ಉದಾರತೆ ಎಂದರೆ ಇದು

ಗುರುಬೋಧೆ
Advertisement

ಭಗವಂತನ ಔದಾರ್ಯವನ್ನು ಎಲ್ಲಾ ಮಹಾತ್ಮರು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ತನಗೆ ಸಿಗಬೇಕಾದ ಲಾಭದ ಬಗ್ಗೆ ಆಲೋಚಿಸದೇ ತನ್ನಿಂದ ಸಲ್ಲಬೇಕಾದದ್ದನ್ನು ನಿಸ್ಸಂಕೋಚವಾಗಿ ಸಲ್ಲಿಸುವ ಬುದ್ಧಿ ಉದಾರತೆ ಅಥವಾ ಔದಾರ್ಯ ಎನಿಸುತ್ತದೆ. ಸ್ವೀಕರಿಸುವವನ ಸಾಮರ್ಥ್ಯ ಕಡಿಮೆ ಇದ್ದರೂ ಅಥವಾ ಅವನು ಹೆಚ್ಚಿಗೆ ಕೊಡಬೇಕೆಂದು ಕೇಳದಿದ್ದರೂ ಕೈ ಬಿಚ್ಚಿ ಕೊಡುವಿಕೆ ಉದಾರತೆ ಅಥವಾ ಔದಾರ್ಯ. ಸಂಸ್ಕೃತ ವ್ಯಾಕರಣದ ದೃಷ್ಟಿಯಿಂದ ಈಎರಡು ಶಬ್ದಗಳು ಪರ್ಯಾಯ ಶಬ್ದಗಳು. ಭಗವಂತನ ಔದಾರ್ಯ ಭಗವದ್ಗೀತೆಯಲ್ಲಿ ಒಂದು ಕಡೆ ಕಂಡುಬರುತ್ತದೆ.
ಭಕ್ತಿಯೋಗದ ಹನ್ನೆರಡನೇ ಅಧ್ಯಾಯದಲ್ಲಿ ಈ ಸಂದರ್ಭ ಬರುತ್ತದೆ. ಭಗವಂತನು ಮೊದಲು ಮನಸ್ಸು ಮತ್ತು ಬುದ್ಧಿಗಳನ್ನು ತನ್ನಲ್ಲಿ ಇಡುವ ಬಗ್ಗೆ ಹೇಳಿದ್ದಾನೆ. (ಮಯ್ಯೇವ ಮನ ಆಧತ್ಸ್ವ ಮಯಿಬುದ್ಧಿಂ ನಿವೇಷಯ) ಮನಸ್ಸನ್ನು ನೂರಕ್ಕೆ ನೂರರಷ್ಟು ಪೂರ್ತಿಯಾಗಿ ಭಗವಂತನಲ್ಲಿ ಇಡುವುದು ಭಕ್ತಿ ಎಂಬುದಾಗಿ ಈ ಮಾತಿನ ತಾತ್ಪರ್ಯ. ಆದರೆ ಇದು ಸುಲಭವಲ್ಲ. ಹಾಗಾಗಿ ಸಾಧ್ಯವಾಗದಿದ್ದವರಿಗೆ ಸುಲಭದ ಉಪಾಯವನ್ನು ಭಗವಂತನು ಕೊಡುತ್ತಾನೆ.
ಚಿತ್ತವನ್ನು ಸಂಪೂರ್ಣವಾಗಿ ಭಗಂತನಲ್ಲಿ ಕೇಂದ್ರೀಕರಿಸಲು ಸಾಧ್ಯವಾಗದಿದ್ದರೆ ಆ ನಿಟ್ಟಿನಲ್ಲಿ ಮತ್ತೆ ಮತ್ತೆ ಪ್ರಯತ್ನ ಮಾಡಬೇಕು. ದೀರ್ಘಕಾಲ ಸತತ ಹೀಗೆ ಮಾಡಲ್ಪಡುವ ಪ್ರಯತ್ನವೇ ಅಭ್ಯಾಸ. ಅದನ್ನು ಮಾಡಬೇಕೆಂದು ಹೇಳಿದ್ದಾನೆ. (..ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ) ಅಭ್ಯಾಸವನ್ನು ಮಾಡುವದಕ್ಕೂ ಹಲವರು ಅಸಮರ್ಥರಾಗುತ್ತಾರೆ. ಅವರೇನು ಮಾಡಬೇಕು ? ಅವರಿಗಾಗಿ ಭಗವಂತ ಮತ್ತೊಂದು ಮೆಟ್ಟಿಲು ಕೆಳಿಗಿಳಿದು ಬಂದು ಹೇಳುತ್ತಾನೆ. ಅಭ್ಯಾಸದಲ್ಲಿಯೂ ಸಾಮರ್ಥ್ಯವಿಲ್ಲದಿದ್ದರೆ ಮಾಡುವ ಕೆಲಸಗಳನ್ನು ಭಗವಂತನಿಗೋಸ್ಕರ ಮಾಡಬೇಕು. ಇದೇ ಕರ್ಮಯೋಗ. ಇದರಿಂದಲೂ ಭಕ್ತಿಯೋಗವನ್ನು ಬೆಳಸಿಕೊಂಡು ತನ್ನನ್ನು ತಾನು ಉದ್ಧರಿಸಿಕೊಳ್ಳಬಹುದು. (ಅಭ್ಯಾಸೇಪ್ಯಸಮರ್ಥೋಸಿ ಮತ್ಕರ್ಮ ಪರಮೋ ಭವ) ಕರ್ಮಯೋಗವೇ ಎಲ್ಲರಿಗೂ ಅನ್ವಯವಾಗಬಹುದಾದ ಯೋಗ.
ಆರಂಭ ಹಂತದವರೆಲ್ಲರೂ ಇದನ್ನು ಮಾಡಬಹುದು. ಆ ಅರ್ಥದಲ್ಲಿ ಕರ್ಮಯೋಗವೇ ಅತ್ಯಂತ ಮೊದಲ ಮೆಟ್ಟಿಲು, ಕೆಳಗಿನ ಮೆಟ್ಟಿಲು ಎಂಬುದಾಗಿ ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಭಗವಂತನ ಔದಾರ್ಯ ನೋಡಿ, ಇನ್ನೂ ಒಂದು ಹಂತ ಕೆಳಗಿಳಿದು ಹೇಳುತ್ತಿದ್ದಾನೆ ಹೀಗೆ ಕರ್ಮಯೋಗ ಮಾಡಲೂ ನಿನಗೆ ಶಕ್ತಿಇಲ್ಲದಿದ್ದರೆ, ಎಲ್ಲಕರ್ಮಗಳ ಫಲಗಳನ್ನು ತ್ಯಜಿಸು. ಎಚ್ಚರಿಕೆಯಿಂದ ನಿನ್ನ ಮನಸ್ಸನ್ನು ಗಮನಿಸಿಕೊಳ್ಳುತ್ತ ಇದನ್ನು ಮಾಡು'. (ಅಥೈತದಪ್ಯಶಕ್ತೋಸಿ ಕರ್ತುಂ ಮದ್ಯೋಗಮಾಶ್ರೀತಃ | ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್||) ಇಷ್ಟರಿಂದಲೇ ಚಿತ್ತ ಶುದ್ಧಿಯು ಆಗಲು ಸಾಧ್ಯವಿದೆ. ಮುಂದೆ ಭಕ್ತಿಯೂ ಬರಲು ಸಾಧ್ಯವಿದೆ. ಬಹುಶಃ ಮೊದಲನೇ ಮೆಟ್ಟಿಲೇ ಎತ್ತರವಾಗಿದೆ ಎಂದು ಕೊಳ್ಳವವರಿಗೆ ಆ ಮೆಟ್ಟಿಲ ಕೆಳಗೆ ಮತ್ತೊಂದು ಸಣ್ಣ ಮೆಟ್ಟಿಲು ಕಟ್ಟಿಸಿದಂತಿದೆ ಭಗವಂತನ ಈ ಮಾತು. ಇದು ಭಗವಂತನ ಔದಾರ್ಯದ ಆಳ. ನಮ್ಮ ಗುರುಗಳು ಹೇಳುತ್ತಿದ್ದರುನಾವು ಒಂಡು ಮೆಟ್ಟಿಲು ಹತ್ತಿದರೆ ಭಗವಂತ ಹತ್ತು ಮೆಟ್ಟಿಲು ಇಳಿದು ಅನುಗ್ರಸುತ್ತಾನೆ.’ ಆದರೆ ಆ ಒಂದು ಮೆಟ್ಟಿಲನ್ನಾದರೂ ಹತ್ತಬೇಕಲ್ಲ.