ಕಂದಕಕ್ಕೆ ಉರುಳಿದ ಬಸ್ಸಿಗೆ ಬೆಂಕಿ: ಪ್ರಯಾಣಿಕರು ಪಾರು

ಬೆಳಗಾವಿ
Advertisement

ಬೆಳಗಾವಿ: ಬೆಳಗಾವಿಯಿಂದ ಮಹಾರಾಷ್ಟ್ರದ ರತ್ನಗಿರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಉರುಳಿ ಬಿದ್ದು ಬೆಂಕಿಗೆ ಆಹುತಿಯಾಗಿರುವ ಘಟನೆ ವರದಿಯಾಗಿದೆ.
ಬೆಳಗಾವಿಯಿಂದ ಮಧ್ಯಾಹ್ನ ರತ್ನಗಿರಿಗೆ ಹೊರಟಿದ್ದ ಬಸ್ ಕೊಲ್ಹಾಪುರ ದಾಟಿ ಮುಂದಕ್ಕೆ ಹೋಗುತ್ತಿದ್ದ ವೇಳೆ ಜಾಧವವಾಡಿ ಬಳಿ ಪಾದಚಾರಿಯೊಬ್ಬ ಬಸ್‌ಗೆ ಅಡ್ಡ ಬಂದಿದ್ದಾನೆ. ಆತನ ಜೀವ ಉಳಿಸುವುದಕ್ಕೆ ಚಾಲಕ ಬಸ್ ಅನ್ನು ಸೈಡಿಗೆ ಹೊರಳಿಸಿದ್ದಾರೆ.
ಅಷ್ಟರಲ್ಲಿಯೇ ಅದು ಪಕ್ಕದ ಕಂದಕಕ್ಕೆ ಉರುಳಿ ಬಿದ್ದು ಈ ಅನಾಹುತ ಸಂಭವಿಸಿದೆ. ಬಸ್‌ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಒಟ್ಟು ೧೩ ಮಂದಿ ಪ್ರಯಾಣಿಕರು ಇದ್ದರು ಎಂದು ಗೊತ್ತಾಗಿದೆ. ಆದರೆ ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದಾಗಿ ತುರ್ತು ನಿರ್ಗಮನ ಗ್ಲಾಸ್ ಒಡೆದು ಪ್ರಯಾಣಿಕರನ್ನು ಹೊರಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಪೂರ್ತಿ ಬಸ್ ವ್ಯಾಪಿಸಿದೆ.
ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಹೊರಬಂದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.