ಋಣಸಂದಾಯವೇ ಜನಾದೇಶದ ಗೌರವ

Advertisement

ಈಗ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚನೆಗೊಂಡಿದೆ. ಜನ ಬಹುಮತ ಮತ್ತು ಸ್ಥಿರ ಸರ್ಕಾರ ಸ್ಥಾಪನೆಗೆ ಬೇಕಾದ ಜನಾದೇಶ ನೀಡಿದ್ದಾರೆ. ಜನರ ಋಣ ಸಂದಾಯ ಮಾಡಬೇಕು ಎಂದರೆ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಸರ್ಕಾರದ ಆಡಳಿತ ಎಂದರೆ ಬತ್ತಲ ಕುದುರೆಯ ಸವಾರಿ ಮಾಡಿದಂತೆ. ಕುದುರೆ ತನ್ನ ವೇಗ ಹೆಚ್ಚಿಸುವುದು ಸವಾರನನ್ನು ನೋಡಿಕೊಂಡೇ ಹೊರತು ತಂತಾನೇ ಚಲಿಸುವುದಿಲ್ಲ. ಈಗ ಮೊದಲು ಆಗಬೇಕಿರುವುದು ನನೆಗುದಿಗೆ ಬಿದ್ದಿರುವ ಕಾರ್ಯಕ್ರಮಗಳಿಗೆ ಜೀವ ತುಂಬಬೇಕು. ಜನರಿಗೆ ನೀಡಿದ ಭರವಸೆಗಳನ್ನು ಮೊದಲು ಈಡೇರಿಸಬೇಕು. ಅಮೇಲೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಎಲ್ಲ ಖಾತೆಗಳಿಗೂ ಈಗ ಸಚಿವರು ಇದ್ದಾರೆ. ಅದಕ್ಕೆ ತಕ್ಕಂತೆ ಅಧಿಕಾರಿ ವರ್ಗ ಚುರುಕುಗೊಳ್ಳಬೇಕಿದೆ. ಇದಕ್ಕೆ ಮೊದಲು ಸರ್ಕಾರ ತನ್ನದೇ ನೀತಿಯನ್ನು ರೂಪಿಸಿಕೊಳ್ಳಬೇಕು. ನಿರ್ದಿಷ್ಟ ಕಾರ್ಯಕ್ರಮವನ್ನು ರಚಿಸಬೇಕು. ಅದಕ್ಕೆ ಕಾಲಬದ್ಧ ಯೋಜನೆ ರೂಪಿಸಬೇಕು. ಅದರಲ್ಲಿ ಕೆಲವು ದೀರ್ಘಕಾಲಿಕ, ಮತ್ತೆ ಕೆಲವು ಕೂಡಲೇ ಜಾರಿಗೆ ಬರಬೇಕಾದ ಯೋಜನೆಗಳಿರುತ್ತವೆ. ಅವುಗಳನ್ನು ಪಟ್ಟಿ ಮಾಡಿ ಜನರ ಮುಂದಿಡಬೇಕು. ಅಲ್ಲದೆ ದೇಶದಲ್ಲಿ ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅದರಿಂದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಅಭಿವೃದ್ಧಿ ಪಥವನ್ನು ಚುರುಕುಗೊಳಿಸುವ ಅನಿವಾರ್ಯತೆ ಇದೆ. ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸುವುದು ಕಷ್ಟವಾಗುವುದಿಲ್ಲ. ಏಪ್ರಿಲ್ ನಲ್ಲಿ ರಾಜ್ಯದ ಜಿಎಸ್‌ಟಿ ಸಂಗ್ರಹ ೧.೮೭ ಲಕ್ಷ ಕೋಟಿ ರೂ. ಮೀರಿದೆ. ಇದರಲ್ಲಿ ರಾಜ್ಯದ ಪಾಲು ಕೂಡಲೇ ಬರಬೇಕು. ಕೇಂದ್ರದಿಂದ ಜಿಎಸ್‌ಟಿ ಪಾಲು ಬಾಕಿ ಇದೆ. ಅದನ್ನು ತರಿಸಿಕೊಳ್ಳಬೇಕು.
ಜನ ಈಗ ಸರ್ಕಾರ ನೆರವಿಗೆ ಕಾಯುತ್ತಿದ್ದಾರೆ. ಕೆಲವು ಕಡೆ ಮಳೆ ಬಂದಿದೆ. ಅದರಿಂದ ಕೃಷಿ ಚಟುವಟಿಕೆಗಳಿಗೆ ಬೇಕಾದ ಪೂರಕ ಸಾಮಗ್ರಿಗಳನ್ನು ಸರ್ಕಾರ ಒದಗಿಸಬೇಕು. ಕೆಲವು ಕಡೆ ಕುಡಿಯುವ ನೀರು ಕಲುಷಿತಗೊಂಡಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಗ್ರಾಮಗಳು ಕುಡಿಯುವ ನೀರಿನಿಂದ ಪರಿತಪಿಸುತ್ತಿವೆ. ಅಲ್ಲದೆ ಕೂಡಲೇ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮಹದಾಯಿ ಸೇರಿದಂತೆ ಹಲವು ಜಲ ಸಮಸ್ಯೆಗಳ ಬಗ್ಗೆ ಕೂಡಲೇ ಸ್ಪಂದಿಸುವ ಅಗತ್ಯವಿದೆ. ಹಣದುಬ್ಬರ, ನಿರುದ್ಯೋಗಕ್ಕೆ ಕೂಡಲೇ ದಮನ ಮಾಡುವ ಅಗತ್ಯವಿದೆ. ಒಟ್ಟು ೨೫೮೦೦೦ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ೧೨೫೮ ಉದ್ಯಮಗಳು ಮುಚ್ಚಿ ಹೋಗಿವೆ. ೧೩ ಸರ್ಕಾರಿ ಉದ್ಯಮಿಗಳಿಗೆ ಬೀಗಮುದ್ರೆ ಬಿದ್ದಿವೆ. ಕರ್ನಾಟಕ ಎಂದರೆ ಐಟಿ ಕೇಂದ್ರ. ಬೆಂಗಳೂರು ನಗರ ಅಮೆರಿಕದಲ್ಲಿ ಚಿರಪರಿಚಿತ. ಇಂಥ ರಾಜ್ಯ ಕೆಲವು ರಂಗಗಳಲ್ಲಿ ಹಿಂದೆ ಬಿದ್ದಿದೆ. ಬಾಲ್ಯವಿವಾಹ ಕರ್ನಾಟಕದಲ್ಲಿ ಹೆಚ್ಚು. ನವಜಾತ ಶಿಶುಗಳ ಮರಣ ಪ್ರಮಾಣ ಕರ್ನಾಟಕದಲ್ಲಿ ಆತಂಕ ಮೂಡಿಸುವಷ್ಟಿದೆ. ಕುಬ್ಜ ಮಕ್ಕಳ ಜನನ ನೋಡಿದರೆ ೩೦ ರಾಜ್ಯಗಳಲ್ಲಿ ಇದು ೨೪ ನೇ ಸ್ಥಾನ ಪಡೆದಿದೆ.
೨೦೧೫ಕ್ಕೆ ಹೋಲಿಸಿದರೆ ಕರ್ನಾಟಕದ ಪ್ರಗತಿ ಕೆಲವು ರಂಗಗಳಲ್ಲಿ ಇಳಿಮುಖಗೊಂಡಿದೆ. ಕೆಲವು ರಾಜ್ಯಗಳಲ್ಲಿ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಪೌಷ್ಟಿಕ ಆಹಾರ ಒದಗಿಸುವುದು ಅಗತ್ಯ. ಇದರ ಬಗ್ಗೆ ಹೈಕೋರ್ಟ್ ವಿವರವಾದ ವರದಿಯನ್ನೇ ನೀಡಿದೆ. ಬಹುತೇಕ ಜಿಲ್ಲೆಗಳಿಗೆ ಈಗ ಸಚಿವರ ಪ್ರಾತಿನಿಧ್ಯ ದೊರಕಿರುವುದರಿಂದ ಯಾವ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲವೋ ಆ ಜಿಲ್ಲೆಯನ್ನು ಬೇರೆ ಸಚಿವರು ನೋಡಿಕೊಳ್ಳುವ ಅಗತ್ಯವಿದೆ. ಕೆಲವು ಜಿಲ್ಲೆಗಳಲ್ಲಿ ಎರಡಕ್ಕಿಂತ ಹೆಚ್ಚು ಸಚಿವರು ಇದ್ದಾರೆ. ಅವರು ಬೇರೆ ಜಿಲ್ಲೆಯನ್ನು ನೋಡಿಕೊಳ್ಳುವ ಅಗತ್ಯವಿದೆ. ಪ್ರತಿ ಸಚಿವರು ತಿಂಗಳಿಗೆ ಒಮ್ಮೆ ಒಂದು ತಾಲೂಕಿನಲ್ಲಿ ವಾಸ್ತವ್ಯ ಹೂಡಿ ಅಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡರೆ ಜಿಲ್ಲಾ ಕೇಂದ್ರಕ್ಕೆ ಆ ಸಮಸ್ಯೆಗಳು ರವಾನೆಯಾಗುವುದನ್ನು ತಪ್ಪಿಸಬಹುದು. ಸ್ವಿಸ್ ದೇಶದಲ್ಲಿ ಪ್ರತಿ ಸರ್ಕಾರಿ ಇಲಾಖೆಯಲ್ಲಿ ತಿಂಗಳಿಗೊಮ್ಮೆ ಸರ್ಕಾರಿ ಕಡತಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಡುವ ವ್ಯವಸ್ಥೆ ಇದೆ. ಅದು ಚಿಕ್ಕ ದೇಶ. ನಮ್ಮ ಜನಸಂಖ್ಯೆ ಹೆಚ್ಚು. ಅದರಿಂದ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಜಾರಿಗೆ ತಂದರೆ ಹಲವು ಭೂ ವಿವಾದಗಳು ಬಗೆಹರಿಸಲು ಸಾಧ್ಯ. ಜನಸಾಮಾನ್ಯರಿಗೆ ಸರ್ಕಾರ ಕಚೇರಿಗಳಲ್ಲಿ ಸುಲಭವಾಗಿ ಕೆಲಸ ಮಾಡಿಕೊಡುವ ವ್ಯವಸ್ಥೆ ಜಾರಿಗೆ ಬರಬೇಕು. ಬೀದರ್‌ನಂಥ ಜಿಲ್ಲೆಗಳಿಗೆ ಎಲ್ಲ ಸಚಿವರು ಭೇಟಿ ಕೊಡುವುದಿಲ್ಲ. ಅಲ್ಲಿಯ ಜನ ಎಲ್ಲ ಸಚಿವರನ್ನು ನೋಡುವ ಸೌಭಾಗ್ಯವನ್ನೇ ಹೊಂದಿಲ್ಲ. ಅಲ್ಲಿಯ ಜಿಲ್ಲಾ ಸಚಿವರು ಹೊರತುಪಡಿಸಿದರೆ ಬೇರೆ ಸಚಿವರು ಹೋಗುವುದೇ ಇಲ್ಲ. ಅದೇರೀತಿ ಕಡು ಬಡುವರು ತಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಬರಲು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಗಳಿಗೆ ಜನತಾದರ್ಶನದಲ್ಲಿ ಜನ ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಸಮೀಪದಲ್ಲಿ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಅದಾದ ಮೇಲೆ ಲೋಕಸಭೆ ಚುನಾವಣೆ ಬರಲಿದೆ. ಇವುಗಳು ಈಗಿನ ಸರ್ಕಾರದ ಸಾಧನೆಯನ್ನು ಒರೆಗೆ ಹಚ್ಚಲಿವೆೆ. ಈ ಚುನಾವಣೆಗಳು ಬರುವ ಮುನ್ನ ಈಗಿನ ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ತೋರಿಸಬೇಕು. ಮತದಾರರು ತಮ್ಮ ಜನಾದೇಶವನ್ನು ಪೂರ್ಣ ರೂಪದಲ್ಲಿ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಉತ್ತಮ ಆಡಳಿತ ನೀಡುವುದು ಇಂದಿನ ಸರ್ಕಾರ ಕರ್ತವ್ಯ. ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ತನ್ನ ಸಾಮರ್ಥ್ಯ ತೋರಿಸಬೇಕು.