ನವದೆಹಲಿ: 2022 ರ ಡಿಸೆಂಬರ್‌ನಲ್ಲಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದ ಪಶ್ಚಿಮ ಬಂಗಾಳದ ಭೂಪತಿನಗರ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪ್ರಗತಿಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ರಾಜ್ಯದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಅಶಿಸ್ತಿನ ಜನಸಮೂಹದ ತೀವ್ರ ಪ್ರತಿರೋಧದ ನಡುವೆ ಇಬ್ಬರು ಪ್ರಮುಖ ಸಂಚುಕೋರರನ್ನು ಬಂಧಿಸಿದೆ ಎಂದು ಎನ್‌ಐಎ ತಿಳಿಸಿದೆ.
ಸ್ಥಳೀಯ ನಿವಾಸಿಗಳ ಗುಂಪೊಂದು ಎನ್‌ಐಎ ತಂಡಕ್ಕೆ ಅಡ್ಡಿಪಡಿಸಿದ್ದು ಆ ಸಂದರ್ಭದಲ್ಲಿ ಎನ್‌ಐಎ ತಂಡದ ಒಬ್ಬ ಸದಸ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎನ್‌ಐಎ ದೂರು ದಾಖಲಿಸಿದೆ. ಬಂಧಿತ ಆರೋಪಿಗಳನ್ನು ಕಾನೂನಿನ ಪ್ರಕಾರ ಕೋಲ್ಕತ್ತಾದ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದೆ.
ತನಿಖೆಗೆ ತೆರಳಿದ ಎನ್‌ಐಎ ಅಧಿಕಾರಿಗಳ ಮೇಲೆಯೇ ದಾಳಿ: ಭೂಪತಿನಗರ ಪ್ರದೇಶಕ್ಕೆ ಎನ್‌ಐಎ ಅಧಿಕಾರಿಗಳು ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಆಗಮಿಸಿದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದು ಮುಂಜಾನೆಯಷ್ಟೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು. ಬಳಿಕ ಕೋಲ್ಕತ್ತಾಗೆ ಮರಳುವ ವೇಳೆ ಎನ್‌ಐಎ ಅಧಿಕಾರಿಗಳು ಚಲಿಸುತ್ತಿದ್ದ ವಾಹನದ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ.