ಬಳ್ಳಾರಿ: ಇದುವರೆಗೆ ಯಾರೂ ಮಾಡದ ಅಖಂಡ ಭಾರತ ಯಾತ್ರೆಯನ್ನು ನಮ್ಮ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದು, ಯಾತ್ರೆಯ ಯಶಸ್ಸು ವಿಪಕ್ಷ ನಾಯಕರಲ್ಲಿ ನಡುಕ ಹುಟ್ಟಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳವಳಿ ಕೈಗೊಂಡ ಮಾದರಿಯಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ. ರಾಜ್ಯದಲ್ಲಿ ೨೪ ದಿನ ನಡೆದ ಯಾತ್ರೆಯ ಯಶಸ್ಸಿನಿಂದ ರಾಜ್ಯ ಸರ್ಕಾರದವರು ಕಂಗಾಲಾಗಿದ್ದಾರೆ. ಪತ್ರಿಕೆಗಳಲ್ಲಿ ತಮ್ಮ ಸಾಧನೆ ಕುರಿತು ಜಾಹೀರಾತು ನೀಡುವ ಬದಲು ವಿವಿಧ ಪತ್ರಿಕೆಗಳು ವಿವಿಧ ಸಂದರ್ಭದಲ್ಲಿ ಮಾಡಿದ ಸುದ್ದಿಗಳ ತುಣಕನ್ನು ಇಟ್ಟುಕೊಂಡು, ನಮ್ಮ ಪಕ್ಷದ ಹಿರಿಯ ನಾಯಕರನ್ನು ಅಪಮಾನಿಸಿ ಜಾಹೀರಾತು ನೀಡಿ ತಮ್ಮ ವೈಫಲ್ಯ ಮುಚ್ಚಿಹಾಕಲು ಯತ್ನಿಸುತ್ತಿವೆ ಎಂದು ಅವರು ಟೀಕಿಸಿದರು.
ಸೆ. ೩೦ರಂದು ಯಾತ್ರೆ ಮೈಸೂರಲ್ಲಿ ದಸರಾ ಇದ್ದ ಕಾರಣ ೨ ದಿನ ಯಾತ್ರೆ ನಿಲ್ಲಿಸಬೇಕಾಯಿತು. ಅದಾದ ನಂತರ ಯಾತ್ರೆ ಸಾಗಿಬಂದ ಕಡೆ ಯಾವುದೇ ಮಹಾನಗರ ಪಾಲಿಕೆ ಬಾರದೇ ಇದ್ದುದರಿಂದ ಮತ್ತು ಕನ್ಯಾಕುಮಾರಿಯಿಂದ ಯಾತ್ರೆ ಬಳ್ಳಾರಿ ತಲುಪಿದರೆ ೧ ಸಾವಿರ ಕಿಮೀ ಕ್ರಮಿಸುತ್ತದೆ ಎಂಬ ಕಾರಣಕ್ಕೆ ಇಲ್ಲೇ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಯಿತು ಎಂದರು.