ಕತ್ತರಿ ಬಿಟ್ಟು ಅವರಿಲ್ಲ ಅವರನ್ನು ಬಿಟ್ಟು ಕತ್ತರಿ ಇಲ್ಲ

Advertisement

ರಾಜಕಾರಣಕ್ಕೂ ಕತ್ತರಿಗೂ ಅವಿನಾಭಾವ ಸಂಬಂಧ. ಇವರಿಗೆ ಕತ್ತರಿ ಇಲ್ಲದಿದ್ದರೆ ಸಮಾಧಾನವೇ ಇಲ್ಲ. ಆಗ ಕಮಲೇಸಿ ಗ್ಯಾಂಗಿನವರು ಆಪರೇಶನ್ ಸಲುವಾಗಿ ಮನೆಯಲ್ಲಿದ್ದ ಹಳೆ ಕತ್ತರಿಗಳನ್ನು ಸಾಣೆ ಹಿಡಿಸಿ ಚೂಪು ಮಾಡಿಸಿ ಭರ್ಜರಿ ಆಪರೇಶನ್ ಮಾಡಿ ಕತ್ತರಿಗೆ ನಮೋ ನಮಃ ಅಂದಿದ್ದರು. ಆಗ ಓಣಿ.. ಓಣಿಗಳಲ್ಲಿ ಕತ್ತರಿ ವರ್ಲ್ಡ್ಫೇಮಸ್ ಆಗಿತ್ತು. ಕತ್ತರಿಯಿಂದ ಇಷ್ಟೊಂದು ಉಪಯೋಗವಾಗುತ್ತದೆ ಎಂದು ನಮಗೆ ತಿಳಿದಿರಲೇ ಇಲ್ಲ ಎಂದು ಕೈ ತಂಡದವರು ಸಂದಿಮನಿ ಸಂಗವ್ವನ ಹತ್ತಿರ ಹೋಗಿ ಸಾಣೆ ಹಿಡಿಸಿ ಟೆಸ್ಟ್ ಮಾಡಿ, ಮತ್ತಷ್ಟು ಚೂಪು ಮಾಡಿ ಮೊದಲು ಅಕ್ಷರಗಳನ್ನು ಕತ್ತರಿಸಿದಾಗ… ಎಲ್ಲರೂ ಜಗಳ ಮಾಡಿ ಯಾಕೆ ಎಂದು ಕೇಳಿದಾಗ… ಕತ್ತರಿ ಇರುವುದೇ ಕತ್ತರಿಸುವುದಕ್ಕೆ ಎಂದು ಹೇಳಿದರು. ಸಂದಿಮನಿ ಸಂಗವ್ವನ ಮನೆಗೆ ನುಗ್ಗಿದ ಹಲವು ಜನ ಇನ್ನು ಮುಂದೆ ಕತ್ತರಿ ಚೂಪು ಮಾಡಿ ಕೊಡಬೇಡ ಎಂದು ತಾಕೀತು ಮಾಡಿದರು. ಅಷ್ಟಕ್ಕೆ ಇದು ನಿಲ್ಲಲಿಲ್ಲ. ಕಮಲೇಸಿ ಮಂದಿ ಸಿಕ್ಕಸಿಕ್ಕವರ ಮುಂದೆ ನೋಡಿದಿರಾ ಕತ್ತರಿ ಹೇಗೆ ಅಂತ ಎಂದು ಹೇಳಲು ಆರಂಭಿಸಿದರು. ಕೈ ಮಂದಿ ನಾನವನಲ್ಲ.. ನಾನವನಲ್ಲ… ಮಾಡಿದ್ದು ಅವನು ಎಂದು ಅವನ ಕಡೆ ತೋರಿಸಿದರು. ಆ ಯಪ್ಪ ಫೇರ್ ಆಂಡ್ ಲವ್ಲಿ ಹಚ್ಚಿಕೊಂಡು ಕನ್ನಡಿ ಮುಂದೆ ನಿಂತು ನಾನು ಕೆಂಪಾಗಿದೀನಿ… ಕೆಂಪಾಗಿದೀನಿ ಎಂದು ಎರಡೆರಡು ಸಲ ಹೇಳಿಕೊಂಡು ಕಿಸಕ್ಕನೇ ನಕ್ಕ. ಹೇಳಿದ್ಯಾರೋ.. ಕತ್ತರಿಸಿದ್ಯಾರೋ ಎಂದು ಹೇಳಿ ಸುಮ್ಮನಾದರು. ರಾತ್ರಿ ಕಳವಿನಿಂದ ಮತ್ತೆ ಸಂದಿಮನಿ ಸಂಗವ್ವನ ಮನೆಗೆ ಹೋಗಿ… ಕತ್ತರಿ ಚೂಪು ಮಾಡಿಸಿಕೊಂಡು ಹಾಳೆ ಕತ್ತರಿಸಿ ಇನ್ನು ಮುಂದೆ ಇದು ಬೇಡ ಅಂದರು. ಕಮಲೇಸಿ ಗ್ಯಾಂಗಿನವರು ಅಯ್ಯೋ ಕತ್ತರಿ ಅಂದರೆ ನಮ್ಮ ಪೇಟೆಂಟು… ನೀವು ಹೇಗೆ ಕತ್ತರಿಸುತ್ತೀರಿ ಎಂದು ಜಗಳ ಆರಂಭಿಸಿದ್ದಾರೆ. ಇದು ಮತ್ತೆ ಏನೋ ಆಗುತ್ತದೆ ಎಂದು ಕತ್ತರಿಸಿದ್ದನ್ನು ಜೋಡಿಸುತ್ತೇವೆ. ಈಗಾಗಲೇ ಫೆವಿಕಾಲ್ ಕಳಿಸಲಾಗಿದೆ ಎಂದು ಹೇಳಿದಾಗ ಇವರೂ ಸುಮ್ಮನಾದರು. ಎಕನಾಮಿಕ್ಸು… ಪಾಲಿಟಿಕ್ಸು ಎಂದು ನಡೆಯುವಾಗ ಇದೇನಿದು… ಕತ್ತರಿಕ್ಸು… ಸುಮ್ನೇ ಇದ್ಬುಡ್ರಪ್ಪಾ ಎಂದು ಮದ್ರಾಮಣ್ಣ ಅವರಿಗೆ ಕಾಲ್ ಮಾಡಿ ಹೇಳಿದ್ದಕ್ಕೆ.. ನೀವು ಏನಕ್ಕಾದರೂ ಬನ್ನಿ ನಮಗೆ ಏನಿಲ್ಲ. ಆದರೆ ಕತ್ತರಿ ವಿಷಯಕ್ಕೆ ಬಂದರೆ ನಾವು ಸುಮ್ಮನಿರಲ್ಲ ಅಂದು… ತಡೀರಿ.. ತಡೀರಿ ಇನ್ನೂ ಸ್ವಲ್ಪ ದಿನ ತಡೀರಿ ಮತ್ತೆ ಕತ್ತರಿ ಬರುತ್ತದೆ… ಆಗ ನಿಮಗೆ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದಾಗ… ಬಂಡೇಸಿ ಅವರ ತಮ್ಮ ಕುರೇಸಿ ಅವರು ಕತ್ತರಿಯನ್ನು ಬಿಸಾಡಿ… ಆಯಿತು ಆಯಿತು ಎಂಬ ಸುದ್ದಿಯನ್ನು ಖಾಸಗಿ ಚಾನಲ್ ವರದಿಗಾರ್ತಿ ಕಿವುಡನುಮಿ ಮೇಲಿಂದ ಮೇಲೆ ಬಿತ್ತರಿಸುತ್ತಿದ್ದಾಳೆ.