ಉದಾಸಿಗೆ ತಪ್ಪಿದ ಸಿಎಂ ಸ್ಥಾನ

Advertisement

ಹಾವೇರಿ: ಅಧಿಕಾರ ಇರಲಿ ಇಲ್ಲದಿರಲಿ ಸದಾ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವುದಕ್ಕೆ ಮಾಜಿ ಸಚಿವ ದಿ.ಸಿ.ಎಂ. ಉದಾಸಿ ಮಾದರಿಯಾಗಿದ್ದಾರೆ. ಅವರಿಗೆ ಸಿಎಂ ಆಗುವ ಅವಕಾಶ ಒದಗಿ ಬಂದಿದ್ದು ತಪ್ಪಿ ಹೋಯಿತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿ.ಎಂ. ಉದಾಸಿ ಅಭಿಮಾನಿಗಳ ಬಳಗ ಶುಕ್ರವಾರ ಆಯೋಜಿಸಿದ್ದ ಸಿ.ಎಂ. ಉದಾಸಿ ಅವರ 88ನೇ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಮುಖ್ಯಮಂತ್ರಿ ದಿ.ಜೆ.ಎಚ್. ಪಟೇಲರಿಗೆ ದಾವಣಗೆರೆಯನ್ನು ಜಿಲ್ಲೆಯನ್ನಾಗಿಸಬೇಕಿತ್ತು. ಅದೇ ಸಂದರ್ಭದಲ್ಲಿ ಉದಾಸಿ ಅವರು ನಮ್ಮೆಲ್ಲರನ್ನೂ ಕರೆದೊಯ್ದು ಪಟ್ಟು ಹಿಡಿದು ಹಾವೇರಿ ಜಿಲ್ಲೆಯನ್ನು ಘೋಷಿಸುವಂತೆ ಪಟೇಲರ ಮೇಲೆ ಒತ್ತಡ ಹೇರಿದ್ದರಿಂದ ಹಾವೇರಿ ಜಿಲ್ಲಾ ಕೇಂದ್ರವಾಗಿ ರಚನೆಯಾಯಿತು. ಸಿ.ಎಂ. ಉದಾಸಿ ಅವರು ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಸಿಂಹಪಾಲು ಹೊಂದಿದ್ದಾರೆ ಎಂದರು.
ಸಿ.ಎಂ. ಉದಾಸಿ ಅವರು ಮೊದಲಿನಿಂದಲೂ ಹೋರಾಟದ ಮೂಲಕ ಮೇಲೆ ಬಂದಿದ್ದಾರೆ. ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಅವರ ಕಾಲಘಟ್ಟದ ಪ್ರಮುಖ ಕಾಮಗಾರಿಗಳಾಗಿವೆ. ನನ್ನ ರಾಜಕೀಯ ಬದುಕು ರೂಪಿಸುವಲ್ಲಿ ಸಿ.ಎಂ. ಉದಾಸಿ ಮೊದಲ ಪಂಕ್ತಿಯಲ್ಲಿದ್ದರು ಎಂದು ಬೊಮ್ಮಾಯಿ ಭಾವುಕರಾದರು.
ಸಿ.ಎಂ. ಉದಾಸಿ ವ್ಯಾಪಾರದಿಂದ ರಾಜಕಾರಣಕ್ಕೆ ಕಾಲಿಟ್ಟರು. ವ್ಯಾಪಾರದಲ್ಲಿ ಉದ್ರಿ ಇರಲಿಲ್ಲ, ಹೀಗಾಗಿ ರಾಜಕಾರಣದಲ್ಲೂ ಅವರು ಉದ್ರಿ ಉಳಿಸಿಕೊಳ್ಳುತ್ತಿರಲಿಲ್ಲ. ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿದೊಡನೇ ಅವರೆದುರೇ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿ ಕೆಲಸ ಮಾಡಿಸಿ ಕೊಡುತ್ತಿದ್ದರು. ಅವರು ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದ ಉದ್ದಗಲದಲ್ಲೂ ನಿರ್ಮಿಸಿದ ರಸ್ತೆಗಳು, ಬೃಹತ್ ಕಟ್ಟಡಗಳು ಉದಾಸಿ ಅವರನ್ನು ನೆನಪಿಸುತ್ತಿವೆ. ಜಿಲ್ಲೆಯಲ್ಲಿ ಉದಾಸಿ ಅವರ ಅಭಿವೃದ್ಧಿ ಕಾಲ ಮರುಕಳಿಸಬೇಕು. ಈ ತಾಲೂಕಿನ ನಾಯಕತ್ವದ ಕೊರತೆ ನೀಗಿಸಬೇಕಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಶಕ್ತಿ ಬೆಳೆಸಲು ಎಲ್ಲ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.

ಉದಾಸಿಯವರಿಗೆ ತಪ್ಪಿದ ಸಿಎಂ ಸ್ಥಾನ:
ದಿವಂಗತ ಸಿ.ಎಂ. ಉದಾಸಿ ಅವರು ಸಿಎಂ ಆಗುವ ಕಾಲ ಒಂದೊಮ್ಮೆ ಕೂಡಿ ಬಂದಿತ್ತು. ಮಾಜಿ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದಾಗ ಹೈಕಮಾಂಡ್ ಮಟ್ಟದಲ್ಲಿ ಸಿ ಎಂ ಉದಾಸಿ ಅವರು ಮುಖ್ಯಮಂತ್ರಿ ಆಗುವ ಚರ್ಚೆಗಳು ನಡೆದಿದ್ದವು. ನಾವೆಲ್ಲರೂ ಆ ಸಮಯವನ್ನು ಎದುರು ನೋಡುತ್ತಿದ್ದೆವು. ಆದರೆ, ಪಕ್ಷದಲ್ಲಿ ಅಂಥ ವಾತಾವರಣ ಕೂಡಿ ಬರಲಿಲ್ಲ. ಆದರೆ, ಉದಾಸಿ ಅವರ ಹೆಸರಿನೊಂದಿಗೆ ಹುಟ್ಟಿನಿಂದಲೂ ಸಿಎಂ ಸೇರಿಕೊಂಡಿದೆ. ಅವರು ಮಾಜಿಯಾಗುವ ಪ್ರಶ್ನೆ ಬರಲಿಲ್ಲ ಎಂದು ಬೊಮ್ಮಾಯಿ ವಿವರಿಸಿದರು.

ಸಂಸದ ಶಿವಕುಮಾರ ಮನಸು ಬದಲಿಸಲಿ:
ಹಾವೇರಿ-ಗದಗ ಸಂಸದರಾಗಿರುವ ಶಿವಕುಮಾರ ಉದಾಸಿ ರಾಜಕಾರಣದಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ. ಸಂಸತ್ತಿನಲ್ಲಿ ಒಳ್ಳೆಯ ಹೆಸರು ಮಾಡಿರುವ ಅವರು ಈ ಬಾರಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಹಲವು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಶಿವಕುಮಾರ ಮನಸು ಬದಲಾಯಿಸಿದರೆ ಅವರು ಮತ್ತೆ ಗೆಲ್ಲುವುದು ಖಚಿತ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ಬಿ.ಎಸ್. ಅಕ್ಕಿವಳ್ಳಿ, ಸದಾನಂದ ಮೆಳ್ಳಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಚಂದ್ರಣ್ಣ ಹರಿಜನ, ಸಂದೀಪ ಪಾಟೀಲ, ಡಾ.ಮಹೇಶ ನಾಲವಾಡ, ಡಾ.ಶೇಖರ ಸಜ್ಜನ, ಕೃಷ್ಣಾ ಈಳಿಗೇರ, ಸಂತೋಷ ಟೀಕೋಜಿ, ರವಿಚಂದ್ರ ಪುರೋಹಿತ, ಅಮೋಘ ಕುಲಾಲ, ಸಂತೋಷ ಭಜಂತ್ರಿ, ಮಹೇಶ ಕಮಡೊಳ್ಳಿ ಹಾಜರಿದ್ದರು.