ಕೋಲಾರ: ಈದ್ ಮೀಲಾದ್ ಹಬ್ಬದ ಅಂಗವಾಗಿ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ತಲ್ವಾರ್ ಹೆಬ್ಬಾಗಿಲು ನಿರ್ಮಿಸಿದ್ದ ಹಾಗೂ ಕುದುರೆ ಮೇಲೆ ಸವಾರಿ ಮಾಡಿ ಕತ್ತಿ ಜಳಪಿಸಿದ ಐದು ಮಂದಿ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈದ್ ಮಿಲಾದ್ ಹಬ್ಬದ ಆಚರಣೆಯ ವೇಳೆ ಕ್ಲಾಕ್ ಟವರ್ ಬಳಿ ಯಾವುದೇ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕಬ್ಬಿಣದ ಪೈಪುಗಳಿಂದ ೧೫ ಅಡಿ ಹೆಬ್ಬಾಗಿಲು ನಿರ್ಮಿಸಿ 200 ಕೆಜಿಯ ಸ್ಟೀಲ್ ಖಡ್ಗದ ಆಕೃತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಇದು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಉಂಟಾಗಲು ಕಾರಣವಾಗಿತ್ತು, ಐವರ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿತರಾದ ಅಸ್ಲಾಂ ಪಾಷಾ, ಮನ್ಸೂರ್ ಅಲಿ, ಚಾಂದ್ ಪಾಷಾ, ಸಾಧಿಕ್ ಪಾಷಾ, ಮಹಮದ್ ಬಿಲಾಲ್ ಹಾಗೂ ಮತ್ತೊಂದು ಪ್ರಕರಣದಲ್ಲಿ ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಹರಿತವಾದ ಕತ್ತಿ ಹಿಡಿದು, ಕುದುರೆ ಸವಾರಿ ಮಾಡುತ್ತಾ ಕತ್ತಿ ಜಳಪಿಸುತ್ತಾ ಅಪಾಯಕಾರಿ ರೀತಿಯಲ್ಲಿ ವರ್ತಿಸಿದ ಸಗೀರ್ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.