ಮಂಗಳೂರು: ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಶೇಖರ್ ರಾವ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ (ಹೆಚ್ಚುವರಿ ನಿರ್ದೇಶಕರ ನೆಲೆಯಲ್ಲಿ) ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅಧಿಕಾರಾವಧಿಗೆ ನೇಮಕ ಮಾಡಿದೆ. ಜನವರಿ ೧೩ರಂದು ಜರಗಿದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನೇಮಕಾತಿಗೆ ಮಾನ್ಯತೆ ನೀಡಲಾಯಿತು.
ಶೇಖರ್ ರಾವ್ ಅವರು ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ವ್ಯವಹಾರ ನಿರ್ವಹಣೆ, ಕಾರ್ಯತಂತ್ರಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಇಪ್ಪತ್ತೊಂಭತ್ತಕ್ಕೂ ಅಧಿಕ ವರ್ಷಗಳ ಅನುಭವವನ್ನು ಹೊಂದಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಸುಮಾರು ೧೯ ವರ್ಷಗಳ ಸುದೀರ್ಘ ಅನುಭವ ಹೊಂದಿರುತ್ತಾರೆ. ಅದಲ್ಲದೇ, ಕೇಂದ್ರೀಕೃತ ಕಾರ್ಯಾಚರಣೆ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ವ್ಯವಹಾರ ತಂತ್ರಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಯೋಜನೆಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವುದು, ಬ್ಯಾಂಕ್‌ಗಳ ಡಿಜಿಟಲ್ ಚಾನೆಲ್‌ಗಳ ನಿರ್ವಹಣೆ ಹೊಸ ವ್ಯವಹಾರಗಳ ನಿರ್ವಹಣೆ, ಡಿಸ್ಟ್ರಿಬ್ಯೂಷನ್ ಚಾನೆಲ್‌ಗಳ ವಿಸ್ತರಣೆ, ಶಾಖೆಗಳ ವಿಸ್ತರಣೆ ಹಾಗೂ ನಿರ್ವಹಣೆ, ಶಾಖೆಗಳು ಮತ್ತು ದೊಡ್ಡ ಮಟ್ಟದ ವ್ಯಾಪಾರ ಘಟಕಗಳ ನಿರ್ವಹಣೆ ಮತ್ತು ಫಿನ್ಟೆಕ್ ಸ್ಟಾರ್ಟ್-ಅಪ್‌ನ ಸ್ಠಾಪನೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಹೊಂದಿರುತ್ತಾರೆ.
ಈ ಮುಂಚೆ ಅವರು ಏಪ್ರಿಲ್ ೨೦೨೦ರಿಂದ ಫಿನ್ಟೆಕ್ ‘ಸ್ಯಾವಿ ಇಂಡಿಯಾದ ಸಹಸಂಸ್ಥಾಪಕರಾಗಿ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ಸುಮಾರು ಆರು ವರ್ಷಗಳ ಕಾಲ ಸಿಎಸ್‌ಬಿ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ಐಟಿ ವಿಭಾಗದ ಮುಖ್ಯಸ್ಥರಾಗಿ, ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್, ಐಎನ್‌ಜಿ ವೈಶ್ಯ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಏಷ್ಯನ್ ಪೇಂಟ್ಸ್ ಇಂಡಿಯಾ ಲಿಮಿಟೆಡ್, ಗುಡ್ಲಾಸ್ ನೆರೋಲಾಕ್ ಪೇಂಟ್ಸ್ ಲಿಮಿಟೆಡ್ (ಈಗ ಕನ್ಸಾಯ್ ನೆರೋಲಾಕ್ ಪೇಂಟ್ಸ್ ಲಿಮಿಟೆಡ್) ಮುಂತಾದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಅವರು, ನಮ್ಮ ನಿರ್ದೇಶಕರ ಮಂಡಳಿಗೆ ಶೇಖರ್ ರಾವ್ ಅವರನ್ನು ಸ್ವಾಗತಿಸಲು ಸಂತೋಷಪಡುತ್ತೇನೆ. ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಫಿನ್ಟೆಕ್‌ನಂತಹ ಅನೇಕ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಪಡೆದಿರುವ ಅವರು ಕರ್ಣಾಟಕ ಬ್ಯಾಂಕಿಗೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದು ಶುಭ ಹಾರೈಸಿದರು.