ಕಾಶ್ಮೀರ ವಿಷಯವಾಗಿ ಭಾರತದ ವಿರುದ್ಧ ಕಾಲ್ಕೆರೆದು ಯುದ್ಧಕ್ಕೆ ಬಂದು ಸೋತು ಸುಣ್ಣಾಗಿ ವಿಶ್ವಸಂಸ್ಥೆಗೆ ಅಡ್ಡಬಿದ್ದು ಎದೆಬಡಿದುಕೊಳ್ಳುವ ಪಾಕಿಸ್ಥಾನದ ಚಾಳಿಗೆ ಅರ್ಧ ಶತಮಾನದ ಇತಿಹಾಸವಿದೆ. ನಗುನಗುತ್ತಲೇ ಗಳಿಸಿದ ಪಾಕಿಸ್ಥಾನಕ್ಕೆ ಯುದ್ಧ ಮಾಡಿ ಹಿಂದುಸ್ಥಾನವನ್ನು ಸೇರಿಸಬೇಕೆಂಬ ಹತಾಶ ಆಶೆ ಹೊಂದಿರುವ ಪಾಕ್ ಆಡಳಿತಕ್ಕೆ ಭಾರತದ ಪ್ರತಿಯೊಂದು ನಡೆಯನ್ನೂ ಆಕ್ಷೇಪಿಸದಿರೆ ಸಮಾಧಾನವಾಗದು. ಹಿಂದುಸ್ಥಾನದ ಚಲನವಲನದ ಮೇಲೆಯೇ ಕಣ್ಣಿಟ್ಟು ಕದನವಿರಾಮ ಉಲ್ಲಂಘಿಸಿ, ಅವಕಾಶ ಸಿಕ್ಕರೆ ಸಮರ ಸಾರುವ ಉಗ್ರಸ್ಥಾನದ ನೀತಿಯೇ ವಿಚಿತ್ರ. ಅತ್ತ ಜನರಿಂದ ಆಯ್ಕೆಯಾದ ಪ್ರಜಾಪ್ರಭುತ್ವ ಸರಕಾರವೂ ಇಲ್ಲದೆ, ಇತ್ತ ಸೇನೆಯ ಕೈಯಲ್ಲಿ ಜೀವ ಒತ್ತೆಯಿಟ್ಟು ಒದ್ದಾಡುವ ಪಾಕ್ ಜನಸಾಮಾನ್ಯರಂತೂ ನಿತ್ಯವೂ ಫಜೀತಿಯ ಸನ್ನಿವೇಶ. ಹಾಗೊಮ್ಮೆ ಭಾರತದ ಮೇಲೇರಿ ಬಂದು ಪ್ರಶಾಸನ ಸೂತ್ರವನ್ನೇ ಕೈಗೆತ್ತಿಕೊಳ್ಳಲು ಹವಣಿಸಿದ ಪಾಕ್ ಘೋಷಿಸಿದ ೧೯೬೫ರ ಟ್ಯಾಂಕರ್ ಯುದ್ಧದಲ್ಲಿ ಭಾರತದ ಗೆಲುವಿಗೆ ಐವತ್ತೇಳು ವರ್ಷಗಳು ತುಂಬಿವೆ. ಭಾರತ ಸರಕಾರದ ದುರ್ಬಲ ಚಿಂತನೆಗಳು, ಆಯಕಟ್ಟಿನ ಜಾಗದಲ್ಲಿ ಕುಳಿತವರ ಸ್ವಹಿತಾಸಕ್ತಿಯ ನೀತಿಗಳ ನಡುವೆಯೂ ನೆಲಕಚ್ಚಿ ಹೋರಾಡಿದ ಸೈನಿಕರ ಅಪರಿಮಿತ ಹೋರಾಟದ ಫಲವಾಗಿ ೧೯೬೨ರ ಚೀನಾ ವಿರುದ್ಧದ ಯುದ್ಧ ಮಿಶ್ರಫಲವನ್ನಿತ್ತಿತು. ಭಾರತದ ಈ ಅಪಯಶಸ್ಸನ್ನು ಗಮನಿಸಿದ ಪಾಕ್, ಸಮರಕ್ಕೆ ಸಿದ್ಧತೆ ನಡೆಸಿತು. ಅದೇ ಹೊತ್ತಿಗೆ ಶ್ರೀನಗರದ ಹಜರತಬಾಲ್ ಮಸೀದಿಯಲ್ಲಿ ಪ್ರವಾದಿ ಮಹಮ್ಮದರದೆನ್ನಲಾದ ಕೂದಲು ಕಣ್ಮರೆಯಾದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಯಿತು. ದೇಶದೊಳಗೆ ಹಿಂದೂ ಮುಸ್ಲಿಂ ಬಾಂಧವ್ಯವು ಕದಡಿ ತನ್ಮೂಲಕ ಪರಿಸ್ಥಿತಿಯ ಲಾಭಪಡೆಯಲು ಹವಣಿಸಿದ ಪಾಕ್ ಅಧ್ಯಕ್ಷ ಮಹಮದ್ ಅಯೂಬ್ ಖಾನ್ ತನ್ನ ಸೈನಿಕರು ಹಾಗೂ ಉಗ್ರರನ್ನು ಭಾರತದೊಳಗೆ ನುಸುಳಲು ಆಜ್ಞಾಪಿಸಿ, ಸ್ಥಳೀಯ ಉಗ್ರಪ್ರೇಮಿಗಳ ಕೈಗೆ ಬಂದೂಕಿತ್ತು ಸ್ವರ್ಗಕನ್ಯೆಯರ ಆಸೆ ತೋರಿಸಿ ಆಪರೇಶನ್ ಜಿಬ್ರಾಲ್ಟರ್ ಘೋಷಿಸಿದ್ದು ಭಸ್ಮಾಸುರನ ಸನ್ನಿವೇಶಕ್ಕೆ ನಾಂದಿ ಹಾಡಿತು. ಯುದ್ಧೋನ್ಮಾದದಲ್ಲಿ ಅಯೂಬ್ ಪೂಂಛ್ ಪ್ರದೇಶದಲ್ಲಿ ವಿಕ್ಷಿಪ್ತ ಆಕ್ರಮಣ ನಡೆಸಿ ಕಾರ್ಗಿಲ್ ವಶಪಡಿಸಲು ಯೋಜನೆ ರೂಪಿಸಿ ಕಛ್ ಭೂಭಾಗದಿಂದ ಗೆಲುವಿನ ಹಾಡು ಹಾಡಲು ಪ್ರಯತ್ನಿಸಿದ. ಮುಸ್ಲಿಮರು ದಂಗೆಯೆರೆ ಅದರಿಂದಾಗುವ ಸಂಪೂರ್ಣ ಲಾಭವನ್ನು ಪಡೆಯುವುದರ ಜೊತೆಜೊತೆಗೆ ಭಾರತದ ಆಡಳಿತದಲ್ಲೂ ಪ್ರಭಾವ ಬೀರಬಹುದೆಂಬ ಹುಂಬತನಕ್ಕೆ ಅಡ್ಡಿಯಾದದ್ದೇ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ದಿಟ್ಟ, ಧೀಮಂತ ನಡೆ. ತನ್ನ ಹಳೇಸ್ನೇಹಿತ ನೆಹರೂ ಜಾಗದಲ್ಲಿ ಶಾಸ್ತ್ರಿಯವರು ಆಸೀನರಾಗಿನ್ನು ಮರೆತಿ ಖಾನ್ ಲೆಕ್ಕಾಚಾರ ಮೇಲೆ ಕೆಳಗಾಯಿತು. ಆದರೂ ಈ ಕುಳ್ಳ ಮನುಷ್ಯ ಏನು ಮಾಡಿಯಾನೆಂಬ ಸೊಕ್ಕಿನಿಂದ ಅಬ್ಬರಿಸಿದ ಅಯೂಬ್ ಅಹಂಕಾರ ಕೆಲವೇ ಕೆಲವು ದಿನಗಳಲ್ಲಿ ರ‍್ರನೆ ಇಳಿದದ್ದು ಇತಿಹಾಸ. ಭಾರತದ ಗಡಿಯೊಳಗೆ ನುಗ್ಗಿ ತಮಗಿಷ್ಟ ಬಂದಂತೆ ಆಟವಾಡಬಹುದೆಂಬ ನಿರೀಕ್ಷೆಯಲ್ಲಿ ಪಾಕಿಸ್ಥಾನಕ್ಕೆ ಛಳಿಜ್ವರ ಬರಿಸುವ ದೀಕ್ಷೆತೊಟ್ಟ ವಾಮನಾಕಾರದ ಶಾಸ್ತ್ರೀಜಿ, ತ್ರಿವಿಕ್ರಮನಾಗಿ ಬೆಳೆದು ದೇಶಕ್ಕೆ ಅಭಯವಿತ್ತು ಮುನ್ನಡೆಸಿದ್ದು ಭಾರತದ ಸೌಭಾಗ್ಯ.
ನಮ್ಮ ಸೈನಿಕರ ಸಮರ್ಥ ಪ್ರತ್ಯುತ್ತರದಿಂದ ಗಲಿಬಿಲಿಗೊಳಗಾಗಿ ಗಡಿಯೊಳಗೆ ನೇರಪ್ರವೇಶಿಸಿ ಕಛ್ ಪ್ರಾಂತದಲ್ಲಿ ಕುತಂತ್ರಗೈದು ಅಕ್ನೂರ್ ಸೇತುವೆ ವಶಪಡಿಸಲು ಪಾಕಿಸ್ಥಾನ ಹೊಂಚುಹಾಕಿತ್ತು. ಕಛ್ ಭಾಗದಿಂದ ನುಗ್ಗಿದರೆ ಅಪಾರ ಪ್ರಮಾಣದ ಧನಹಾನಿ, ಜನಹಾನಿಯ ಜೊತೆಗೆ ಭಾರತದ ಸಾಮರಸ್ಯಕ್ಕೂ ಕೊಳ್ಳಿಯಿಡಬಹುದೆಂದು ಯೋಚಿಸಿ ಯುದ್ಧವಾಗುವ ಮೊದಲೇ ಗೆಲುವಿನ ನಗೆ ಬೀರಿದ ಅಯೂಬ್ ನೇತೃತ್ವದ ಸೇನೆಯು ಕನಸಿನಲ್ಲೂ ಊಹಿಸಲು ಅಸಾಧ್ಯವಾದ, ಬೆಚ್ಚಿಬೀಳುವ ತಂತ್ರಗಾರಿಕೆಯನ್ನು ಭಾರತ ಪ್ರದರ್ಶಿಸಿತು. ಗುರೂಜಿ ಗೋಳ್ವಲ್ಕರರ ಸೂಚನೆಯಂತೆ ಲಾಹೋರಿಗೆ ನುಗ್ಗಲು ಭಾರತೀಯ ಸೈನ್ಯಕ್ಕೆ ಆದೇಶಿಸಿದ ಶಾಸ್ತ್ರೀಜಿಯವರು ಹಮ್ ಹತ್ಯಾರೋಂಕೋ ಹತ್ಯಾರೋಂಸೆ ಜವಾಬ್ ದೇಂಗೇ ಎಂದು ಘರ್ಜಿಸಿದರು. ಅದುವರೆಗೆ ಶಾಂತಮೂರ್ತಿಯಂತಿ ಪ್ರಧಾನಿ ಪ್ಲವಂಗಮರಾದನ್ನು ಅರಗಿಸಿಕೊಳ್ಳುವುದು ಪಾಕ್ ಸೇನಾನಿಗಳಿಗೆ ಕಷ್ಟವಾಯಿತು. ಭಾರತದ ದಿಟ್ಟ ನಿರ್ಧಾರ ಫಲಿಸಿತು. ಪ್ರತಿಕೂಲ ಪರಿಸ್ಥಿತಿಯಲ್ಲೂ ರಾತ್ರಿಹಗಲೆನ್ನದೆ ಕಾದಾಡಿ, ಕಗ್ಗತ್ತಲಿನಲ್ಲಿ ತೆವಳಿ ಕಾರ್ಯಾಚರಣೆಗೈದು ಪೀರ್ ಪಂಜಲ್ ಪರ್ವತಶ್ರೇಣಿಯ ನಿರ್ಣಾಯಕ ಹಾಜಿಪೀರ್ ಕಣಿವೆಯನ್ನು ಗೆದ್ದ ನಮ್ಮ ಸೈನಿಕರ ಸಾಹಸಕ್ಕೆ ಅಯೂಬನ ಜಂಘಾಬಲವೇ ಉಡುಗಿತು. ಚೀನಾದೆದುರು ಸೋತವರೆಂದು ಹೀಗಳೆದು, ಸೈನ್ಯಬಲವೇ ಕುಸಿದಿದೆಯೆಂದು ಸುಳ್ಳು ಮಾಹಿತಿ ಹಂಚಿ ಮಾನಸಿಕ ಯುದ್ಧ ಗೆಲ್ಲಲು ಹವಣಿಸಿದ ಪಾಕಿಗಳ ಮೀಸೆ ಮಣ್ಣಾಯಿತು. ನೋಡನೋಡುತ್ತಿಂತೆ ಪಾಕಿಸ್ಥಾನದ ೪೫೦ಕ್ಕೂ ಹೆಚ್ಚು ಟ್ಯಾಂಕರ್ ಹೊಡೆದುರುಳಿಸಿದ ಭಾರತೀಯ ಸೈನ್ಯ ಲಾಹೋರಿನಲ್ಲಿ ತ್ರಿವರ್ಣಧ್ವಜ ಹಾರಾಡಿಸಲೂ ಹಿಂಜರಿಯುವುದಿಲ್ಲವೆಂದು ಪಾಕ್ ಆಡಳಿತಕ್ಕೆ ಅರಿವಾದಾಗ ಚೀನಾದ ಮೊರೆಹೋಯಿತು. ಅದುವರೆಗೆ ಸುಮ್ಮನಿದ್ದು ಆಟ ನೋಡುತ್ತಿ ಚೀನಾದ ಗುಟುರಿಗೆ, ಒಂದು ವೇಳೆ ಚೀನಾ ಭಾರತದ ಮೇಲೆ ದಾಳಿ ನಡೆಸಿದರೂ ನಾವು ಎದುರಿಸಲು ಸಿದ್ಧ. ದೇಶದ ಆಂತರ್ಯಕ್ಕೆ ಎದುರಾಗುವ ಪ್ರತಿಯೊಂದು ಸವಾಲನ್ನೂ ಹೃತ್ಪೂರ್ವಕವಾಗಿ ಎದುರ್ಗೊಳ್ಳುತ್ತೇವೆ. ನೀತಿಗೆ ತಕ್ಕ ಭಾಷೆಯನ್ನು ಪ್ರಯೋಗಿಸಲು ತಿಳಿದಿದೆ ಎಂದು ಉತ್ತರಿಸಿದ ಶಾಸ್ತ್ರಿಜಿ ಸಿಂಹನಾದಕ್ಕೆ ಚೀನಾ ಸಡಗಿತು. ಅಮೇರಿಕಾದ ಶಸ್ತ್ರಾಸ್ತ್ರ ಬೆಂಬಲ, ಚೀನಾದ ಆರ್ಥಿಕ ಸಹಕಾರದ ಅಮಲಿನಲ್ಲಿ ಭಾರತದ ನಾಯಕತ್ವವನ್ನು ನಿರ್ಲಕ್ಷಿಸಿ ಪಾಕ್ ಎಣಿಕೆ ತಪ್ಪಿತು. ನೆಲಕಚ್ಚಿ ಹೋರಾಡಿ, ಕಣ್ಮುಚ್ಚಿ ತೆರೆಯುವುದರೊಳಗೆ ಸೇನಾನೆಲೆ ಧ್ವಂಸಗೊಳಿಸುವ ಭಾರತ ಸೈನ್ಯದ ಪರಾಕ್ರಮದೆದುರು ಸೊರಗಿ ಸತ್ತ ಪಾಕಿಸ್ಥಾನದ ಎಂಬತ್ತೈದು ಪ್ರತಿಶತ ಶಸ್ತ್ರ ಖಾಲಿಯಾಗಿರೆ ಭಾರತದ ಬತ್ತಳಿಕೆಯಲ್ಲಿ ಎಂಬತ್ತಾರು ಪ್ರತಿಶತ ಶಸ್ತ್ರಾಸ್ತ್ರ ಮತ್ತೆ ಉಳಿದಿತ್ತು. ಹಾಗಾಗಿಯೇ ಶಾಸ್ತ್ರೀಜಿ ಗುಡುಗಿದ್ದು, ಚೀನಾ ಸಮರ ಸಾರಿದರೂ ಒಂದು ಕೈ ನೋಡುವೆವು.
ಬಂದ ದಾರಿಗೆ ಸುಂಕವಿಲ್ಲವೆಂದು ವಿಶ್ವಸಂಸ್ಥೆಯ ಬಾಗಿಲು ಬಡಿದು ೧೯೬೫ರ ಸೆಪ್ಟೆಂಬರ್ ೨೨ರಂದು ನಡೆದ ಭದ್ರತಾ ಸಮಿತಿಯ ತುರ್ತುಸಭೆಯಲ್ಲಿ ಪ್ರಾಣಭಿಕ್ಷೆ ಕೋರಿದ ಪಾಕ್ ವಿದೇಶಾಂಗ ಸಚಿವ ಭುಟ್ಟೋ, ಕದನವಿರಾಮಕ್ಕೆ ಆಗ್ರಹಿಸಿದ. ನಮ್ಮ ಸೈನಿಕರ ತ್ಯಾಗ, ಬಲಿದಾನಗಳ ಕಾರಣದಿಂದ ಮಹಾವಿಜಯ ನಮ್ಮದಾದರೂ, ಮುಂದೆ ಅನುಮಾನಾಸ್ಪದ ಸಾವಿಗೀಡಾದ ಶಾಸ್ತ್ರೀಜಿಯವರು ತಾಷ್ಕೆಂಟಿನ ಸಭೆಯಲ್ಲಿ ಸಹಿ ಹಾಕಿರು ಎಂದೇ ನಂಬಿಸಿ ನಡೆದ ಒಪ್ಪಂದದ ಪ್ರಕಾರ ಗಡಿನಿಯಂತ್ರಣ ರೇಖೆ ಅಸ್ತಿತ್ವಕ್ಕೆ ಬಂದು, ಹಾಜಿಪೀರ್ ಕಣಿವೆ ಕೈತಪ್ಪಿತು. ಪ್ರತಿಬಾರಿಯೂ ಕುತಂತ್ರದ ಮಾರ್ಗ ಹಿಡಿದು ಅಂತಾರಾಷ್ಟ್ರೀಯ ಒಪ್ಪಂದ ಹಾಗೂ ಒತ್ತಡಗಳ ಮೂಲಕವೇ ಭಾರತವನ್ನು ಬಗ್ಗಿಸಲು ಪ್ರಯತ್ನಿಸುವ ಪಾಕ್ ಇಲ್ಲಿ ಸೋತು ಗೆದ್ದಿತು. ಭಾರತ ಗೆದ್ದು ಸೋತಿತು. ಹಾಗಿರೂ ಆ ಮಹಾಗೆಲುವನ್ನು ಮರೆಯುವುದಂತೂ ಅಸಾಧ್ಯ. ತನ್ನ ತಲೆಗೆ ಐವತ್ತು ಸಾವಿರ ಬೆಲೆ ಕಟ್ಟಿದ ಪಾಕ್ ಉತ್ತರಕುಮಾರ ಸೇನಾನಿಗಳನ್ನು ಕಾದು ಕುಳಿತ ಸಮರಾಂಗಣದ ಧೀರ ಲೆಪ್ಟಿನೆಂಟ್ ಕರ್ನಲ್ ರಣಜಿತ್ ಸಿಂಗ್ ದಯಾಳರ ಶೌರ್ಯ, ಟ್ಯಾಂಕರ್ ಶವಗಳನ್ನೆಣಿಸಿ ಮೀಸೆ ತಿರುವಿದ ಪರಮವೀರ ಚಕ್ರ ಪುರಸ್ಕೃತ ಕರ್ನಲ್ ಅಬ್ದುಲ್ ಹಮೀದರ ಸಾಹಸ, ಮುಂದೊಮ್ಮೆ ಲಾಹೋರ್ ಭಾಗದಲ್ಲಿ ಸಿಗೋಣವೆಂದು ಹೇಳಿ ಪಾಕ್ ಜಂಘಾಬಲವನ್ನೇ ಉಡುಗಿಸಿದ ಗೆಲುವಿನ ರೂವಾರಿ ಆಶಾರಾಮ ತ್ಯಾಗಿ, ಗಡಿರೇಖೆಗಳು ನಿರ್ಧಾರವಾಗುವುದು ಬೇಲಿಯಿಂದಲ್ಲ ಬದಲಾಗಿ ರಕ್ತದ ಕಲೆಯಿಂದ ಎಂಬ ಅಸೀಮ ತ್ಯಾಗದ ನುಡಿಗಳನ್ನಾಡಿ ಶತ್ರುಗಳ ಗುಂಡಿನಿಂದ ಅವರಿಗೇ ಗುರಿಯಿಟ್ಟ ಪೂನಂ ಸಿಂಗ್, ತಾನು ಸೈನ್ಯ ಸೇರಿದ್ದು ಶತ್ರುಗಳ ಎದೆಹೊಕ್ಕ ಗುಂಡೆಣಿಸಲೇ ಹೊರತು ಲೆಕ್ಕಪತ್ರ ಬರೆಯಲಲ್ಲವೆಂದು ಘರ್ಜಿಸಿ ಹನ್ನೆರಡು ಶತ್ರುಗಳ ಶಿರತರಿದ ಗುರುನಾಮ್ ಸಿಂಗ್, ಪಾಕ್ ಸರ್ಪಗಾವಲಿನ ನಡುವೆ ಅವರ ಕೋಟೆಯೊಳಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಲೂಟಿ ಹೊಡೆದ ಧೀರ ಲಕ್ಷ್ಮಣನ್, ಜೀವನ ಮುಗಿಸುವುದರೊಳಗೊಮ್ಮೆ ಗಡಿ ಕಾಯಬೇಕೆಂದು ನಿರ್ಧರಿಸಿ ಹುಚ್ಚು ಹಿಡಿದವನಂತೆ ಪಟ್ಟು ಹಿಡಿದು ಹುತಾತ್ಮನಾದ ಸುರೇಶ್ ಮಿಶ್ರಾ, ಪಾಕಿಗಳನ್ನು ನರಕಕ್ಕೆ ಅಟ್ಟದೆ ಮರಣಿಸಿದರೆ ಮುಕ್ತಿಯಿಲ್ಲ, ಬದುಕುಳಿದು ಊರಿಗೆ ಮರಳಿದರೆ ಸ್ವಾಗತವಿಲ್ಲವೆಂದು ನುಡಿದು ಹೌತಾತ್ಮ್ಯದ ಶಿಖರವೇರಿದ ಭಗವಾನ್ ಸಿಂಗ್, ಮೊದಲು ಯುದ್ಧ – ಆಮೇಲೆ ಗೆಲುವು – ಮತ್ತೆ ಮದುವೆ ಎಂಬ ನಿಯಮವನ್ನು ತಂದೆಗೆ ಹಾಕಿದ ತಪನ್ ಚೌಧರಿಯೇ ಮೊದಲಾದ ದಧೀಚಿಪರಂಪರೆಯ ಸಾವಿರಾರು ಸೈನಿಕರ ಅನನ್ಯ ದೇಶಪ್ರೇಮ, ನಿರ್ಭೀತ ನಡೆಯಿಂದಾಗಿ ಭಾರತ ವಿಶ್ವಶಕ್ತಿಯಾಗುವತ್ತ ಮುನ್ನುಗ್ಗಿತು. ಪಾಕಿಸ್ಥಾನದ ಮೋಸ, ವಂಚನೆಗಳಿಗೆ ತಕ್ಕ ಪಾಠ ಕಲಿಸಿ ಅದರ ಬುಡಕ್ಕೆ ಬೆಂಕಿಯಿಟ್ಟು ವಿಜಯಧ್ವಜ ಹಾರಿಸಿದ ಆ ಮಹಾಸಾಹಸಿಕ ವಿಜಯವನ್ನು ನಾವಿಂದು ಆಚರಿಸದಿರೆ ಬಹುದೊಡ್ಡ ಅಪಚಾರವಾದೀತು. ಅಲ್ಲವೇ?