ಬಡವರ ಹಣಕ್ಕೆ ಪೈಸೆಪೈಸೆಗೂ ಲೆಕ್ಕ ಕೇಳುವ ಸರ್ಕಾರ ಒಬ್ಬ ಗುತ್ತಿಗೆದಾರನ ಮನೆಯಲ್ಲಿ ೪೨ ಕೋಟಿ ರೂ. ನೋಟು ಇರಲು ಅವಕಾಶ ನೀಡಿದ್ದು ಹೇಗೆ? ಹಿಂದೆ ಪ್ರಬಲವಾಗಿದ್ದ ಲೋಕಾಯಕ್ತವನ್ನು ದುರ್ಬಲಗೊಳಿಸಿದವರು ಯಾರು?
ಕರ್ನಾಟಕದಲ್ಲಿ ಐಟಿ ದಾಳಿಯಿಂದ ೧೦೦ ಕೋಟಿರೂ. ಕಂತೆಕಂತೆ ಪತ್ತೆಯಾಗಿದೆ ಎಂದು ಮಾಹಿತಿ ಬಹಿರಂಗಗೊಂಡಂತೆ ದೇಶಾದ್ಯಂತ ರಾಜ್ಯದ ಮಾನ ಹರಾಜಾಗಿದೆ. ಹಣ ಸಿಕ್ಕಿರುವ ಬಗ್ಗೆ ಯಾವುದೇ ಪಕ್ಷದ ರಾಜಕಾರಣಿಗಳಿಗೆ ಅವಮಾನ ಎಂಬುದೇ ಇಲ್ಲ. ಇದು ಯಾವ ಪಕ್ಷಕ್ಕೆ ಸೇರಿದ್ದು ಎಂಬ ಚರ್ಚೆ ಮಾತ್ರ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್- ಕಾಂಗ್ರೆಸ್ ಪರಸ್ಪರ ಆರೋಪಗಳಲ್ಲಿ ನಿರತವಾಗಿವೆ. ಕೋಟಿಗಟ್ಟಲೆ ಹಣದ ಅಕ್ರಮ ನಡೆಯುವುದು ನಿಜಕ್ಕೂ ನೋವಿನ ಸಂಗತಿ. ಅದರಲ್ಲೂ ನಗದು ಕಂತಕಂತೆಯಲ್ಲಿ ಸಿಗಬೇಕು ಎಂದರೆ ಒಂದು ಗುಂಪು ಇದರ ಹಿಂದೆ ಇರಬೇಕು.
ಈಗ ಆರ್‌ಬಿಐ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ಡಿಜಿಟಲ್ ಮಾಧ್ಯಮದ ಮೂಲಕವೇ ವ್ಯವಹಾರ ನಡೆಯಬೇಕೆಂದು ತಾಕೀತು ಮಾಡಿದೆ. ಸರ್ಕಾರ ಘೋಷಿಸಿರುವ ೫ ಗ್ಯಾರಂಟಿಗಳು ಕೂಡ ಡಿಜಿಟಲ್ ವ್ಯವಹಾರದಲ್ಲೇ ಇರಬೇಕೆಂದು ನಿಯಮ ಹೇಳುತ್ತದೆ. ಇದಕ್ಕೆ ಕಡು ಬಡವರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ದಾಖಲೆಗಳನ್ನು ಒದಗಿಸಿದ್ದರೂ ಸರ್ಕಾರದ ನೆರವು ಇನ್ನೂ ಕೆಲವರನ್ನು ತಲುಪಿಲ್ಲ. ಬಡವರಿಗೆ ಹಣ ಬ್ಯಾಂಕ್ ಮೂಲಕವೇ ಹೋಗಬೇಕು. ಹೀಗಿರುವಾಗ ಗುತ್ತಿಗೆದಾರನ ಮನೆಯಲ್ಲಿ ೪೨ ಕೋಟಿ ರೂ ನಗದು ಎಲ್ಲಿಂದ ಬರಲು ಸಾಧ್ಯ? ಈ ಕಪ್ಪುಹಣದ ಮಾಲೀಕರು ಯಾರು? ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಲಿ ಅಕ್ರಮ ಹಣ ಸಂಗ್ರಹ, ವಿತರಣೆ ನಡೆದಿರುವುದಂತೂ ನಿಜ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲ್ಲಿರುವ ಐಟಿ ಜಾಗೃತ ದಳ ದೇಶಾದ್ಯಂತ ದಾಳಿಗಳನ್ನು ನಡೆಸಿ ಅಕ್ರಮ ನಗದು ವ್ಯವಹಾರವನ್ನು ಪತ್ತೆಹಚ್ಚುತ್ತಿದೆ. ಈ ದಾಳಿ ಪ್ರತಿಪಕ್ಷದವರ ಮೇಲೆ ನಡೆಯುತ್ತದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಆದರೆ ನಗದು ಸಿಗುತ್ತಿರುವುದು ಆತಂಕದ ಸಂಗತಿ. ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟವರ ಹೆಸರನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸುವ ನಾವು ನಮ್ಮಲ್ಲೇ ಇರುವ ಭಾರಿ ಕುಳಗಳ ಬಗ್ಗೆ ಮೌನವಹಿಸುತ್ತಿರುವುದು ಏತಕ್ಕೆ ಎಂಬುದು ಸ್ಪಷ್ಟಗೊಂಡಿಲ್ಲ. ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಐಟಿ ಬಿಟಿ ಕಂಪನಿಗಳು ವಿದೇಶದಿಂದ ಬರಬೇಕಿತ್ತು. ನಿಮ್ಮಲ್ಲಿ ಭ್ರಷ್ಟಾಚಾರ ಹೆಚ್ಚು ಎಂದು ಅವರು ಆರೋಪಿಸಿದರು. ಆಗ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿದರು. ಅದರಿಂದ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಂಥ ಲೋಕಾಯುಕ್ತರು ಸರ್ಕಾರವೇ ಅಲುಗಾಡುವಂತೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ನಂತರ ಬಂದ ಎಲ್ಲ ಸರ್ಕಾರಗಳು ಲೋಕಾಯುಕ್ತವನ್ನು ದುರ್ಬಲಗೊಳಿಸಿದರು. ಅದರ ಪರಿಣಾಮ ಲಂಚದ ಹಾವಳಿ ಅಧಿಕಗೊಂಡಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಧಿಕಾರದಲ್ಲಿದ್ದವರೇ ಸಹಾಯ ಮಾಡುತ್ತಾರೆ. ಹೀಗಾಗಿ ಜನರಿಗೆ ಸರ್ಕಾರದ ಕೆಲಸಗಳ ಬಗ್ಗೆ ವಿಶ್ವಾಸ ಕಡಿಮೆಯಾಗಿದೆ. ಈಗಲೂ ಐಟಿ ದಾಳಿಯಿಂದ ಸಿಕ್ಕ ಹಣದ ಬಗ್ಗೆ ರಾಜ್ಯ ಸರ್ಕಾರ ನಮಗೇನೂ ತಿಳಿಯದು ಎಂದು ಹೇಳುತ್ತಿದೆ. ಇಷ್ಟೊಂದು ಹಣ ಒಬ್ಬ ವ್ಯಕ್ತಿಯ ಬಳಿ ಬರಲು ಕಾರಣವೇನು ಎಂಬುದು ತಿಳಿಯಬೇಕು. ಅದು ಕ್ರಮಬದ್ಧ ಹಣವಾಗಿದ್ದರೆ ನಗದು ಪಡೆದುಕೊಂಡಿದ್ದು ಹೇಗೆ ಎಂಬುದು ತಿಳಿಯಬೇಕು. ಈ ಅಕ್ರಮ ಹಣ ವಹಿವಾಟಿನ ಹಿನ್ನೆಲೆಯಲ್ಲಿ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು.
ರಾಜ್ಯದ ನಿಷ್ಠೆ, ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಇಂಥ ಘಟನೆಗಳ ಬಗ್ಗೆ ಜನ ತಲೆಕೆಡಿಸಿಕೊಳ್ಳಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಜನ ವಿಶ್ವಾಸ ಇಡುವುದು ಹೇಗೆ? ದೆಹಲಿಯಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ೧೦೦ ರೂಗಳಲ್ಲಿ ೨೦ ರೂ ಕೂಡ ಹಳ್ಳಿಯನ್ನು ತಲುಪುವುದಿಲ್ಲ ಎಂದು ರಾಜೀವ ಗಾಂಧಿ ಹೇಳುತ್ತಿದ್ದರು. ಈಗಿನ ಪರಿಸ್ಥಿತಿಯನ್ನು ನೋಡಿದರೆ ೫ ರೂ. ತಲುಪುವುದು ಕೂಡ ಅನುಮಾನ. ಪಂಚರಾಜ್ಯಗಳಲ್ಲಿ ವಿಧಾನಸಬೆ ಚುನಾವಣೆಗೆ ಹಣ ಸಂಗ್ರಹ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸರ್ಕಾರ ಬದಲಾದರೂ ಭ್ರಷ್ಟಾಚಾರ ಹಾಗೇ ಮುಂದುವರಿದಿದೆ ಎಂಬುದನ್ನು ಇಂಥ ಘಟನೆಗಳು ಸಾಬೀತುಪಡಿಸುತ್ತಿವೆ. ಹಿಂದಿನ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘ ಈಗ ಹೊಸ ಸರ್ಕಾರಕ್ಕೆ ಕೂಡ ಒಂದು ತಿಂಗಳ ಗಡುವು ನೀಡಿದೆ. ವ್ಯಕ್ತಿಗಳು ಬದಲಾಗಿದ್ದಾರೆ.ಅಕ್ರಮ ಹಣ ವಹಿವಾಟುನಿಂತಿಲ್ಲ. ಭ್ರಷ್ಟರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಯಾವುದೇ ಕಾರಣಕ್ಕೂ ಹಿಂತಿರುಗಿ ಕೊಡಬಾರದು.