇಷೆಗಳನ್ನು ತೀರ್ಮಾನಿಸುವುದು ನಮ್ಮ ಜವಾಬ್ದಾರಿಯಾಯಿತು. ಕಟ್ಟಡದ ತಳಹದಿಯನ್ನು ಹಾಕುವಾಗ ತುಂಬ ಸಮಸ್ಯೆಯಾಯಿತು. ಅದು ಕಪ್ಪುಮಣ್ಣಿನ ನೆಲ. ಅದು ಬೆಣ್ಣೆಯಂತೆ ಮೃದುವಾದದ್ದು. ಹತ್ತು ಅಡಿ ಅಗೆದರೂ ಒಂದು ಕಲ್ಲು ದೊರೆಯುವುದಿಲ್ಲ. ತಳಹದಿಗಾಗಿ ಅಗೆದರೆ, ಸುತ್ತಲಿನ ಮಣ್ಣು ಕುಸಿದುಬೀಳುತ್ತದೆ. ಆಗ ಕಂಭಗಳನ್ನು ನಿಲ್ಲಿಸಲು ಗುಂಡಿಗಳನ್ನು ತೆಗೆಯುವ ಬದಲು ಕಂಭದಿಂದ ಕಂಭಕ್ಕೆ ಪೂರ್ತಿ ಕಾಂಕ್ರೀಟ್ ಗೋಡೆಗಳನ್ನೇ ನಿಲ್ಲಿಸುವುದೆಂದು ಇಂಜಿನೀಯರರು ತೀರ್ಮಾನಮಾಡಿದರು. ಅದು ಸಮಯವನ್ನು ಹಾಗೂ ತುಂಬ ಹೆಚ್ಚು ಹಣವನ್ನು ಅಪೇಕ್ಷಿಸುವ ಕೆಲಸ. ಧಮ್ಮಣಗಿಯವರು ಉತ್ಸಾಹದಿಂದ ಕೆಲಸವನ್ನು ಮುಂದುವರೆಸಲು ಅಪ್ಪಣೆಮಾಡಿದರು. ಶಾಲೆ ಪ್ರಾರಂಭವಾಗುವ ಹೊತ್ತಿಗೆ ಇಡೀ ಕಟ್ಟಡದ ಅಸ್ತಿಬಂಧ ಸಿದ್ಧವಾಗಿ, ಕೆಳಗಿನ ಎರಡು ಮಹಡಿಗಳು ತರಗತಿಗಾಗಿ ತಯಾರಾಗಿ ನಿಂತವು. ಶಾಲೆಗೆ ಪ್ರಾಂಶುಪಾಲರು, ಶಿಕ್ಷಕರು ಬೇಕಲ್ಲ? ನನಗೊಂದು ಖಚಿತವಾದ ನಂಬಿಕೆ ಇತ್ತು, ಅದು ಇಂದಿಗೂ ಇದೆ. ಪ್ರಾಂಶುಪಾಲರಾದವರು ತರುಣರಾಗಿರಬೇಕು. ಅವರಿಗೆ ವಯಸ್ಸಿಗೆ ತಕ್ಕ ಉತ್ಸಾಹವಿರುತ್ತದೆ.
ಏನನ್ನಾದರೂ ಸಾಧಿಸಿ ತೋರಿಸುವ ಛಲವಿರುತ್ತದೆ. ಅದಕ್ಕೆ ಸರಿಯಾದ ಕನಸುಗಳಿರುತ್ತವೆ. ನಿವೃತ್ತಿಗೆ ಹತ್ತಿರ ಬಂದವರಿಗೆ ಅನುಭವವಿರುವುದೇನೋ ನಿಜ. ಆದರೆ ಅವರು ಯೋಚಿಸುವುದು ಮುಂದಿನ ನಾಲ್ಕಾರು ವರ್ಷ ಮಾತ್ರ. ಕಿರಿಯರು ಕೆಲವು ತಪ್ಪುಗಳನ್ನು ಮಾಡಿ ಅದರಿಂದ ಕಲಿಯುತ್ತಾರೆ. ಅನುಭವ ಬಂದೀತು ಆದರೆ ಉತ್ಸಾಹ ಬೇಕಲ್ಲ? ನಾನು ಸಾಮಾನ್ಯವಾಗಿ ಹೇಳುತ್ತೇನೆ, “I prefer youthful mistakes to experienced passivity” ಅಂತೆಯೇ ನಮ್ಮ ಬೈಲಹೊಂಗಲದ “ಕಲ್ಪವೃಕ್ಷ ಮಾದರಿ ಶಾಲೆ”ಗೆ ತರುಣ ಪ್ರಾಂಶುಪಾಲರನ್ನೇ ತರಲು ತೀರ್ಮಾನಿಸಿದೆ. ಶಾಲೆ ಕಟ್ಟುವ ಹೊಸ ಕೌಶಲ್ಯ ನಮ್ಮಲ್ಲಿ ವಿಶೇಷ ಉಮೇದನ್ನು ತಂದಿತ್ತು.