ದಾವಣಗೆರೆ: ಯುಪಿಎಸ್‌ಸಿಯಿಂದ ನಡೆಯುವ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ದಾವಣಗೆರೆಯ ಕೆ.ಎಸ್.ಬಿ ಪೃಥ್ವಿರಾಜ್ ದೇಶಕ್ಕೆ ೫೭ನೇ ಹಾಗೂ ರಾಜ್ಯಕ್ಕೇ ೫ನೇ ರ‍್ಯಾಂಕ್ ಪಡೆಯುವ ಮೂಲಕ ದಾವಣಗೆರೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ದಾವಣಗೆರೆಯ ವಿವೇಕಾನಂದ ಬಡಾವಣೆಯ ನಿವಾಸಿ, ಎ.ಆರ್.ಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಎಸ್. ಬಸವರಾಜಪ್ಪ ಮತ್ತು ಸುಧಾ ದಂಪತಿಯ ಪುತ್ರರಾಗಿರುವ ಪೃಥ್ವಿರಾಜ್ ಇಂಜಿನಿಯರಿಂಗ್ ಪದವಿಧರರಾಗಿದ್ದು, ೨೦೨೩ರ ಯುಪಿಎಸ್‌ಸಿಯ ಐಎಫ್‌ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ೫ನೇ ರ‍್ಯಾಂಕ್ ಪಡೆದು ಗುರಿ ತಲುಪಿದ್ದಾರೆ.
ಇಲ್ಲಿನ ತರಳಬಾಳು ಶಾಲೆಯಲ್ಲಿ ಅಭ್ಯಾಸ ಆರಂಭಿಸಿದ ಪೃಥ್ವಿರಾಜ್ ಅವರು ದ್ವಿತೀಯ ಪಿಯೂಸಿ ವರೆಗೆ ದಾವಣಗೆರೆಯಲ್ಲಿಯೇ ಶಿಕ್ಷಣ ಪಡೆದಿದ್ದರು. ನಂತರ ಬೆಂಗಳೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ಮೊದಲಿನಂದಲೂ ಅರಣ್ಯ, ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದ ಪೃಥ್ವಿರಾಜ್‌ಗೆ ಐಎಫ್‌ಎಸ್ ಮಾಡುವ ಕನಸನ್ನು ನನಸು ಮಾಡುವ ಛಲದಿಂದ ಐಎಫ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತೊಡಗಿಸಿಕೊಂಡರು. ೨೦೨೧ರ ಪ್ರಿಲಿಮ್ಸ್‌ನಲ್ಲಿ ಅನುತ್ತೀರ್ಣರಾಗಿದ್ದರು, ಆದರೂ ಛಲ ಬಿಡದೆ ನಿರಂತರ ಅಧ್ಯಾಯನ ನಡೆಸಿ ೨೦೨೨ರ ಜೂನ್‌ನಲ್ಲಿ ಪಾಸಾದರು. ನಂತರ ಮುಖ್ಯ ಪರೀಕ್ಷೆ, ವೈಓ ಗೆ ತಯಾರಗಿ ತಮ್ಮ ಆಶಯದ ಐಎಫ್‌ಎಸ್ ಓದುವ ಗುರಿಯನ್ನು ಸಾಧಿಸಿದ್ದಾರೆ.