ಮೋಹನದಾಸ ಕಿಣಿ, ಕಾಪು
ಉಚಿತವಾಗಿ ಕೊಡುವುದರ ಪರ-ವಿರೋಧಿ ಚರ್ಚೆ ದೊಡ್ಡದಾಗಿ ನಡೆಯುತ್ತಿದೆ. ಉಚಿತವಾಗಿ ಸಿಗುವ ಏನೇ ಆದರೂ ಅದರ ಮೌಲ್ಯ ಪಡೆದುಕೊಳ್ಳುವವರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಏನನ್ನಾದರೂ ಉಚಿತವಾಗಿ ಕೊಡುವ ಮೊದಲು ಅದನ್ನು ಪಡೆಯಲು ಅರ್ಹತೆಯಿರುವುದರ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಅಗತ್ಯ. ಕೆಲವರಿಗೆ ಕೆಲವೊಂದು ಸೌಲಭ್ಯಗಳ ಅಗತ್ಯವಿರುವುದು ನಿಜವಾದರೂ ಅದೇನಿದ್ದರೂ ಸಪಾತ್ರರಿಗೆ ಸಿಗುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನು ಉಚಿತವಾಗಿ ಕೊಡುತ್ತಾರೆ. ಕೆಲವು ರೋಗಗಳಿಗೆ ಔಷಧಿಯನ್ನು ಪೂರ್ಣ ಅವಧಿಗೆ ತೆಗೆದುಕೊಳ್ಳಬೇಕು, ಇಲ್ಲವಾದರೆ ಅದು ಪರಿಣಾಮ ಬೀರುವುದಿಲ್ಲ. ಕೆಲವರು ಒಂದಿಷ್ಟು ದಿನ ತೆಗೆದುಕೊಂಡು ರೋಗ ಲಕ್ಷಣಗಳು ಕಡಿಮೆಯಾದೊಡನೆ ಅರ್ಧದಲ್ಲೇ ನಿಲ್ಲಿಸಿ ಉಳಿದ ಔಷಧಿಯನ್ನು ಚೆಲ್ಲುತ್ತಾರೆ. ಏಕೆಂದರೆ ಅದು ಉಚಿತವಾಗಿ ಸಿಕ್ಕಿದ್ದು! ರೋಗ ಉಲ್ಬಣಗೊಳ್ಳುತ್ತದೆ; ಪುನಃ ಓಡಿಬರುತ್ತಾರೆ!
ಕಡು ಬಡವರಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತದೆ. ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಅದೆಷ್ಟೋ ಸಂಸಾರಗಳಿಗಿದು ಅಗತ್ಯವಿದೆ. ಆದರೆ ಇದೂ ಸೇರಿದಂತೆ ಇನ್ನಿತರ ಅದೆಷ್ಟೋ ಉಚಿತಗಳನ್ನು ನೀಡಲು ಅನುಸರಿಸುವ ಮಾನದಂಡ ಮಾತ್ರ ಅವೈಜ್ಞಾನಿಕ. ಬಿಪಿಎಲ್ ಕಾರ್ಡ್ ಇರುವವರನ್ನು ಮಾತ್ರ ಇಂತಹ ಉಚಿತ ಸೌಲಭ್ಯಗಳಿಗೆ ಅರ್ಹತೆಯಾಗಿ ಪರಿಗಣಿಸುತ್ತಾರೆ. ವಾರ್ಷಿಕ ೧೨೦೦೦/- ಆದಾಯ ಇರುವವರು ಮಾತ್ರ ಬಿಪಿಎಲ್ ಕಾರ್ಡ್ಗೆ ಅರ್ಹರು. ಅಂದರೆ ದಿನವೊಂದಕ್ಕೆ ೩೨ರೂ. ಆದಾಯವಿರುವವರು ಮಾತ್ರ ಇದಕ್ಕೆ ಅರ್ಹರೆಂದಾಯಿತು. ಅದೂ ಇಡೀ ಕುಟುಂಬದ ಆದಾಯ! ಇಷ್ಟು ಕಡಿಮೆ ಮೊತ್ತದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಒಬ್ಬರಿಗೆ ಊಟವೂ ಸಿಗದು. ಈ ಮಾನದಂಡ ಅವೈಜ್ಞಾನಿಕವೆನಿಸದೆ? ಆದರೂ ದೊಡ್ಡ ಸಂಖ್ಯೆಯ ಬಿಪಿಎಲ್ ಕಾರ್ಡ್ಗಳಿದ್ದು ಅವರು “ಎಲ್ಲವನ್ನೂ” ಪಡೆದುಕೊಳ್ಳುತ್ತಾರೆ. ನಿಜವಾಗಿ ಬಡತನದಲ್ಲಿ ಇರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದು ಕಷ್ಟವಾಗಿ ಇನ್ಯಾರಿಗೋ ಸಿಕ್ಕಿದರೆ ಅದು ಅಪಾತ್ರರಿಗೆ ದೊರೆತಂತೆ ತಾನೇ? ಜನರ ಕೈಯಲ್ಲಿ ಹಣ ಓಡಾಡಿದರೆ ಆರ್ಥಿಕ ಸ್ಥಿತಿ ಸುಧಾರಣೆಯಾಗಿ ಖರೀದಿಸುವ ಶಕ್ತಿ ಬರುತ್ತದೆ ಎನ್ನುವುದು ಸರ್ಕಾರದ ವಾದ. ಹೌದು, ಜನರ ಕೈಯಲ್ಲಿ ಹಣವಿದ್ದರೆ, ಅವರು ಖರೀದಿ ಮಾಡಿದರೆ ವ್ಯಾಪಾರ ವ್ಯವಹಾರ ವೃದ್ಧಿಸುತ್ತದೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಎಲ್ಲವೂ ಸರಿ; ಆದರೆ, ಅದೇ ವೇಳೆ ವಾಪಸ್ ಕೊಡುವ ಬದ್ಧತೆ ಇರುವ ಹಣಕ್ಕೂ ಬದ್ಧತೆ ಇಲ್ಲದ, ಯಾವುದೇ ಶ್ರಮವಿಲ್ಲದೆ ಸಿಗುವ ಹಣಕ್ಕೂ ವ್ಯತ್ಯಾಸವಿದೆ. ಏಕೆಂದರೆ ಯಾವುದಕ್ಕೆ ಖರ್ಚು ಮಾಡುತ್ತಾರೆ ಎನ್ನುವುದು ಈ ವರ್ತುಲವನ್ನು ನಿರ್ಧರಿಸುತ್ತದೆ. ಆದ್ದರಿಂದ ತೀರಾ ಕಡಿಮೆ ಆದಾಯ ಇರುವವರನ್ನು ಗುರುತಿಸಿ, ಅವರಿಗೆ ಈ ರೀತಿಯ ಕೊಡುಗೆಗಳನ್ನು ನೀಡಿದಾಗ ಮಾತ್ರ ಅದು ಉತ್ತಮ ರೀತಿಯಲ್ಲಿ ಬಳಕೆಯಾಗುತ್ತದೆ.
ಯಾವುದೇ ಆಸರೆ ಇಲ್ಲದವರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಯೋಜನೆಗಳಿವೆ. ಆದರೆ ಆದಾಯ ತೆರಿಗೆ ಪಾವತಿಸುವ ಮಕ್ಕಳು ಇದ್ದರೂ ಇಂತಹ ಸೌಲಭ್ಯಗಳನ್ನು ಪಡೆಯುವುದು ಎಷ್ಟು ಸರಿ? ಹಾಗೆ ಪಡೆದುಕೊಳ್ಳಲು ಮಕ್ಕಳ ನಿರ್ಲಕ್ಷ್ಯವೂ ಕಾರಣವಾಗಿರಬಹುದು. ಹಾಗೆಂದು ಮಕ್ಕಳಿದ್ದರೂ ನೋಡಿಕೊಳ್ಳದ ಕಾರಣಕ್ಕೆ ಸರಕಾರ ಹಣ ಕೊಡುವುದಲ್ಲ ಪರಿಹಾರ, ಅಂತಹ ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವಂತೆ ಕಾನೂನು ಕ್ರಮ ಕೈಗೊಳ್ಳುವುದು ಸರಿಯಾದ ಕ್ರಮ. ಬದಲಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಕೊಡಿಸುವುದು ನಿಜವಾದ ಅನಾಥರಿಗೆ ಸಿಗುವ ಅವಕಾಶವನ್ನು ತಪ್ಪಿಸಿದಂತಲ್ಲವೇ? ಹಣ ಸರಕಾರದ್ದಿರಬಹುದು, ಆದರದು ಅಕ್ಷಯ ಪಾತ್ರೆಯಲ್ಲವಲ್ಲ?
ಇನ್ನೊಂದು ಮಹಾತ್ವಾಕಾಂಕ್ಷಿ ಯೋಜನೆ ಮಹಿಳೆಯರ ಉಚಿತ ಪ್ರಯಾಣ. ಇಲ್ಲಿಯೂ ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ, ತುರ್ತು ಅಗತ್ಯ ಬಂದಾಗ, ಆರ್ಥಿಕವಾಗಿ ಸದ್ರುಢರಲ್ಲದ ಮಹಿಳೆಯರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವುದು ತಪ್ಪಲ್ಲ. ಕೆಲವರು ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಬಸ್ ಹೊರಡುವಲ್ಲಿಂದ ಕೊನೆಯ ನಿಲ್ದಾಣದವರೆಗೆ ಟಿಕೆಟ್ ಪಡೆದುಕೊಂಡು ಅರ್ಧದಲ್ಲೇ ಇಳಿದು ಹೋದ ಪ್ರಕರಣಗಳು, ಬಸ್ಸುಗಳ ತಪಾಸಣೆಗೆ ಬರುವಾಗ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೈಗೊಂಡು ತೊಂದರೆಯಾದ ವರದಿಯಾಗಿತ್ತು. ಒಟ್ಟಿನಲ್ಲಿ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲದೆ ಜಾರಿಗೊಳಿಸುವ ಈ ರೀತಿಯ ಯೋಜನೆಗಳು ಅಪಾತ್ರ ದಾನಕ್ಕೆ ಸಮಾನ.
ಇಂದಿರಾ ಕ್ಯಾಂಟೀನ್‌ನಂತಹ, ಕಡಿಮೆ ವೆಚ್ಚದಲ್ಲಿ ಊಟ-ಉಪಾಹಾರದ ವ್ಯವಸ್ಥೆ ಮಾಡಿರುವುದು ಒಳ್ಳೆಯ ಯೋಜನೆಯೇ. ಆದರೆ ಅದು ಎಷ್ಟರಮಟ್ಟಿಗೆ ಸದುಪಯೋಗವಾಗುತ್ತಿದೆ? ಮಾತ್ರವಲ್ಲದೆ, ಈ ವ್ಯವಸ್ಥೆ ಇರುವುದು ಬಹುತೇಕ ನಗರ ಪ್ರದೇಶದಲ್ಲಿ ಮಾತ್ರ. ಆದರೆ ಕಡಿಮೆ ಆದಾಯದ, ಬಡ ವರ್ಗದ ಜನರಿರುವುದು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ. ಈ ಸೌಲಭ್ಯವನ್ನು ಅಂತಹ ಪ್ರದೇಶದಲ್ಲಿ ತೆರೆಯುವುದೂ ಸೇರಿದಂತೆ ಉಚಿತವಾಗಿ ಸಿಗುವುದೇನಿದ್ದರೂ ಯಾರಿಗೆ ನಿಜವಾಗಿ ಅಗತ್ಯವಿದೆಯೋ ಅವರಿಗೆ ಸಿಗುವಂತಾದಾಗ ಅದು ಉಚಿತವೆನಿಸೀತು.