ಕುಷ್ಟಗಿ: ತಾಲೂಕಿನ ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಚಿಕ್ಕಿತ್ಸೆಗೆಂದು ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ರೋಗಿಗಳಿಗೆ ಬರೆದುಕೊಡುವ ಔಷಧಿ ಚೀಟಿ ಮೇಲೆ `ಮೇ ೧೦ರಂದು ಮತದಾನ’ ಎಂಬ ಮುದ್ರೆ ಹಾಕಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ತಿಳಿಹೇಳುತ್ತಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಮಾತು ಚುನಾವಣಾ ಆಯೋಗದಿಂದ ಕೇಳಿಬರುತ್ತಿರುತ್ತದೆ. ಅದೇ ರೀತಿ ಆಯೋಗ ಅನೇಕ ಜಾಗೃತಿ ಕಾರ್ಯಕ್ರಮಗಳನ್ನೂ ಪ್ರತಿ ಐದು ವರ್ಷಕ್ಕೊಮ್ಮೆ ಹಮ್ಮಿಕೊಳ್ಳುತ್ತದೆ. ತಾಲೂಕಿನ ಖಾಸಗಿ ಆಸ್ಪತ್ರೆ ವೈದ್ಯರೂ ಸಹ ಚುನಾವಣಾ ಆಯೋಗದ ಹಾದಿಯಲ್ಲಿ ಸಾಗಿ ಸಾಮಾಜಿಕ ಕಳಕಳಿಯ ದೃಷ್ಟಿಕೋನ ಇಟ್ಟುಕೊಂಡು ವಿಶೇಷ ಮಾದರಿಯಲ್ಲಿ ಮತದಾನ ಜಾಗೃತಿಗೆ ಮುಂದಾಗಿದ್ದಾರೆ.
ಡಾ.ರವಿಕುಮಾರ ದಾನಿ ಈ ಸಲದ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಮತಗಟ್ಟೆಗಳಿಗೆ ತೆರಳಿ ನೂರರಷ್ಟು ಮತದಾನ ಮಾಡುವಂತೆ ರೋಗಿಗಳಿಗೆ ಪ್ರೇರೇಪಿಸುತ್ತಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಸದೃಢವಾದ ದೇಶ ಮತ್ತು ಪ್ರಜಾಪ್ರಭುತ್ವಗಟ್ಟಿಗೊಳಿಸಲು ಸಾಧ್ಯ ಎಂದು ರೋಗಿಗಳಿಗೆ ತಿಳಿಹೇಳುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆಯೂ ವ್ಯಕ್ತವಾಗಿದೆ.
ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದ್ದು, ಇಂತಹ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸಿಕೊಡಲಾಗಿದೆ. ಈ ಹಕ್ಕಿನಿಂದ ವಂಚಿತರಾಗಬಾರದು. ಮೇ ೧೦ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ ಎನ್ನುತ್ತಾರೆ ಡಾ.ರವಿಕುಮಾರ ದಾನಿ.