ಕನ್ನಡದ ಹೆಸರಾಂತ ನಟ ಲಕ್ಷ್ಮಣ ಇನ್ನಿಲ್ಲ

ಲಕ್ಷ್ಮಣ
Advertisement

ಸ್ಯಾಂಡಲ್‌ವುಡ್‌ ಹೆಸರಾಂತ ನಟ ಲಕ್ಷ್ಮಣ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದಾಗಿ ಕನ್ನಡದ ಖ್ಯಾತ ನಟ ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ನಟ ಲಕ್ಷ್ಮಣ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಯ ಮಾರ್ಗ ಮಧ್ಯೆಯೇ ನಟ ಲಕ್ಷ್ಮಣ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಟ ಲಕ್ಷ್ಮಣ ಚಂದನವನದಲ್ಲಿ ಖಳನಟರಾಗಿಯೇ ಪ್ರಸಿದ್ಧಿ ಪಡೆದವರು. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದರು. ಮಲ್ಲ, ಯಜಮಾನ, ಸೂರ್ಯವಂಶ ಸೇರಿದಂತೆ ಹಲವು ಎವರ್‌ಗ್ರೀನ್‌ ಮೂವಿಗಳಲ್ಲಿ ವಿಲನ್‌ ಆಗಿ ಎಲ್ಲರ ಮನಗೆದ್ದಿದ್ದರು. ನಟ ಲಕ್ಷ್ಮಣ ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಟ ಕೂಡ ಹೌದು. ಕನ್ನಡ ಸಿನಿರಂಗದ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರಿದ್ದಾಗಿದೆ.
ನಟ ಲಕ್ಷ್ಮಣ ಅವರ ತಂದೆ ಸೈನಿಕರಾಗಿದ್ದರು. ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಿನಿರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಲಕ್ಷ್ಮಣ, ಕೆಲಕಾಲ ಫ್ಯಾಕ್ಟರಿಯಲ್ಲಿ ಸಹ ಕೆಲಸ ಮಾಡಿದ್ದರು. ಖಳನಾಯಕನ ಕಳೆ ಆ ಮುಖದಲ್ಲಿ ಸದಾ ಕಾಣುತ್ತಿತ್ತು. ಸಿನಿರಂಗಕ್ಕೆ ಬರುವ ಮುನ್ನ ಅವರು, ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.