ರಾತ್ರಿ ಕಂಡ ಕನಸನ್ನು ಘಟನೆಯೇನೋ ಎಂದು ವರ್ಣನೆ ಮಾಡುತ್ತಿದ್ದ ಕುಂಟ್ನಾಗ ಭಯಂಕರ ಫೇಮಸ್ಸು ಆಗಿದ್ದ. ಶೇಷಮ್ಮನ ಹೋಟೆಲ್‌ನಲ್ಲಿ ಹೋದಾಗ…ಅಯ್ಯೋ ನಿಮಗೆ ಗೊತ್ತ? ನಿನ್ನೆ ಸೋದಿಮಾಮಾ ಅವರು ಎಲ್ಲಿದ್ದಿಯೋ ನಾಗಣ್ಣ ಎಂದು ಕೇಳಿದರು. ನಾನು ಮನೆಯಲ್ಲಿ ಅಂತ ಹೇಳಿದೆ. ನಿನಗೊಂದು ಸರ್‌ಪ್ರೈಸ್ ಕಾದಿದೆ ಅಂದಿದಾರೆ ನೋಡಬೇಕು ಎಂದು ಹೇಳುತ್ತಿದ್ದ. ಮರುದಿನ ಏನಪಾ ಕುಂಟ್ನಾಗ ಸೋದಿಮಾಮಾ ಅದೇನೋ ಸರ್‌ಪ್ರೈಸ್ ಎಂದು ಹೇಳಿದ್ದಾರಂತಲ್ಲ? ಎಂದು ಕೇಳಿದರೆ …ಅಯ್ಯೋ ನಿನ್ನೆ ರಾತ್ರಿ ಮದ್ರಾಮಣ್ಣೋರು… ಏನಪಾ ಅವರದ್ದೇನೂ ಇಲ್ಲ…ಬರೀ ಕಾಗೆ ಹಾರಿಸುತ್ತಾರೆ ನೋಡು ಎಂದು ಹೇಳಿದರು. ಅದಕ್ಕೆ ಅವರಿಬ್ಬರ ನಡುವೆ ನಾನ್ಯಾಕೆ ಹೋಗಲಿ ಎಂದು ಸುಮ್ಮನಾಗಿದ್ದೇನೆ ಎಂದು ತಿಳಿಸಿದ್ದ. ತೆಮ್ನಾಳ್ ಕುರಿ ಬಾಲಪ್ಪ ನಿನ್ನೆ ನಮ್ಮವು ಕುರಿ ಕಳುವಾಗಬಹುದು ನೀವೊಂದು ಮಾತು ಇನ್ಸಪೆಕ್ಟರ್‌ಗೆ ಹೇಳಿ ಅಂದಿದ್ದಾನೆ. ಈಗ ಅಲ್ಲೇ ಹೊರಟಿದ್ದೀನಿ ಎಂದು ಹೇಳಿದಾಗ ತಳವಾರ್ಕಂಟಿಯು ಅವನ ಕುರಿ ಕಳುವಾಗಬಹುದಾದದ್ದು ಇವನಿಗೆ ಹೇಗೆ ಗೊತ್ತಾಗಿರಬಹುದು ಎಂದು ತಲೆಕೆಡೆಸಿಕೊಂಡು ಇವನಿಗೆ ಹೇಗಾದರೂ ಹೀಗೆ ಹೇಳುವುದನ್ನು ಬಿಡಿಸಬೇಕು ಎಂದು ಅಂದುಕೊಂಡ. ಅವತ್ತು ನೋಡಪಾ ಆ ಚಾಟಿನಿಂಗ ಏನಂದರೆ ಏನೂ ಇರಲಿಲ್ಲ. ಈಗ ನೋಡು ಎಷ್ಟು ಶ್ರೀಮಂತ ಆಗಿದ್ದಾನೆ ಎಂದು ಹೇಳಿದ. ಅದಕ್ಕೆ ಕುಂಟ್ನಾಗ… ವೇಟ್..ವೇಟ್ ಯಾರಾದರೂ ಕಳ್ಳರು ಬಂದು ಹೊಡಕೊಂಡು ಹೋದರೆ ಗೊತ್ತಾಗುತ್ತದೆ ಎಂದು ಅಂದ. ಅದೇನು ದುರಾದೃಷ್ಟವೋ ಏನೋ ಮರುದಿನವೇ ಚಾಟಿನಿಂಗನ ಮನೆ ಕಳುವಾಯಿತು. ಪ್ರಭಾವಿ ಆಗಿದ್ದರಿಂದ ಪೊಲೀಸರು ಸಿಕ್ಕಾಪಟ್ಟೆ ಜೋರಾಗಿ ತನಿಖೆ ನಡೆಸಿದರು. ಅವರ ಮನೆ ಕಳುವಾಗುವುದು ಮೊದಲೇ ಕುಂಟ್ನಾಗನಿಗೆ ಗೊತ್ತಿತ್ತು. ನನ್ನ ಮುಂದೆ ಹೇಳಿದ್ದ ಎಂದು ತಳವಾರ್ಕಂಟಿ ಸುದ್ದಿ ಹಬ್ಬಿಸಿದ. ಮರುದಿನ ಕುಂಟ್ನಾಗನನ್ನು ವಿಚಾರಣೆಗೆ ಕರೆಯಿಸಿದಾಗ…ಅಯ್ಯೋ ನೋಡುತಿರಿ ಇನ್ನೂ ನಾಲ್ಕು ದಿನಗಳಲ್ಲಿ ನಿಮ್ಮ ಮನೆಯೂ ಕಳುವಾಗುತ್ತದೆ ಎಂದು ಇನ್ಸಪೆಕ್ಟರ್‌ಗೆ ಹೇಳಿದ. ಕೂಡಲೇ ಆತನನ್ನು ಲಾಕಪ್‌ಗೆ ತಳ್ಳಿದ ಇನ್ಸಪೆಕ್ಟರ್ ಇಚಾರಿಸ್ಕೊಳ್ರೋ ಈ ಕುಂಟನ್ನ ಎಂದು ಪೊಲೀಸರಿಗೆ ಹೇಳಿದ. ಮುಂದೆ ಕುಂಟ್ನಾಗ ಕನಸಿನ ಬಗ್ಗೆ ಎಲ್ಲಿಯೂ ಮಾತನಾಡುತ್ತಿರಲಿಲ್ಲ.2