ಕೀರ್ತಿಶೇಖರ, ಕಾಸರಗೋಡು
ಬೆಳಗಾವಿ: ರಾಮದುರ್ಗ ತಾಲೂಕಿನ ತುರಾನೂರು ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಈ ಸಾವುಗಳಿಗೆ ಗ್ರಾಮದ ದುರ್ಗಾದೇವಿಯ ಶಾಪವೇ ಕಾರಣ ಎಂಬ ವದಂತಿಗಳು ಹರಡುತ್ತಿವೆ.
ತುರಾನೂರು ಗ್ರಾಮದೇವತೆ ದುರ್ಗಾದೇವಿಗೆ ಪ್ರತಿ ದಿನ ಪೂಜೆ ಸಲ್ಲಿಸುವ ವೇಳೆ ಎಣ್ಣೆ ಅಭಿಷೇಕ ಮಾಡುವುದು ಪದ್ಧತಿ. ಹೀಗೆ ಅಭಿಷೇಕ ಮಾಡಿದ ಎಣ್ಣೆಯ ಜಿಗಿಯನ್ನು ಕೆತ್ತನೆ ಮಾಡಿ ತೆಗೆಯುವ ವೇಳೆ ಅರ್ಚಕರು ತೋರಿದ ನಿರ್ಲಕ್ಷ್ಯದಿಂದಾಗಿ ದುರ್ಗಾ ಮೂರ್ತಿ ವಿಗ್ರಹದ ಕಣ್ಣಿಗೆ ಏಟು ಬಿದ್ದು ವಿರೂಪವಾಗಿದ್ದು ಇದು ದೇವಿ ಶಾಪಕ್ಕೆ ಕಾರಣವಾಗಿರುವುದರಿಂದಲೇ ಹೀಗೆ ಅಪಮರಣಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಅಷ್ಟಕ್ಕೂ ಈ ಸಾವುಗಳು ದುರ್ಗಾದೇವಿಯ ಶಾಪವೋ ? ಕಾಕತಾಳಿಯವೋ ಗೊತ್ತಿಲ್ಲ. ಆದರೆ ಜನ ಮಾತ್ರ ಭಯಭೀತರಾಗಿದ್ದಾರೆ. ಇನ್ನು ಈ ವದಂತಿಗೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಜೋಗತಿಯೊಬ್ಬರ ಮೈಮೇಲೆ ದುರ್ಗೆ ಆವಾಹನಿಸಿ ನನ್ನ ಎರಡು ಕಣ್ಣು ಕೆತ್ತನೆ ಮಾಡಿರಬಹುದು. ಆದರೆ ನನಗೆ ಮೈತುಂಬಾ ಕಣ್ಣುಗಳಿವೆ. ಊರಿಗೆ ಊರನ್ನೇ ಕೊಂಡೊಯ್ಯುತ್ತೇನೆ ಎಂದಿರುವುದಕ್ಕೂ ಈಗ ದಿನಂಪ್ರತಿ ನಡೆಯುತ್ತಿರುವ ಮರಣಗಳ ಸರಣಿಗೂ ಸಂಬAಧ ಕಲ್ಪಿಸಲಾಗುತ್ತಿದ್ದು ಸದ್ಯ ದುರ್ಗಾದೇವಿ ಪ್ರೀತಿಗಾಗಿ ಪೂಜೆ, ಹೋಮ ಹವನಾದಿಗಳನ್ನು ಗ್ರಾಮಸ್ಥರು ನಡೆಸುತ್ತಿದ್ದಾರೆ. ಅರ್ಚಕರ ಸಲಹೆಯಂತೆ ಕಳೆದ ೧೫ ದಿನಗಳಿಂದ ದೇವಿಯ ಗರ್ಭಗುಡಿ ಮುಚ್ಚಲಾಗಿದ್ದು, ಅರ್ಚಕರು ಬಂದಾಗ ಮಾತ್ರ ಗರ್ಭಗುಡಿ ತೆರೆದು ಪೂಜೆ ಸಲ್ಲಿಸಲಾಗುತ್ತಿದೆ.
ನ. ೧೫ರಂದು ಜಾತ್ರೆಗೆ ನಿರ್ಧಾರ:
ಸಾವಿನ ಸರಣಿಯಿಂದ ಕಂಗಾಲಾಗಿರುವ ಗ್ರಾಮಸ್ಥರೆಲ್ಲ ಸೇರಿ ಈ ತಿಂಗಳ ೧೫ರಂದು ದುರ್ಗಾದೇವಿ ಜಾತ್ರೆ ಮಾಡುವ ನಿರ್ಧಾರ ಮಾಡಿದ್ದಾರೆ. ಆ ವೇಳೆ ಹೋಮ-ಹವನ, ಕುಂಭಮೇಳ, ಉಡಿ ತುಂಬುವ ಕಾರ್ಯ ನಡೆಸುವಂತೆ ಅರ್ಚಕರು ಸಲಹೆ ನೀಡಿದ್ದಾರೆ.
ಪ್ರತಿ ಮಂಗಳವಾರ ವಾರ ಹಿಡಿದು ಮನೆಯಲ್ಲಿಯೇ ದುರ್ಗಾಪೂಜೆ, ಜಪತಪ ಪಾಲಿಸುತ್ತಿದ್ದಾರೆ. ಇನ್ನು ಜಾತ್ರೆ ಸಂದರ್ಭದಲ್ಲಿ ತಮ್ಮ ಗ್ರಾಮದ, ಮನೆಗೆ ತಟ್ಟಿದ ಶಾಪದಿಂದ ಮುಕ್ತರಾಗಲು ಮನೆಗೊಂದು ಕುರಿ ಮರಿಯನ್ನು ದೇವಿಗೆ ಹರಕೆ ಕೊಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.