ಎಲ್ಲಿ ತನಕ-ಅಲ್ಲಿ ಸೇರೋ ತನಕ

Advertisement

ಎಲ್ಲದಕ್ಕೂ ಓ ಅದಾ…? ನನಗೆ ಗೊತ್ತು ಬಿಡು….ಓ ಅವರಾ…ನನ್ನ ಸ್ನೇಹಿತರು ಬಿಡು…ಓ ಆ ಊರಾ? ಅಲ್ಲಿ ಎಲ್ಲವೂ ಗೊತ್ತು ಬಿಡು ಅನ್ನುತ್ತಿದ್ದ ಅಲೈಕನಕನ ಸಲುವಾಗಿ ಗೆಳೆಯರೆಲ್ಲ ಬೇಸತ್ತಿದ್ದರು. ಇವನು ಎಲ್ಲವೂ ನನಗೆ ಗೊತ್ತು ಅಂತಿದಾನಲ್ಲ ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕು ಎಂದು ಹವಣಿಸುತ್ತಿದ್ದರು. ಅಲೈ ಕನಕ ಮಾತ್ರ ಅದೇ ಧಾಟಿ ಮುಂದುವರಿಸಿದ್ದ. ಅವತ್ತು ಕರಿಭೀಮವ್ವ ಲಾದುಂಚಿ ರಾಜನಿಗೆ ಜ್ವರ ಬಂದಿದೆಯಂತೆ ಅಂದಾಗ… ಓ ಹೌದು ನನಗೆ ಮೊದಲೇ ಗೊತ್ತಿತ್ತು ಎಂದು ಅಲೈಕನಕ ಹೇಳಿದ. ಅದು ಹೇಗೆ? ಮೊದಲೇ ಗೊತ್ತಿತ್ತು ನಿನಗೆ ಅಂದರೆ… ಅವನ ಹಾವ… ಭಾವ… ಚಹ ಕುಡಿಯುವ ರೀತಿ… ಕಣ್ಣುಗಳು ಇವೆಲ್ಲ ನೋಡಿ…ನೋಡು ನೀನು ವೈದ್ಯರಲ್ಲಿಗೆ ಹೋಗಲೇಬೇಕು ಎಂದು ಹೇಳಿದ್ದೆ ಎಂದು ಉತ್ತರಿಸಿದ್ದ. ಇನ್ನೊಂದು ಬಾರಿ ರೊಡ್ರಾಮಣ್ಣನಿಗೆ ಓಸಿ ನಂಬರ್‌ನಲ್ಲಿ ದುಡ್ಡು ಬಂದಿತ್ತು. ಅದಕ್ಕೂ ಸಹ ರೊಡ್ರಾಮಣ್ಣನಿಗೆ ನಾನೇ ನಂಬರ್ ಹೇಳಿದ್ದೆ ಅಂದ. ಮರುದಿನದಿಂದ ಅಲೈಕನಕನ ಮನೆಮುಂದೆ ಜನಜಾತ್ರೆ. ಇವತ್ತು ಯಾವ ನಂಬರ್.. ಯಾವ ನಂಬರ್ ಅಂತ ಕೇಳತೊಡಗಿದರು. ಇದರಿಂದ ನಾನು ಯಾಕೆ ಲಾಭ ಪಡೆಯಬಾರದು ಎಂದು ಅಲೈಕನಕನು ಯಾವುದೋ ಬುಟ್ಟಿಯಲ್ಲಿ ಲೋಬಾನ ಹಾಕಿ… ಆ ಹೊಗೆಯನ್ನು ಆಘ್ರಾಣಿಸಿ… ಕಂದಾ… ದೂರದ ಕಾಡಿನಲ್ಲಿ ಒಂದೇ ಕಲ್ಲು ಒಂದೇ ಮುಳ್ಳು ಹ್ರಾ… ಹ್ರೂ ಎಂದು ಕೆಟ್ಟ ಧ್ವನಿಯಲ್ಲಿ ಹೇಳಿದ. ಗ್ವಾಡಿ ಇರಪಣ್ಣನಿಗೆ ಅದೇನು ಅರ್ಥವಾಯಿತೋ ಏನೋ ಒಂದು ಕಲ್ಲು ಅಂದರೆ ಝಿರೋ ಮುಳ್ಳು ಸಿಂಗಲ್.. ಹೀಗಾಗಿ ಝೀರೋ ಒಂದು ನಂಬರ್‌ಗೆ ಹೆಚ್ಚು ಹಣ ಕಟ್ಟಿದ. ಮರುದಿನ ಅದೇ ನಂಬರ್ ಬಂದು ಆತನಿಗೆ ದೊಡ್ಡ ಮಟ್ಟದ ಹಣ ಬಂತು. ಅದರಿಂದ ಖುಷಿ ಆದ ಇರುಪಣ್ಣ ಅಲೈಕನಕನಿಗೆ ಬೈಕ್ ಕೊಡಿಸಿದ್ದ. ಕನಕನ ಸುದ್ದಿ ಹತ್ತು ಹರದಾರಿಗುಂಟ ಹಬ್ಬಿತು. ಮಟ್ಕಾ ನಂಬರ್ ಹೇಳುತ್ತಾನೆ ಅದು ನಿಜ ಆಗುತ್ತದೆ ಎಂದು ಬಾಯಿಂದ ಬಾಯಿಗೆ ಹರಡಿತು. ಸುತ್ತಮುತ್ತಲಿನ ಜನರು ಅಲೈಕನಕನನ್ನು ತಮ್ಮ ಊರಿಗೆ ಕರೆಯಿಸಿಕೊಂಡು ನಂಬರ್ ಕೇಳತೊಡಗಿದರು. ಶಕ್ತ್ಯಾನುಸಾರವಾಗಿ ದಕ್ಷಿಣೆಯನ್ನೂ ಹಾಕತೊಡಗಿದರು. ಕನಕನ ಕೀರ್ತಿ ಎಲ್ಲೆಡೆ ಹಬ್ಬಿತು. ದಾರಿಯಲ್ಲಿ ಹೊರಟರೆ ಎಲ್ಲರೂ ನಮಸ್ಕಾರ ಅನ್ನತೊಡಗಿದರು. ಕೆಲವರು ಸುಮ್ಮನೇ ಹಣಕೊಟ್ಟು ಹೋಗುತ್ತಿದ್ದರು. ಈತನಿಗೆ ಬುದ್ಧಿ ಕಲಿಸಬೇಕು ಅಂದುಕೊಂಡಿದ್ದ ಗೆಳೆಯರು… ಅಯ್ಯೋ ಪೊಲೀಸರೇ ನಿಮ್ಮ ಕೈಲಿ ಏನೆಂದರೆ ಏನೂ ಆಗುವುದಿಲ್ಲ. ನಿಮಗೆ ಹಣ ಬೇಕೇ? ಶ್ರೀಮಂತರಾಗಬೇಕೆ? ಹಾಗಾದರೆ ಬಂದು ನಮ್ಮ ಅಲೈಕನಕನನ್ನು ಭೇಟಿಯಾಗಿ. ಮಟ್ಕಾ ನಂಬರ್ ಹೇಳುತ್ತಾನೆ ಕೇಳಿ ಅದರಿಂದ ದುಡ್ಡು ಮಾಡಿಕೊಳ್ಳಿ ಎಂದು ಮೂಗರ್ಜಿ ಬರೆದರು. ಮೊದಲೇ ಸ್ಟ್ರಿಕ್ಟ್ ಇದ್ದ ಇನ್ಸಪೆಕ್ಟರ್ ಮರುದಿನವೇ ಸಿವಿಲ್ ಡ್ರೆಸ್‌ನಲ್ಲಿ ಪೊಲೀಸರನ್ನು ಕಳುಹಿಸಿದ. ಮರುದಿನದಿಂದ ಅಲೈಕನಕ ಯಾವುದೋ ದೂರದ ಮಠ ಸೇರಿಕೊಂಡನೆಂಬ ಮಾಹಿತಿ ಬರುತ್ತಿದೆ.