ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: ಡಾ.ರೇಣುಕಾ ಪ್ರಸಾದ್ ಸೇರಿ ಆರು ಮಂದಿ ದೋಷಿಗಳು

Advertisement

ಸುಳ್ಯ: ಇಲ್ಲಿನ ಕೆವಿಜಿ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿಯಾಗಿದ್ದ ಎ.ಎಸ್‌. ರಾಮಕೃಷ್ಣ ಅವರ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಡಾ.ಕೆ.ವಿ. ರೇಣುಕಾ ಪ್ರಸಾದ್‌ ಸೇರಿದಂತೆ ಆರು ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಕರ್ನಾಟಕ ಹೈಕೋರ್ಟ್‌ ಸೆ. 27ರಂದು ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಡಾ. ರೇಣುಕಾ ಪ್ರಸಾದ್‌ ಮತ್ತು ಇತರ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಫೋಲೀಸ್ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌, ಹರೀಶ್‌ ಕುಮಾರ್‌ ಮತ್ತು ಜಿ. ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ. ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌.ಆರ್. ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ ಮತ್ತು ಶಂಕರ ಅವರನ್ನು ಎ.ಎಸ್‌. ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿದೆ. ಆದರೆ, ಏಳನೇ ಆರೋಪಿಯಾಗಿದ್ದ ಎಚ್‌.ಯು. ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಇದೇ ವೇಳೆ ಮಾನ್ಯ ಮಾಡಿದೆ. ಅಲ್ಲದೆ, ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಅಕ್ಟೋಬರ್‌ 5ರಂದು ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕುರುಂಜಿ ವೆಂಕಟರಮಣ ಗೌಡ ಅವರು ಸ್ಥಾಪಿಸಿದ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಷನ್‌ ನ ಕೆ.ವಿ.ಜಿ. ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಅವರು ಹಿರಿಯ ಪುತ್ರ ಡಾ.ಕೆ.ವಿ. ಚಿದಾನಂದ ಮತ್ತು ಕಿರಿಯ ಪುತ್ರ ಡಾ. ರೇಣುಕಾ ಪ್ರಸಾದ್‌ ಅವರಿಗೆ ವಿಭಜನೆ ಮಾಡಿ ಕೊಟ್ಟಿದ್ದರು. ಅದುವರೆಗೆ ಕೆವಿಜಿ ಪಾಲಿಟೆಕ್ನಿಕ್‌ ನ ಪ್ರಾಂಶುಪಾಲರಾಗಿದ್ದ ಎ.ಎಸ್‌.ರಾಮಕೃಷ್ಣರನ್ನು ಕೆ.ವಿ.ಜಿ. ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಡಾ. ಚಿದಾನಂದ ಅವರು ನೇಮಕ ಮಾಡಿದ್ದರು.

ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆಯ ವಿಭಜನೆಯಲ್ಲಿ ರಾಮಕೃಷ್ಣರು ತನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆಂದು ಭಾವಿಸಿದ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್ ಅವರು ರಾಮಕೃಷ್ಣರ ಕೊಲೆಗೆ ಸುಪಾರಿ ನೀಡಿದ್ದರೆನ್ನಲಾಗಿತ್ತು.

2011ರ ಏಪ್ರಿಲ್‌ 28ರಂದು ಸಂಜೆ 7.45ರ ವೇಳೆಯಲ್ಲಿ ಅಂಬಟೆಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್‌ ಥೆರಪಿ ಕ್ಲಿನಿಕ್‌ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಡಾ.‌ ರೇಣುಕಾ ಪ್ರಸಾದ್‌ ಮೊದಲ ಆರೋಪಿಯಾಗಿದ್ದು, ಒಟ್ಟು ಏಳು ಆರೋಪಿಗಳಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2016ರ ಅಕ್ಟೋಬರ್‌ 21ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸರ್ಕಾರ 2017ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಡಾ. ರೇಣುಕಾ ಪ್ರಸಾದ್‌ ಹಾಗೂ ಇತರೆ ಐವರು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್‌, ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚಿನ ಕೃತ್ಯದಲ್ಲಿ ದೋಷಿ ಎಂದು ತೀರ್ಮಾನಿಸಿದೆ.