ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಪಾವತಿ: ಕ್ರಮಕ್ಕೆ ಒತ್ತಾಯ

Advertisement

ವಿಧಾನ ಪರಿಷತ್: ನಗರದಲ್ಲಿ ೫ ವರ್ಷಗಳಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳಿಗೆ ೨ ಬಾರಿ ಬಿಬಿಎಂಪಿ ಹಣ ಪಾವತಿ ಮಾಡಿದೆ. ಭ್ರಷ್ಟಾಚಾರ ಎಸಗಿರುವುದು ಸಾಬೀತಾಗಿದ್ದರೂ ಸರ್ಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಯು. ಬಿ. ವೆಂಕಟೇಶ್ ಆಗ್ರಹಿಸಿದರು.
ಗಮನಸೆಳೆಯುವ ಸೂಚನೆಗಳ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸದ ಅವರು ಸರ್ಕಾರ ಕ್ರಮ ಜರುಗಿಸಿಲ್ಲ. ಕೂಡಲೇ ಕ್ರಮ ಜರುಗಿಸಬೇಕು ಎಂದರು. ಒಂದು ಬಾರಿ ಆನ್‌ಲೈನ್‌ನಲ್ಲಿ ೧.೫ ಕೋಟಿ ರೂ. ಹಾಗೂ ಮತ್ತೊಂದು ಬಾರಿ ಆಫ್‌ಲೈನ್‌ನಲ್ಲಿ ೧.೫ ಕೋಟಿ ರೂ. ಹಣ ಪಾವತಿಯಾಗಿದೆ. ಈ ಬಗ್ಗೆ ಹಲವು ಪತ್ರಿಕೆಗಳಲ್ಲಿ ವರದಿ ಕೂಡ ಪ್ರಕಟವಾಗಿದೆ. ಹೀಗಿದ್ದರೂ ಸರ್ಕಾರ ೨ ಬಾರಿ ಹಣ ಪಾವತಿ ಮಾಡಿದ ಅಧಿಕಾರಿಗಳು ಹಾಗೂ ಹಣ ಪಡೆದ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.
ಸಚಿವ ಎನ್.ಎಸ್. ಭೋಸರಾಜು ಉತ್ತರಿಸಿ ಒಂದು ಕಾಮಗಾರಿಗೆ ೨ ಬಾರಿ ಬಿಲ್ ಪಡೆದಿರುವ ಪ್ರಕರಣಗಳ ತನಿಖೆಗೆ ನಿವೃತ್ತ ನ್ಯಾ. ಎಚ್.ಎಸ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಆಯೋಗ ತನಿಖೆ ನಡೆಸುತ್ತಿದ್ದು ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದರು.
ಇದಕ್ಕೆ ಒಪ್ಪದ ಯು. ಬಿ. ವೆಂಕಟೇಶ್ ಅವರು ಅವ್ಯವಹಾರ ನಡೆದಿರುವುದು ಸಾಬೀತಾಗಿರುವುದರಿಂದ ತನಿಖೆ ಏಕೆ ಕೂಡಲೇ ಕ್ರಮ ಜರುಗಿಸಿ ಎಂದರು. ಸಚಿವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದರು.