ಕಲಬುರಗಿಯಲ್ಲಿ ಮೋದಿ ಮೋಡಿ, ಮೆಗಾ ರೋಡ್ ಶೋ

Advertisement

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ನಗರದಲ್ಲಿ ನಡೆಸಿದ ಮೆಗಾ ರೋಡ್ ಶೋ’ಗೆ ಜನಸಾಗರವೇ ಹರಿದುಬಂದಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆಗಿಳಿದ ಪ್ರಧಾನಿಗೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಕಲಬುರಗಿ ಜಿಲ್ಲೆಯಲ್ಲಿ ನಡೆದ ಮೊದಲ ಮೋದಿ ರೋಡ್ ಶೋ ಇದಾಗಿದ್ದು, ಇದು ಬಿಜೆಪಿಗರಲ್ಲಿ ಸಹಜವಾಗಿಯೇ ಹೊಸ ಹುರುಪು ತಂದುಕೊಟ್ಟು ಮತದಾನಕ್ಕೆ ಕೆಲವೇ ದಿನಗಳಿರುವಾಗ ಹೊಸ ಅಲೆ ಸೃಷ್ಟಿಗೆ ಕಾರಣವಾಯಿತೆನ್ನಬಹುದು.
ನಗರದ ಗಂಜ್ ಬಳಿಯ ಹುಮನಾಬಾದ್ ಬೇಸ್‌ನ ಕೆಎಂಎಫ್ ಮುಂಭಾಗದಿಂದ ಆರಂಭಗೊಂಡ ರೋಡ್ ಶೋ ಸುಮಾರು ಒಂದೂವರೆ ಗಂಟೆಯಲ್ಲಿ ಐದು ಕಿ.ಮೀ.ವರೆಗೆ ಸಾಗಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಅಂತ್ಯಗೊಂಡಿತು. ಮೋದಿ ಅವರ ವಾಹನ ರಸ್ತೆಯ ಒಂದು ಬದಿಯಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಜನಸಾಗರವೇ ನೆರೆದಿತ್ತು. ಮೋದಿ ಅವರು ಜನರ ಅಭೂತಪೂರ್ವ ಸ್ಪಂದನೆ ಕಂಡು ಪುಳಕಿತಗೊಂಡರು. ಜನರತ್ತ ಕೈಮುಗಿಯುತ್ತ, ಕೈಬೀಸುತ್ತ ಸಾಗಿದ ಮೋದಿ ಅವರನ್ನು ನೋಡಲು ಜನರು ಮುಗಿಬಿದ್ದರು.
ಯುವಕರಂತೂ ಮೋದಿ ಮೋದಿ ಎಂದು ಕೂಗುತ್ತಾ ಕುಣಿದು ಕುಪ್ಪಳಿಸಿದರು. ಜೈ ಶ್ರೀರಾಮ್ ಎಂದು ಅಬ್ಬರಿಸಿದರು. ದಾರಿಯುದ್ದಕ್ಕೂ ಮೋದಿಯವರ ಮೇಲೆ ಹೂಮಳೆಗೆರೆಯಲಾಯಿತು. ಕಲಬುರಗಿ ನಗರವಂತೂ ಕೇಸರಿಮಯವಾಗಿತ್ತು. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ರೋಡ್ ಶೋ’ನಲ್ಲಿ ಪಾಲ್ಗೊಂಡು ಮೋದಿಯವರನ್ನು ಕಣ್ತುಂಬಿಕೊಂಡರು. ಬಹುಮಹಡಿಗಳ ಕಟ್ಟಡಗಳ ಮೇಲೂ ಸಾವಿರಾರು ಜನರು ನಿಂತು ಮೋದಿ ಅವರ ಮೇಲೆ ಹೂಮಳೆಗೆರೆದರು.
ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಕಲಬುರಗಿ ಕ್ಷೇತ್ರದ ಸಂಸದ ಡಾ. ಉಮೇಶ ಜಾಧವ ಅವರು ಪ್ರಧಾನಿ ಮೋದಿಗೆ ಸಾಥ್ ನೀಡಿದರು.