ವಿಲಾಸ ಜೋಶಿ
ಬೆಳಗಾವಿ: ಗಡಿಭಾಗ ಬೆಳಗಾವಿ ಜಿಲ್ಲೆಯಲ್ಲಿ
ಹುಕ್ಕೇರಿ ಸಾಹುಕಾರ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುವ ಉಮೇಶ ಕತ್ತಿ ಮಾತು ಬಿರುಸು. ಆದರೆ ಅವರ ಮನಸ್ಸು ಮಾತ್ರ ಹೂವಿನಂತಹುದ್ದು. !
ಒಂದು ರೀತಿಯಲ್ಲಿ ರಾಜಕಾರಣಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಳಗೊಂದು-ಹೊರಗೊಂದು ಎಂಬ ಮನೋಭಾವ, ಕಲ್ಮಶ ಇದ್ಯಾವುದೂ ಇಲ್ಲದ ಪರಿಶುದ್ಧ ಮನಸ್ಸು ಇವರದ್ದು.
ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಪಕ್ಷ, ಸರ್ಕಾರ ಯಾವುದಿದೆ ಎನ್ನುವುದನ್ನು ನೋಡದೇ ಇದ್ದದ್ದು ಇದ್ದ ಹಾಗೆ ಹೇಳುವ ಎದೆಗಾರಿಕೆ ಬೆಳೆಸಿಕೊಂಡವರಲ್ಲಿ ಸಚಿವ ಉಮೇಶ ಕತ್ತಿ ಕೂಡ ಒಬ್ಬರು.
ಉಮೇಶ ಕತ್ತಿ ಅವರಿಗೆ ಈಗ ಕೇವಲ 62 ವರ್ಷ. ಅದು ಸಾಯುವ ವಯಸ್ಸೇನಲ್ಲ. ಆದರೆ ಆ ಕ್ರೂರ ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತು.
ಕಣ್ಣು ತುಂಬಾ ಕನಸುಗಳನ್ನು ತುಂಬಿಕೊಂಡಿದ್ದ, ಸ್ನೇಹಿತರ ದೊಡ್ಡ ಬಳಗವನ್ನೇ ಹೊಂದಿದ್ದ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದ ಉಮೇಶ್ ಕತ್ತಿಯನ್ನು ಆ ವಿಧಿ ಇಲ್ಲಿ ಇರಗೊಡಲಿಲ್ಲ ಎನ್ನುವುದು ಎಲ್ಲರಿಗೂ ಕಾಡುವುದು ಸಹಜ.
1980ರಲ್ಲಿ ಉಮೇಶ ಕತ್ತಿ ತಮ್ಮ ತಂದೆ ವಿಶ್ವನಾಥ ಕತ್ತಿಯ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ್ದು ಸಚಿವರಾದ ನಂತರವೇ!
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ ಅವರ ಗರಡಿಯಲ್ಲಿ ರಾಜಕಾರಣದ ಬದುಕು ಕಟ್ಟಿಕೊಂಡ ಉಮೇಶ್ ಕತ್ತಿ, ಹೆಗಡೆಯವರ ಅಂತರಂಗದ ಶಿಷ್ಯರಲ್ಲಿ ಒಬ್ಬರಾಗಿದ್ದರು. ನಂತರ ಜೆ.ಎಚ್. ಪಟೇಲರ ಆತ್ಮೀಯ ಬಳಗದಲ್ಲಿ ಒಬ್ಬರಾಗುವಂತೆ ಮಾಡಿತು.
ರಾಜ್ಯ ರಾಜಕಾರಣದಲ್ಲಿ ನಿಧಾನವಾಗಿ ತಮ್ಮ ಅಸ್ತಿತ್ವ ಕಂಡುಕೊಂಡು ಮುಂಚೂಣಿ ಮತ್ತು ಪ್ರಬಲ ನಾಯಕರಾಗಿ ಹೆಸರು ಮಾಡಿದ ಅವರು ತಾವು ನಿರ್ವಹಿಸಿದ ಎಲ್ಲ ಖಾತೆಗಳಲ್ಲೂ ಹೆಸರು ಉಳಿಸಿಕೊಂಡರು. ಕೃಷಿ ಸಚಿವರಾಗಿದ್ದಾಗ ಕೃಷಿ ಕ್ಷೇತ್ರಕ್ಕೇ ಪ್ರತ್ಯೇಕ ಬಜೆಟ್ ಮಂಡನೆ ಆಗುವಂತೆ ನೋಡಿಕೊಂಡ ಹೆಗ್ಗಳಿಕೆ ಉಮೇಶ ಕತ್ತಿ ಅವರಿಗಿದೆ.
ಬೆಳಗಾವಿಯ ಉಮೇಶ್ ಕತ್ತಿ ರಾಜಧಾನಿ ಬೆಂಗಳೂರಿನ ರಾಜಕಾರಣ ಕರಗತ ಮಾಡಿಕೊಂಡು ಪ್ರಬಲ ನಾಯಕರಾಗಿ ಹೊರಹೊಮ್ಮಿದರು. ಮುಖ್ಯಮಂತ್ರಿ ಪದವಿಯಿಂದ ಪಟೇಲರನ್ನು ಇಳಿಸುವುದ ಖಚಿತ ಎಂಬ ವಾತಾವರಣ ಮೂಡಿದ್ದ ಸಂದರ್ಭದಲ್ಲಿ ಪಟೇಲರ ಕುರಿತಾಗಿ ಇದ್ದ ತಮ್ಮ ನಿಷ್ಠೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನೇರವಾಗಿ ರಾಜಕಾರಣದ ರಣರಂಗಕ್ಕೆ ಧುಮುಕಿದ್ದರು.
ಎಂಟು ಬಾರಿ ಶಾಸಕರಾಗಿ ವಿಧಾನಸಭೆಗೆ ಆರಿಸಿಬಂದು, ವಿವಿಧ ಖಾತೆಗಳ ಸಚಿವರೂ ಆಗಿ ಕಾರ್ಯ ನಿರ್ವಹಿಸಿದ ಅವರು ರಾಜಕಾರಣವನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರೆ ಮುಖ್ಯಮಂತ್ರಿ ಆಗುವ ಸಂದರ್ಭವೂ ಬರುತ್ತಿತ್ತು ಎನ್ನುವುದು ಅವರ ಒಡನಾಡಿಗಳ ಮಾತು.
ಸದಾ ತಮಾಷೆಯ ಸ್ವಭಾವದ, ಆತ್ಮೀಯತೆಯ ಪರಿಧಿಯ ಹೊರಗೆ ನಿಂತು ನೋಡುವವರಿಗೆ ಉಮೇಶ್ ಕತ್ತಿಗೆ ಮುಖ್ಯಮಂತ್ರಿ ಆಗುವ ಮಹತ್ವಾಕಾಂಕ್ಷೆ ಇದ್ದಿದ್ದು ನಿಜ. ಆದರೆ, ಮುಖ್ಯಮಂತ್ರಿಯ ಪದವಿಗೆ ಏರಲು ಬೇಕಾದ ಗಂಭೀರ ಮನೋಸಿದ್ಧತೆಯನ್ನು ಅವರು ಮೈಗೂಡಿಸಿಕೊಳ್ಳಲಿಲ್ಲ.
ಆದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಅವರ ಹೇಳಿಕೆ, ಜೊತೆಗೆ ತಾವು ಮುಖ್ಯಮಂತ್ರಿ ಮತ್ತು ಪುತ್ರ ಗೃಹ ಮಂತ್ರಿ ಎನ್ನುವ ಬಹಿರಂಗ ಘೋಷಣೆಗಳು ಇತರರಿಗೆ ತಮಾಷೆಯ ಪ್ರಸಗವಾಗಿ ಕಂಡವೇ ಹೊರತೂ ಗಂಭೀರತೆ ಹುಟ್ಟಿಸಲಿಲ್ಲ.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಹೇಳಿಕೆಗಳಲ್ಲಿ ಸತ್ಯಾಂಶ ಇದ್ದರೂ ಅದನ್ನು ಅಖಂಡ ಸರ್ಕಾರ ಮಟ್ಟದಲ್ಲಿದ್ದವರು ಗಂಭೀರವಾಗಿ ಪರಿಗಣಿಸಲಿಲ್ಲ.
ಎರಡೂ ದೊಡ್ಡ ಆಘಾತ
ಬೆಳಗಾವಿ ಜಿಲ್ಲೆಗೆ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ಈಗ ಸಚಿವ ಉಮೇಶ ಕತ್ತಿ ಅವರ ಅಕಾಲಿಕ ಸಾವು ಜಿಲ್ಲೆಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ದೊಡ್ಡ ಆಘಾತವೇ ಸರಿ..!
ಈ ಇಬ್ಬರೂ ನಾಯಕರು ತಮ್ಮ ಅರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡದೇ ಇರುವುದು ಈ ಘೋರ ದುರಂತಕ್ಕೆ ಕಾರಣ. ಕೇಂದ್ರ ಸಚಿವ ಸುರೇಶ ಅಂಗಡಿ ಅವರೂ ಕೊರೊನಾ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿಲ್ಲ. ನಾವೆಲ್ಲ ಉತ್ತರ ಕರ್ನಾಟಕದ ಜನ, ಕಟಕ್ ರೊಟ್ಟಿ, ಖಾರಾ ತಿನ್ನೋರು, ನಮಗೇನಾಗುತ್ತದೆ ಎನ್ನುವ ಮಾತನ್ನು ಅಂಗಡಿ ಆಡುತ್ತಿದ್ದರು. ಆದರೆ ಕೊರೊನಾ ಹೆಮ್ಮಾರಿ ಅವರ ಜೀವವನ್ನು ಬಲಿ ತೆಗೆದುಕೊಂಡಿತು.
ಇನ್ನು ಸಚಿವ ಉಮೇಶ ಕತ್ತಿ ಅವರು ಈ ಹಿಂದೆ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದರೂ ಆರೋಗ್ಯವನ್ನು ಅಷ್ಟೊಂದು ಗಂಭೀರ ಪರಿಗಣಿಸುತ್ತಿರಲಿಲ್ಲ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದ್ದರೆ ಇನ್ನೂ ಹಲವು ವರ್ಷಗಳ ಕಾಲ ನಮ್ಮೊಂದಿಗೆ ಇರುತ್ತಿದ್ದರು. ಆದರೆ ವಿಧಿ ಕೇಳಬೇಕಲ್ಲ.!