ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಹಸುಳೆಯನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾ ರೋಡ್‌ನ ಗೇರು ಅಭಿವೃದ್ಧಿ ಕೇಂದ್ರದ ಬಳಿ ಗುರುವಾರ ನಡೆದಿದ್ದು, ಈ ಬಗ್ಗೆ ಅಮರ್ ಅವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಘಟನೆ ವಿವರ…
ಅಮರ್ ಅವರ ಕಾರಿನಡಿಯಲ್ಲಿ ಗುರುವಾರ ಬೆಳಗಿನ ಜಾವ ಹಸುಳೆ ಅಳುವುದು ಕೇಳಿಸಿದೆ. ಹುಡುಕಾಡಿದಾಗ ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಎಂಬವರ ಮನೆಯ ಎದುರುಗಡೆ ಗೇಟಿನ ಹೊರಗಡೆ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆ ಮಂದಿ ಬೆಳಿಗ್ಗೆ ಏಳುವಾಗ ಹಸುಳೆ ಅಳುತ್ತಿರುವುದನ್ನು ಗಮನಿಸಿ ಹೊರಹೋದಾಗ ಕಾರಿನ ಕೆಳಗಡೆ ಬಿಳಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಹಸುಳೆ ಪತ್ತೆಯಾಗಿದೆ. ಈ ವೇಳೆ ಅಮರ್ ಅವರು ನೆರೆ ಹೊರೆಯವರಲ್ಲಿ ವಿಚಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮರ್ ಅವರ ಮನೆ ಮಂದಿ ಹಸುಳೆಯನ್ನು ಉಪಚರಿಸಿ ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ಶುಕ್ರವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಗುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಗು ಯಾರದ್ದು ಎಂಬ ಬಗ್ಗೆ ಉಳ್ಳಾಲ ಪೊಲೀಸರು ವಿವಿಧ ಆಸ್ಪತ್ರೆಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.