ಏಷ್ಯನ್ ಕ್ರೀಡೆಯಲ್ಲೂ ಗಡಿ ತಂಟೆ ಪ್ರದರ್ಶಿಸಿದ ಚೀನಾ

Advertisement

ಚೀನಾ ಸರ್ಕಾರ ಏಷ್ಯನ್ ಕ್ರೀಡಾಕೂಟದಲ್ಲಿ ಅರುಣಾಚಲ ಪ್ರದೇಶದ ಮೂವರು ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿರುವುದು ಬಾಲಿಶ ವರ್ತನೆ. ಕ್ರೀಡೆಗೂ ಗಡಿ ಸಮಸ್ಯೆಗಳಿಗೂ ಸಂಬಂಧವಿಲ್ಲ ಎಂಬುದನ್ನು ಚೀನಾದಂಥ ಬೃಹತ್ ರಾಷ್ಟ್ರಕ್ಕೆ ಹೇಳಿಕೊಡಬೇಕಾದ ಅಗತ್ಯವಿಲ್ಲ.

ಚೀನಾದಲ್ಲಿ ಏಷ್ಯಾ ಕ್ರೀಡಾಕೂಟ ಆರಂಭಗೊಂಡಿದೆ. ಮಾರ್ಷಲ್ ಕ್ರೀಡೆಯಲ್ಲಿ ತರಬೇತಿ ಪಡೆದ ಅರುಣಾಚಲ ಪ್ರದೇಶದ ಮೂವರು ಮಹಿಳಾ ಕ್ರೀಡಾಪಟುಗಳಿಗೆ ಚೀನಾ ವೀಸಾ ನಿರಾಕರಿಸಿದೆ. ಇದನ್ನು ಭಾರತ ಪ್ರತಿಭಟಿಸಿದ್ದರೂ ಚೀನಾ ತನ್ನ ತಪ್ಪನ್ನು ತಿದ್ದುಕೊಳ್ಳಲು ಮುಂದಾಗಿಲ್ಲ ಭಾರತದ ಕ್ರೀಡಾ ಸಚಿವರು ಚೀನಾ ಕ್ರಮವನ್ನು ಖಂಡಿಸಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ. ಅರುಣಾಚಲ ಪ್ರದೇಶ ತನ್ನದೆಂದು ಚೀನಾ ಮೊದಲಿನಿಂದಲೂ ವಾದಿಸುತ್ತ ಬಂದಿದೆ. ಭಾರತ ಇದನ್ನು ವಿರೋಧಿಸುತ್ತ ಬಂದಿದೆ. ಭಾರತ-ಚೀನಾ ಗಡಿ ನಿಯಂತ್ರಣ ರೇಖೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ಇಲ್ಲದ ಕಾರಣ ಈ ಸಮಸ್ಯೆ ಹಾಗೆ ಮುಂದುವರಿದಿದಿದೆ. ಟಿಬೆಟ್ ಚೀನಾ ಆಕ್ರಮಿತ ಪ್ರದೇಶ. ಟಿಬೆಟ್ ದೇಶದ ಜನ ನಮ್ಮಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಿರುವಾಗ ಅರುಣಾಚಲ ಪ್ರದೇಶ ಅವರಿಗೆ ಸೇರಲು ಸಾಧ್ಯವೇ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಚೀನಾ ತನ್ನ ನಿಲುವನ್ನು ಬಿಟ್ಟುಕೊಟ್ಟಿಲ್ಲ. ಅದೇನೇ ಇರಲಿ ಗಡಿತಂಟೆಯನ್ನು ಚರ್ಚಿಸಲು ಬೇರೆ ವೇದಿಕೆಗಳಿವೆ. ಅದನ್ನು ಕ್ರೀಡಾಕೂಟಕ್ಕೆ ತಳುಕು ಹಾಕಬಾರದು. ಕ್ರೀಡಾಪಟುಗಳಿಗೂ ರಾಜಕೀಯ ನಿರ್ಧಾರಗಳಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಅವರು ದೇಶವನ್ನು ಮಾತ್ರ ಪ್ರತಿನಿಧಿಸುತ್ತಾರೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ ಕ್ರೀಡಾಪಟುಗಳಿಗೆ ನಿಷೇಧ ವಿಧಿಸುವುದು ಅಮಾನವೀಯ. ಇದು ಚೀನಾದ ಬಾಲಿಶ ವರ್ತನೆಯನ್ನು ತೋರಿಸುತ್ತದೆ.
ಒಲಿಂಪಿಕ್ಸ್‌ನಿಂದ ಹಿಡಿದು ಏಷ್ಯನ್ ಕ್ರೀಡಾಕೂಟದವರೆಗೆ ಎಲ್ಲ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ದೇಶ-ದೇಶಗಳ ನಡುವೆ ಇರುವ ಹಲವು ವೈಮನಸ್ಯ ಮತ್ತು ಸಂಘರ್ಷಗಳು ದೊಡ್ಡ ಅಡ್ಡಿಯಾಗುತ್ತಿವೆ. ಕ್ರೀಡಾಕೂಟದಿಂದ ಜನರಲ್ಲಿ ಕ್ರೀಡಾ ಮನೋಭಾವ ಬೆಳೆಯುತ್ತದೆ ಎಂದು ಭಾವಿಸಿ ಎಲ್ಲ ದೇಶಗಳು ತಮ್ಮ ಕ್ರೀಡಾಪಟುಗಳಿಗೆ ಸಕಲ ಸವಲತ್ತು ಕಲ್ಪಿಸಿ ತರಬೇತಿ ನೀಡುತ್ತಿವೆ. ಇಂಥ ಸಂದರ್ಭದಲ್ಲಿ ದೇಶ-ದೇಶಗಳ ನಡುವೆ ಇರುವ ಭೌಗೋಳಿಕ ಹಾಗೂ ರಾಜಕೀಯ ಮನಸ್ತಾಪಗಳು ಕ್ರೀಡಾಪಟುಗಳನ್ನು ಬಲಿಪಶು ಮಾಡುತ್ತಿವೆ. ಇದನ್ನು ತಪ್ಪಿಸಬೇಕು ಎಂದರೆ ಎಲ್ಲ ದೇಶಗಳು ಬುದ್ಧಿಪೂರ್ವಕವಾಗಿ ಕ್ರೀಡೆಗಳಿಂದ ರಾಜಕೀಯವನ್ನು ದೂರವಿಡಬೇಕು ಎಂದು ವಿಶ್ವಸಂಸ್ಥೆ ಹಲವು ಬಾರಿ ಹೇಳಿದೆ. ಆದರೂ ದೇಶಗಳು ತಮ್ಮದ್ವೇಷ ಮತ್ತು ಅಸಮಾಧಾನವನ್ನು ಕ್ರೀಡೆಯಿಂದ ದೂರವಿಡಲು ಸಾಧ್ಯವಾಗಿಲ್ಲ.
ಭಾರತ- ಪಾಕ್ ನಡುವೆ ಸಂಘರ್ಷ ಇಂದು ನಿನ್ನೆಯದಲ್ಲ. ಆದರೂ ಕ್ರೀಡಾ ಮನೋಭಾವ ಕುಂದಿಲ್ಲ. ಪಾಕ್ ಕ್ರೀಡಾಟಪುಗಳನ್ನು ಸ್ವಾಗತಿಸುತ್ತೇವೆ . ಅದಕ್ಕೆ ಪ್ರತಿಯಾಗಿ ಪಾಕ್‌ನಲ್ಲಿ ನಮ್ಮ ಕ್ರೀಡಾಪಟುಗಳು ಭಾಗವಹಿಸಬಹುದು ಎಂಬ ವಿಶ್ವಾಸ ಮೂಡಿಲ್ಲ. ಕ್ರೀಡೆಗಳು ಜನರಲ್ಲಿ ಸ್ನೇಹ-ಪ್ರೀತಿ ಮನೋಭಾವ ಬೆಳೆಸುತ್ತದೆ. ಕ್ರೀಡಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದರೆ ದೇಶ-ದೇಶಗಳ ನಡುವೆ ಇರುವ ಮಾನಸಿಕ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ. ಏಷ್ಯನ್ ಕ್ರೀಡಾಕೂಟ ಆರಂಭವಾಗುವುದಕ್ಕೆ ಗುರುದತ್ ಸೋಂದಿ ಎಂಬುವರು ಕಾರಣ. ಹಿಂದೆಫಾರ್ ಈಸ್ಟರ್ನ್ ಗೇಮ್ಸ್ ಹೆಸರಿನಲ್ಲಿ ಕ್ರೀಡಾಕೂಟ ನಡೆಯುತ್ತಿತ್ತು. ಎರಡನೇ ಮಹಾಯುದ್ಧವಾದ ಮೇಲೆ ಅದನ್ನು ಏಷ್ಯನ್ ಕ್ರೀಡಾಕೂಟವಾಗಿ ಪರಿವರ್ತಿಸಲಾಯಿತು. ಚೀನಾ- ಪಿಲಫೀನ್ಸ್ ಇದರಲ್ಲಿ ಮೊದಲು ಆಸಕ್ತಿ ತೋರಿದವು. ಆದರೂ ಹಗೆತನ ಕಡಿಮೆಯಾಗಿಲ್ಲ.೧೯೬೨ ರಲ್ಲಿ ಇಂಡೋನೇಷ್ಯಾ ತಮ್ಮ ನೆಲದಲ್ಲಿ ಇಸ್ರೇಲ್ ಮತ್ತು ತೈವಾನ್ ಭಾಗವಹಿಸಬಾರದು ಎಂದು ಪಟ್ಟು ಹಿಡಿಯಿತು. ದಕ್ಷಿಣ ಕೊರಿಯಾ ಮತ್ತು ಪಾಕ್ ಏಷ್ಯನ್ ಕ್ರೀಡಾಕೂಟ ನಡೆಸಲು ನಿರಾಕರಿಸಿತ್ತು. ಒಲಿಂಪಿಕ್ಸ್ಗೂ ಇದೇ ರೀತಿ ಹಲವು ಅಡ್ಡಿ ಆತಂಕಗಳಿವೆ. ೧೯೭೨ ರಲ್ಲಿ ಮ್ಯೂನಿಚ್‌ನಲ್ಲಿ ಇಸ್ರೇಲ್ ಕ್ರೀಡಾಪಟುಗಳ ಮೇಲೆ ಪ್ಯಾಲೆಸ್ಟೀನ್ ಉಗ್ರ ಸಂಘಟನೆಗಳು ದಾಳಿ ನಡೆಸಿ ಬಲಿ ತೆಗೆದುಕೊಂಡಿದ್ದು ಈಗಲೂ ಕಹಿ ನೆನಪಾಗಿ ಉಳಿದಿದೆ. ಜಗತ್ತಿನ ಯಾವುದಾದರೊಂದು ಮೂಲೆಯಲ್ಲಿ ದೇಶಗಳ ನಡುವೆ ಸಂಘರ್ಷ ಇತ್ತು ಎಂದರೆ ಅದರ ಪ್ರಭಾವ ಕ್ರೀಡಾಕೂಟಗಳ ಮೇಲೆ ಆಗುವುದು ಇಂದಿಗೂ ಸಾಮಾನ್ಯ ಸಂಗತಿಯಾಗಿದೆ ಇದಕ್ಕೆ ಪರಿಹಾರ ಎಂದರೆ ದೇಶಗಳ ಧೀಮಂತಿಕೆಯಿಂದ ವರ್ತಿಸುವುದು ಅಗತ್ಯ.