ಏಮ್ಸ್ ಹೋರಾಟದಲ್ಲಿ ಅಗತ್ಯ ಬಿದ್ದರೆ ಭಾಗಿ: ಮಂತ್ರಾಲಯ ಶ್ರೀ

ಸುಬುಧೇಂದ್ರ
Advertisement

ರಾಯಚೂರು: ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಏಮ್ಸ್ ಸಂಸ್ಥೆ ಸ್ಥಾಪಿಸಬೇಕು. ಈ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ನಡೆಯುತ್ತಿದ್ದು, ಅಂಥ ಸನ್ನಿವೇಶಗಳ ಬಂದರೆ, ನಾವು ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದರು.
ಮಂತ್ರಾಲಯದ ಶ್ರೀಮಠದಲ್ಲಿ ಬುಧವಾರ ನಡೆದ ಶ್ರೀರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆಯ ಸ್ಥಾಪನೆ ಮಾಡಬೇಕು ಎಂಬುವುದರ ಬಗ್ಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಹೇಳಿದರು. ಈ ಹಿಂದೆ ಐಐಟಿ ಸ್ಥಾಪನೆಯಾಗಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ. ಈಗ ಆ ರೀತಿ ಸರ್ಕಾರ ಮಾಡಬಾರದು. ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.