ಬೆಳಗಾವಿ: ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಆಗಲಿ, ಮಹಾರಾಷ್ಟ್ರ ಆಗಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಲ್ಲ ಎಂದು ಮಹಾ ಡಿಸಿಎಂ ದೇವೇಂದ್ರ ಫಡ್ನವೀಸ್ ಮುಂಬಯಿಯಲ್ಲಿ ಹೇಳಿದ್ದಾರೆ.
ಈ ಬಗ್ಗೆ ಏನೇ ನಿರ್ಣಯ ಕೈಗೊಳ್ಳಬೇಕಿದ್ದರೂ ಸುಪ್ರೀಂಕೋರ್ಟ್ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಯಾವುದೇ ಹೊಸ ವಿವಾದ ಸೃಷ್ಟಿಸುವುದು ಯೋಗ್ಯವಲ್ಲ ಎಂದರು.
ಸುಪ್ರೀಂಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ. ದಿ. ೬ ರಂದು ಮಹಾ ಪರಿನಿರ್ವಾಣ ದಿನದ ನಿಮಿತ್ತ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಲಿದ್ದರು. ಸಚಿವರು ಕೈಗೊಂಡ ನಿರ್ಣಯ ಯಾರೂ ತಡೆಯಲು ಸಾಧ್ಯವಿಲ್ಲ.
ಆದರೆ ಮಹಾಪರಿನಿರ್ವಾಣ ದಿನ ನಾವು ಈ ರೀತಿ ವಾದ ಸೃಷ್ಟಿಸೋದು ಸರಿಯೇ ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ಸಿಎಂ ಏಕನಾಥ ಶಿಂಧೆ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆಂದು ಡಿಸಿಎಂ ಸ್ಪಷ್ಟಪಡಿಸಿದರು,
ಮಹಾ ಪರಿನಿರ್ವಾಣ ದಿನ ಅತ್ಯಂತ ಮಹತ್ವದ ದಿನ. ಅಂದು ಯಾವುದೇ ಅಹಿತಕರ ಘಟನೆ ಆಗಬಾರದು.
ಈ ದಿನ ಯಾವುದೇ ಪ್ರತಿಭಟನೆ ಆಗುವುದು ಯೋಗ್ಯವಲ್ಲ. ಭವಿಷ್ಯದಲ್ಲಿ ನಾವು ಬೆಳಗಾವಿಗೆ ಹೋಗೋದನ್ನು ಯಾರೂ ತಡೆಯಲಾಗಲ್ಲ. ಸ್ವತಂತ್ರ ಭಾರತದ ಯಾವುದೇ ಪ್ರದೇಶಕ್ಕೆ ಹೋಗಲು ಯಾರೂ ಯಾರನ್ನೂ ತಡೆಯಲಾಗಲ್ಲ ಎಂದು ಫಡ್ನವೀಸ್ ಹೇಳಿದರು.
ಸಿಎಂ ಎಚ್ಚರಿಕೆಗೆ ಬಗ್ಗಿದ ಮಹಾ
ಆರಂಭದ ಹಂತದಲ್ಲಿ ರಾಜ್ಯದ ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭ್ಯತೆಯಿಂದ ಬೆಳಗಾವಿಗೆ ಬರಬೇಡಿ ಎಂಬ ಸಂದೇಶ ರವಾನಿಸಿದ್ದರು. ಆದರೆ ಅದಕ್ಕೆ ಸಮ್ಮತಿ ಕೊಡಬೇಕಾಗಿದ್ದ ಮಹಾ ಸಚಿವರು ತಾವು ಬೆಳಗಾವಿಗೆ ಬಂದೇ ತೀರುತ್ತೇವೆ ಎನ್ನುವ ಉದ್ಧಟತನದ ಮಾತುಗಳನ್ನು ಆಡಿದ್ದರು. ಇದರಿಂದ ಕೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಉರುಳಿಸಿದ ದಾಳಕ್ಕೆ ಮಹಾ ಸಚಿವರು ಬರಲ್ಲ ಎಂದು ಹೇಳಿದ್ದಾರೆ
ಹೀಗಾಗಿ ಮಹಾದವರನ್ನೇ ನಂಬಿಕೊಂಡಿದ್ದ ಎಂಇಎಸ್ ಈಗ ಅಕ್ಷರಶಃ ಕಂಗಾಲ ಪಾರ್ಟಿಯಾಗಿದೆ.