ರವೀಶ ಪವಾರ
ಧಾರವಾಡ: ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಗ್ರಾಮೀಣ ಪ್ರತಿಭೆ ವೇದಾಂತ ಕರಡ್ಡಿ ದೇಶಕ್ಕೆ ೩ನೇ ರ‍್ಯಾಂಕ್ ಪಡೆಯುವ ಮೂಲಕ ಧಾರವಾಡ ವಿದ್ಯಾಕಾಶಿ ಎನ್ನುವುದನ್ನು ಸಾಬೀತುಪಡಿಸಿದ್ದಾನೆ.
ಎಂಬಿಬಿಎಸ್ ಓದಿದ್ದೆಲ್ಲ ದೆಹಲಿಯಲ್ಲಾದರೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬದಲ್ಲಿ ೧ರಿಂದ ೩ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಅಪ್ಪಟ ಗ್ರಾಮೀಣ ಪ್ರತಿಭೆಗೆ ಇದೀಗ ಅಭಿನಂದನೆಗಳ ಮಹಾಪೂರ ಹರಿದುಬರುತ್ತಲಿವೆ.
ಚಿಕ್ಕಂದಿನಿಂದಲೂ ವೇದಾಂತ ಛಲಗಾರ. ಬಯಸಿದ್ದನ್ನು ಪಡೆದೇ ತೀರುವ ಸ್ವಭಾವ. ೧ರಿಂದ ೩ನೇ ತರಗತಿ ವರೆಗೆ ಮೊರಬದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ೪ರಿಂದ ೧೦ನೇ ತರಗತಿ ವರೆಗೆ ಹುಬ್ಬಳ್ಳಿಯ ಸೇಂಟ್ ಆಂಥೋನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದರು. ಬಳಿಕ ಪಿಯುಸಿ ಸಹ ಹುಬ್ಬಳ್ಳಿಯಲ್ಲಿಯೇ ಮುಗಿಸಿದ ವೇದಾಂತ ಎಂಬಿಬಿಎಸ್‌ಗಾಗಿ ಪ್ರವೇಶ ಪರೀಕ್ಷೆ ಬರೆದರೆ ಅದರಲ್ಲಿಯೂ ದೇಶಕ್ಕೆ ೧೧ನೇ ರ‍್ಯಾಂಕ್ ಪಡೆದು ದೆಹಲಿಯ ಏಮ್ಸ್ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು.
ತಂದೆ ತಾಯಿಯ ಸಹಕಾರ…
ತಂದೆ ಭೀಮಪ್ಪ ಕರಡ್ಡಿ ಉದ್ಯಮಿಯಾಗಿದ್ದರೆ ತಾಯಿ ಕುಸುಮಾ ಕರಡ್ಡಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದಾರೆ. ಚಿಕ್ಕಂದಿನಿಂದ ನಾನು ಏನು ಕಲಿಯುತ್ತೇನೆ ಎಂದರೂ ಯಾವುದಕ್ಕೂ ಇಲ್ಲ ಎನ್ನದೇ ಪ್ರತಿಯೊಂದಕ್ಕೂ ನನ್ನ ತಂದೆ ತಾಯಿ ಸಹಕಾರ ನೀಡುತ್ತಲೇ ಬಂದರು. ಅವರ ಈ ಸಹಕಾರವೇ ನನ್ನ ಸಾಧನೆಗೆ ಬಲ ನೀಡಿದಂತಾಯಿತು ಎನ್ನುತ್ತಾರೆ ಡಾ. ವೇದಾಂತ.
ಕೈ ಹಿಡಿದ ಸ್ವಂತ ಸಿದ್ಧತೆ….
ಎಂಬಿಬಿಎಸ್ ೩ನೇ ವರ್ಷದಿಂದಲೇ ಸ್ನಾತಕೋತ್ತರದ ಕುರಿತು ಪೂರ್ವ ಸಿದ್ಧತೆ ನಡೆಸಿದ್ದೆ. ಆನ್‌ಲೈನ್‌ನಲ್ಲಿಯೂ ತರಬೇತಿಯನ್ನು ಪಡೆದುಕೊಂಡಿದ್ದೇನೆ. ಅಲ್ಲದೇ ಕೆಲವು ಪುಸ್ತಕಗಳನ್ನು ಓದಿಕೊಂಡು ನಾನು ಎಲ್ಲ ಸಿದ್ಧತೆ ಮಾಡಿಕೊಂಡೆ. ಕಳೆದ ಬಾರಿ ಐಎನ್‌ಐ ಸಿಇಟಿ ಪ್ರವೇಶ ಪರೀಕ್ಷೆ ಬರೆದಾಗ ದೇಶಕ್ಕೆ ೨೯ನೇ ಸ್ಥಾನವನ್ನು ಪಡೆದಿದ್ದೆ. ಆದರೆ, ನಾನು ಮಾಡಿಕೊಂಡ ಸಿದ್ಧತೆಗೆ ಅದು ಕಡಿಮೆಯಾಯಿತು. ಅದಕ್ಕಾಗಿಯೇ ಈ ಬಾರಿ ಪುನಃ ಬರೆದಿದ್ದಕ್ಕೆ ದೇಶಕ್ಕೆ ೩ನೇ ಸ್ಥಾನ ಪಡೆದುಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಆಸೆ ಈಡೇರಿತು..
ಮಗ ವೇದಾಂತ ವೈದ್ಯನಾಗಬೇಕು ಎಂಬ ಆಸೆ ನಮ್ಮದಿದ್ದಿಲ್ಲ. ಆದರೆ, ಅವನು ಎತ್ತರಕ್ಕೆ ಬೆಳೆಯಬೇಕು. ಅವನು ಕಲಿತಷ್ಟು ಕಲಿಸಬೇಕೆಂದಿತ್ತು. ಆ ಆಸೆ ಈಗ ಈಡೇರಿದೆ. ಮಗನ ಸಾಧನೆ ಖುಷಿ ತಂದಿದೆ.
– ಭೀಮಪ್ಪ ಕರಡ್ಡಿ, ವೇದಾಂತ ತಂದೆ