ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಗೆ ಭರದ ಸಿದ್ಧತೆ ನಡೆದಿದೆ. ಕರ್ನಾಟಕದಲ್ಲಿ ಹಮ್ಮಿಕೊಂಡ ೨೪ ದಿನಗಳ ಯಾತ್ರೆಯ ಕೊನೆಯ ೩ ದಿನ ರಾಹುಲ್ ಗಾಂಧಿ ಬಳ್ಳಾರಿ ಜಿಲ್ಲೆಯಲ್ಲೇ ಇರಲಿದ್ದಾರೆ.
ಶುಕ್ರವಾರ ಸಂಜೆ ಆಂಧ್ರಪ್ರದೇಶದ ಗಡಿಭಾಗದ ಹಲಕುಂದಿ ಗ್ರಾಮ ತಲುಪಿರುವ ರಾಹುಲ್ ಗಾಂಧಿ ಶನಿವಾರ ಬೆಳಗ್ಗೆ ೬.೩೦ರಿಂದ ಬಳ್ಳಾರಿ ಕಡೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ ೧೨ ಗಂಟೆ ವೇಳೆಗೆ ನಗರ ಪ್ರವೇಶಿಸುವ ರಾಹುಲ್ ಗಾಂಧಿ ಕಾರ್ಯಕ್ರಮದ ವೇಳಾಪಟ್ಟಿಯಂತೆ ಮಧ್ಯಾಹ್ನ ೧.೩೦ಕ್ಕೆ ಸಮಾವೇಶದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ವರ್ಷ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಮ್ಮಿಕೊಂಡಿರುವ ಈ ಯಾತ್ರೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ನಿನ್ನೆ, ಮೊನ್ನೆಯಷ್ಟೇ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ ಜನ ಸಂಕಲ್ಪ ಯಾತ್ರೆ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಕಲ್ಯಾಣ ಕರ್ನಾಟಕ ಭಾಗ ಪ್ರವೇಶ ಪಡೆದಿರುವುದು ಚುನಾವಣಾ ರಾಜಕಾರಣಕ್ಕೆ ರಂಗು ತಂದು ಕೊಡಲಿದೆ.
ನಗರದ ಹೃದಯ ಭಾಗದಲ್ಲಿರುವ ಪುರಸಭಾ ಕಾಲೇಜು ಆವರಣದಲ್ಲಿ ಸಮಾವೇಶಕ್ಕಾಗಿ ಭವ್ಯ ವೇದಿಕೆಗಳು ಸಜ್ಜುಗೊಂಡಿವೆ. ಒಟ್ಟು ಮೂರು ವೇದಿಕೆಗಳು ಸಮಾವೇಶಕ್ಕೆ ಅಣಿಗೊಂಡಿವೆ. ಮಧ್ಯದ ವೇದಿಕೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿಯ ಪದಾಧಿಕಾರಿಗಳು, ಸಂಸದರು, ಇಬ್ಬರು ಮುಖ್ಯಮಂತ್ರಿಗಳು ಆಸೀನರಾದರೆ ಅಕ್ಕಪಕ್ಕದ ವೇದಿಕೆಗಳಲ್ಲಿ ಶಾಸಕರು, ಹಿರಿಯ ನಾಯಕರು ಆಸೀನರಾಗಲಿದ್ದಾರೆ. ಒಟ್ಟು ೧.೫ ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶಕ್ಕೆ ನೆರೆಯ ವಿಜಯನಗರ, ಕೊಪ್ಪಳ ಜಿಲ್ಲೆಯ ೨೧ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ಮೂಲಗಳ ಪ್ರಕಾರ ಒಂದೊಂದು ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ೨೫ ಸಾವಿರ ಜನರನ್ನು ಕರೆತರುವ ಕುರಿತು ಕೆಪಿಸಿಸಿ ಸೂಚನೆ ನೀಡಿದೆ.
ಸಮಾವೇಶಕ್ಕೆ ಬರುವ ಅಕ್ಕಪಕ್ಕದ ಜಿಲ್ಲೆಯವರಿಗೆ ಬಸ್‌ನಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ೩ ಲಕ್ಷ ಜನರಿಗೆ ಬಾಕ್ಸ್ ಊಟದ ವ್ಯವಸ್ಥೆ ಮಾಡಲಾಗಿದೆ. ನಗರದ ಅಲ್ಲಂ ಭವನದಲ್ಲಿ ಊಟ ಪ್ಯಾಕ್ ಮಾಡುವ ಕಾರ್ಯ ಭರದಿಂದ ನಡೆದಿದೆ.