ಹುಬ್ಬಳ್ಳಿ: ಏರ್ ಬಸ್, ಸ್ಯಾಫ್ರನ್ ಸೇರಿದಂತೆ ವಿವಿಧ ಸಂಸ್ಥೆಗಳ ವಿಮಾನದಲ್ಲಿನ ಬಹುಪಾಲು ಭಾಗಗಳ ಉತ್ಪಾದನೆಯನ್ನು ಕರ್ನಾಟಕದಲ್ಲಿ ಮಾಡಲಾಗುತ್ತಿದೆ. ಸರ್ಕಾರ ಕರ್ನಾಟಕದಲ್ಲಿ ವಿಮಾನ ಉತ್ಪಾದನಾ ಘಟಕವನ್ನು ಸ್ಥಾಪಿಸುವ ದೂರದೃಷ್ಟಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ನವ ಕರ್ನಾಟಕ ಶೃಂಗ ಆವಿಷ್ಕಾರ, ಪ್ರಗತಿ ಹಾಗೂ ಪರಿವರ್ತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಶಕ್ತಿ, ಅಭಿವೃದ್ಧಿಗೆ ಪೂರಕ ಹಾಗೂ ಮಾರಕವಾದ ಅಂಶಗಳಾವುವು ಎಂಬ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಬಳುವಳಿಯಿದೆ. ವಿವಿಧ ಹವಾಮಾನ ಹಾಗೂ ನಿಸರ್ಗದ ವೈವಿಧ್ಯಗಳನ್ನು ಹೊಂದಿರುವ ಸಮೃದ್ಧ ರಾಜ್ಯ ಕರ್ನಾಟಕ. ಪಶ್ಚಿಮ ಘಟ್ಟದ ಸಂರಕ್ಷಣೆ ಬಹಳ ಮುಖ್ಯ. ಇಲ್ಲಿಂದ ಹರಿಯುವ ನದಿಗಳು ರಾಜ್ಯಕ್ಕೆ ವರದಾನವಾಗಿದೆ. ನದಿಗಳ ಹರಿಯುವಿಕೆಯಿಂದ ಜೀವ ಸಂಕುಲ, ಆಹಾರ ಸಂಪತ್ತು ಹೇರಳವಾಗಿವೆ ಎಂದರು.
ಸಮಯೋಚಿತವಾದ ನೀತಿ ಅಭಿವೃದ್ಧಿಗೆ ಅವಶ್ಯಕ: ವರ್ಷಪೂರ್ತಿ ಕೃಷಿ ಚಟುವಟಿಕೆಗೆ ಪೂರಕವಾದ ೧೦ ವಿಧಧ ಕೃಷಿ ಹವಾಮಾನ ವಲಯಗಳು ರಾಜ್ಯದಲ್ಲಿವೆ. ರಾಜ್ಯದಲ್ಲಿ ಡಿಆರ್‌ಡಿಓ, ಬಿಹೆಚ್‌ಇಎಲ್ ಸೇರಿದಂತೆ ಹಲವು ತಂತ್ರಜ್ಞಾನದ ಸಂಸ್ಥೆಗಳಿವೆ. ಹೇರಳವಾದ ಖನಿಜ ಸಂಪತ್ತು ಇರುವ ರಾಜ್ಯ ಕರ್ನಾಟಕ. ಕರ್ನಾಟಕ ಕೃಷಿ ಪ್ರಧಾನವಾದ ರಾಜ್ಯವಾಗಿದ್ದು, ಶೇ.೧ ರಷ್ಟು ಕೃಷಿ ಅಭಿವೃದ್ಧಿಯಿಂದ ಶೇ.೪ ರಷ್ಟು ಉತ್ಪಾದನಾ ಕ್ಷೇತ್ರ ಹಾಗೂ ಶೇ.೧೦ ರಷ್ಟು ಸೇವಾ ವಲಯದ ಅಭಿವೃದ್ಧಿ ಸಾಧ್ಯ. ಈ ಮುಂಚೆ, ಕೃಷ್ಣೆ ಹಾಗೂ ಕಾವೇರಿ ನದಿಯ ನೀರಿನ ಸದ್ಬಳಕೆ ಮಾಡಿದಿದ್ದರೆ, ಕೃಷಿಯಲ್ಲಿ ಕರ್ನಾಟಕ ಮಹತ್ವಪೂರ್ಣ ಸಾಧನೆ ಮಾಡುತ್ತಿತ್ತು. ಸಮಯೋಚಿತವಾದ ನೀತಿ ನಿರೂಪಣೆಗಳು ಅಭಿವೃದ್ಧಿಗೆ ಅತ್ಯಂತ ಅವಶ್ಯಕವಾಗುತ್ತದೆ ಎಂದರು.
ಕಳೆದ ವರ್ಷದಿಂದ ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶಕ್ಕೆ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ. ೩೮ ರಷ್ಟು ಪ್ರಮಾಣ ಕರ್ನಾಟಕ ರಾಜ್ಯಕ್ಕೆ ಹರಿದು ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹನಿ ನೀರಾವರಿಗೆ ಒತ್ತು ನೀಡಲಾಗುತ್ತಿದೆ. ತುಂಗಭದ್ರಾ ಯೋಜನೆಯಿಂದ ೭ ಲಕ್ಷ ಎಕರೆ ನೀರಾವರಿಯನ್ನು ಹನಿ ನೀರಾವರಿಗೆ ಮಾರ್ಪಡಿಸಲಾಗುವುದು. ಅಂತರರಾಜ್ಯ ನದಿ ವಿವಾದಗಳು ಅಭಿವೃದ್ಧಿಗೆ ಹಿನ್ನೆಡೆಯಾಗಿವೆ. ಕೃಷ್ಣಾ, ಮಹಾದಾಯಿ, ಕಾವೇರಿ ನದಿಗಳ ನೀರಾವರಿ ಯೋಜನೆಗಳು ವಿವಾದದಲ್ಲಿವೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಕೋಟಾ ಶ್ರೀನಿವಾಸ, ಶಾಸಕರಾದ ಅರವಿಂದ ಬೆಲ್ಲದ್, ಉದ್ಯಮಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಅವಳಿನಗರದಲ್ಲಿ ೧ ಲಕ್ಷ ಉದ್ಯೋಗ ಸೃಷ್ಟಿ
೧ ಲಕ್ಷ ಉದ್ಯೋಗ ನೀಡುವ ನಿಟ್ಟಿನಲ್ಲಿ ಏಫ್.ಎಂ. ಸಿ. ಜಿ ಕ್ಲಸ್ಟರ್ ನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಆರಂಭಿಸಲಾಗುತ್ತಿದೆ. ಎಸ್. ಇ.ಆರ್ (ವಿಶೇಷ ಹೂಡಿಕೆದಾರರ ವಲಯ)ವನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೆಮಿ ಕಂಡಕ್ಟರ್, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗುತ್ತಿದೆ. ಸ್ಟಾರ್ಟ್ ಅಪ್ ಗಳು ಇಂದು ಹೆಚ್ಚಾಗಿ ಸ್ಥಾಪನೆಯಾಗುತ್ತಿವೆ. ಬೆಂಗಳೂರು ಹೊರತಾಗಿ ಬೇರೆ ಕಡೆಗಳಲ್ಲಿ ಸ್ಥಾಪಿಸಲಾಗುವ ಸ್ಟಾರ್ಟ್ ಅಪ್ ಗಳಿಗೆ ರೂ. ೫೦ ಲಕ್ಷ ನೀಡಲಾಗುತ್ತಿದೆ. ದೇಶದಲ್ಲಿನ ೪ ಡೆಕಥಾನ್ ಗಳು ೩ ಡೆಕಥಾನ್ ಗಳು ರಾಜ್ಯದಲ್ಲಿವೆ ಎಂದು ಹೇಳಿದರು.
ಬಟ್ಟೆ ಉದ್ಯಮದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಸುಮಾರು ೧೦ ಲಕ್ಷ ಜನರು ಬಟ್ಟೆ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ೨೫ ಜವಳಿ ಪಾರ್ಕ್ ಗಳನ್ನು ಆರಂಭಿಸಲಾಗುವುದು. ಇದರಿಂದ ರಫ್ತು ಮತ್ತು ಆರ್ಥಿಕತೆ ಹೆಚ್ಚಳವಾಗಲಿದೆ. ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.
ಏಷ್ಯಾದಲ್ಲಿಯೇ ಕರ್ನಾಟಕ ನಂಬರ್ ೧ ಆಗಬೇಕು
ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು. ಬಡವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ವರ್ಗದವರ ಸಮಾನ ಜೀವನ ಸೃಷ್ಟಿಗಾಗಿ ದೇಶದಲ್ಲಿ ಮೊದಲ ಬಾರಿಗೆ ಉದ್ಯೋಗ ಪಾಲಸಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಶಿವಮೊಗ್ಗ, ಬಿಜಾಪುರ, ಹಾಸನ, ರಾಯಚೂರು, ಬಳ್ಳಾರಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ೧೨ ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
ರೈಲ್ವೆ ಬಜೆಟ್ ಹೆಚ್ಚಿಗೆ ದೊರೆತಿದೆ. ಮಲ್ಟಿ ಮೋಡ್ ಕನೆಕ್ಟಿವಿಟಿಗಳನ್ನು ಆರಂಭಿಸಲಾಗುತ್ತಿದೆ. ಕರ್ನಾಟಕ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಆಗದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹುಬ್ಬಳ್ಳಿ ನಗರವು ಬೆಂಗಳೂರು ನಗರವನ್ನು ಮೀರಿಸುವ ನಗರವಾಗಿ ಬೆಳೆಯಬೇಕು. ಬಿಯಾಂಡ್ ಬೆಂಗಳೂರು ಮೂಲಕ ಅಭಿವೃದ್ಧಿ ಆಗುತ್ತಿದೆ. ಏಷ್ಯಾದಲ್ಲಿಯೇ ಕರ್ನಾಟಕ ನಂಬರ್ ೧ ಆಗಬೇಕು ಎಂದು ತಮ್ಮ ಆಶಯವನ್ನು ಮಂಡಿಸಿದರು.