ಕತ್ತೆಗೂ ಬಂತು ವಸಂತಕಾಲ

Advertisement

ರಾಮಕೃಷ್ಣ ಆರ್.
ಕೇರಳದ ಎರ್ನಾಕುಲಂ ಬಳಿಕ ದೇಶದ ಎರಡನೇ ಕತ್ತೆ ಸಾಕಾಣಿಕೆ ಕೇಂದ್ರ ಮಂಗಳೂರಿಗೆ ಹೊರವಲಯದ ಕೊಣಾಜೆ ಸಮೀಪದ ಇರಾದಲ್ಲಿ ಆರಂಭಗೊಂಡಿದೆ. ಇದು ರಾಜ್ಯದ ಪ್ರಪ್ರಥಮ ಕತ್ತೆ ಸಾಕಾಣಿಕೆ ಕೇಂದ್ರ.
ಕತ್ತೆ'ಗೂ ಈಗ ಬೇಡಿಕೆಯೂ ಬಂದಿದೆ. ಈಗ ಕತ್ತೆ ಎಂದು ಬೈಯುವಾಗ ಅಲೋಚಿಸಬೇಕಿದೆ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ ಮೂಲತಃ ಕನಕಪುರ ರಾಮನಗರದ ಡಾ. ಶ್ರೀನಿವಾಸ ಗೌಡ ಮಂಗಳೂರಿಗೆ ಬಂದು ಕತ್ತೆ ಸಾಕಾಣಿಕೆ ಕೇಂದ್ರ ಆರಂಭಕ್ಕೆ ಆಸಕ್ತಿ ತೋರಿಸಿದ್ದಾರೆ. ಐವರು ಸ್ನೇಹಿತರ ಸಹಾಯದಿಂದ ಇರಾದಲ್ಲಿ ೨.೩೫ ಎಕರೆ ಜಾಗವನ್ನು ಲೀಸ್‌ಗೆ ಪಡೆದು ಕುರಿ ಮತ್ತು ಆಡು ಸಾಕಾಣಿಕ ಆರಂಭಿಸಿದ್ದಾರೆ. ಎರಡು ವರ್ಷಗಳ ಬಳಿಕ ಕತ್ತೆ ಸಾಕಾಣಿಕೆಗೆ ಮುಂದಾಗಿ ಆರಂಭಿಸಿಯೇ ಬಿಟ್ಟಿದ್ದಾರೆ. ಹೆಸರು ಐಸಿರಿ ಫಾರ್ಮ್ಸ್ (ಎಐಎಸ್‌ಐಆರ್‌ಐ). ಸದ್ಯ ಸುಮಾರು ೧೫ ಮಂದಿ ಉದ್ಯೋಗದಲ್ಲಿದ್ದಾರೆ. ಶ್ರೀನಿವಾಸ ಗೌಡರು ಬೀದರ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದವರು.

ಕತ್ತೆ ಸಾಕಾಣಿಕೆ

ಹಾಲಿಗೆ ಬೇಡಿಕೆ ಕತ್ತೆ

ಹಾಲಿಗೆ ತುಂಬಾ ಬೇಡಿಕೆ ಇದೆ. ಕತ್ತೆಯ ಮೂತ್ರ ಮಧುಮೇಹ, ರಕ್ತಹೀನತೆ, ಚರ್ಮರೋಗ, ಅಲರ್ಜಿ ಸೇರಿದಂತೆ ಹಲವು ರೋಗಗಳ ಶಮನಕ್ಕೆ ಸಹಕಾರಿ. ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಕತ್ತೆಗಳನನ್ನು ಉಳಿಸಿ ಅದರ ಪ್ರಯೋಜನಗಳನ್ನು ಜನತೆಗೆ ತಿಳಿಸುವ ಉದ್ದೇಶ ಶ್ರೀನಿವಾಸ ಗೌಡರದ್ದು. ಆಂಧ್ರಪ್ರದೇಶ, ಗುಜರಾತ್‌ನಿಂದ ೨೦ ಕತ್ತೆಗಳನ್ನು ತಂದು ಅವುಗಳನ್ನು ಪ್ರತ್ಯೇಕ ಕೊಟ್ಟಿಗೆಯಲ್ಲಿರಿಸಲಾಗಿದೆ. ಕತ್ತೆಯ ಹಾಲಿನಲ್ಲಿ ಅತೀ ಹೆಚ್ಚು ಪೌಷ್ಠಿಕಾಂಶ ಇದೆ. ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು, ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ಕುಡಿಸಿದರೆ ಪ್ರಯೋಜನಕಾರಿ. ಹೆಚ್ಚು ರೋಗ ನಿರೋಧಕ ಅಂಶಗಳಿರುವುದರಿಂದ ವಾರಕ್ಕೊಮ್ಮೆ ಹತ್ತು ಎಂ.ಎಲ್‌ನಷ್ಟು ಕುಡಿಯಲು ಬಳಸಿದರೆ, ಮೂರು ತಿಂಗಳಲ್ಲಿ ದೇಹದಲ್ಲಿರುವ ಸಾಮಾನ್ಯ ರೋಗಗಳು ವಾಸಿಯಾಗುತ್ತದೆ ಎನ್ನುತ್ತಾರೆ ಶ್ರೀನಿವಾಸ ಗೌಡರು.

ಹಿಂದೆ ಭಾರದ ವಸ್ತು ಸೇರಿದಂತೆ ಬಟ್ಟೆಗಳನ್ನು ಸಾಗಿಸಲು ಕತ್ತೆಯನ್ನು ಬಳಸಲಾಗುತ್ತಿತ್ತು. ಈಗ ತಂತ್ರಜ್ಞಾನ ಬೆಳೆದಿದೆ. ಪ್ರತೀ ಮನೆಗೂ ಬಟ್ಟೆ ಒಗೆಯುವ ಯಂತ್ರ ಬಂದಿದೆ. ಕತ್ತೆ ಯಾರಿಗೂ ಬೇಡವಾಗಿದೆ. ಆದರೆ ಕತ್ತೆಯ ಪ್ರಯೋಜನವನ್ನು ಜನತೆ ಪಡೆಯಲು ಕತ್ತೆ ಸಾಗಾಣಿಕೆ ಕೇಂದ್ರ ನೆರವಾಗಲಿದೆ. ಕತ್ತೆ ಹಾಲಿಗೆ ವಿದೇಶದಲ್ಲೂ ಬೇಡಿಕೆ ಇದೆ. ಲೀಟರ್‌ಗೆ ರೂ. ೫ ಸಾವಿರದಿಂದ ೭ ಸಾವಿರದ ತನಕ ದರವಿದೆ. ಕತ್ತೆ ಹಾಲನ್ನು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಮಂಗಳೂರಿನಲ್ಲಿ ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯ ಐಸಿರಿ ಫಾರ್ಮ್ನಲ್ಲಿ ೩೦ ಎಂ.ಎಲ್, ೫೦ ಎಂ.ಎಲ್, ೧೦೦, ೨೦೦ ಎಂಎಲ್‌ಗಳ ಪೊಟ್ಟಣಗಳಿವೆ. ೩೦ ಎಂ.ಎಲ್. ಪೊಟ್ಟಣಕ್ಕೆ ರೂ. ೧೫೦. ಕತ್ತೆ ಅಳಿವಿನಂಚಿನಲ್ಲಿದೆ. ಮುಂದಿನ ಪೀಳಿಗೆ ನೋಡಲೂ ಸಿಗುವುದು ಕಷ್ಟವಾಗಲಿದೆ. ಕತ್ತೆಯನ್ನು ಉಳಿಸುವ ಪ್ರಯತ್ನ ಇದಾಗಿದೆ. ೨೦೧೨ರಲ್ಲಿ ಭಾರತದಲ್ಲಿ ಮೂರು ಲಕ್ಷಗಳಷ್ಟಿದ್ದವು, ೨೦೧೯ರ ವೇಳೆಗೆ ೧.೨೬ ಲಕ್ಷಕ್ಕೆ ಇಳಿದಿದೆ. ಮಾಂಸಕ್ಕಾಗಿ ಕಳ್ಳಸಾಗಣೆಯಾಗುತ್ತಿದ್ದು, ಇದನ್ನು ತಡೆಯುವ ಕೆಲಸವಾಗಬೇಕಿದೆ. ಕೇಂದ್ರ ಆರಂಭಗೊಂಡ ಬಳಿಕ ಕತ್ತೆ ಹಾಲಿಗೆ ನಿರಂತರ ಕರೆಗಳು ಬರುತ್ತಿದೆ, ಇಲ್ಲಿಯ ತನಕ ಸುಮಾರು ೫,೬೦೦ಕ್ಕೂ ಅಧಿಕ ಕರೆಗಳು ಬಂದಿದೆ ಎನ್ನುತ್ತಿದ್ದಾರೆ ಡಾ. ಶ್ರೀನಿವಾಸ ಗೌಡ. ಹೆಚ್ಚಿನ ಮಾಹಿತಿಗೆ ಮೊಬೈಲ್: ೯೬೩೨೨೬೪೩೦೮ಕ್ಕೆ ಸಂಪರ್ಕಿಸಬಹುದು.