ಉಚಿತ ವಿದ್ಯುತ್ ನಿರೀಕ್ಷೆ ಕರೆಂಟ್ ಶಾಕ್ ಪರೀಕ್ಷೆ

ಸಂಪಾದಕೀಯ
Advertisement

ರಾಜ್ಯದ ೧೬ನೇ ವಿಧಾನಸಭೆಗೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಬಹುಮತಗಳಿಸಿ ಜನಸಾಮಾನ್ಯರು ೨೦೦ ಯೂನಿಟ್ ಉಚಿತ ವಿದ್ಯುತ್ ಲಭಿಸುತ್ತದೆ ಎಂದು ಸಂತಸದಲ್ಲಿದ್ದಾಗಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ ೭೦ ಪೈಸೆ ಹೆಚ್ಚಿಸಿ ಆದೇಶ ಹೊರಡಿಸಿರುವುದು ಸಾರ್ವಜನಿಕವಲಯದಲ್ಲಿ ದಿಗ್ಭ್ರಮೆಗೆ ಕಾರಣವಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಹಾಗಿಲ್ಲ. ಕೆಇಆರ್‌ಸಿ ಅರೆ ನ್ಯಾಯಾಂಗಸಂಸ್ಥೆಯಾಗಿರುವುದರಿಂದ ಅದಕ್ಕೆ ನೀತಿ ಸಂಹಿತೆಯ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ವಾದಿಸುವವರೂ ಇದ್ದಾರೆ. ನೀತಿ ಸಂಹಿತೆಯನ್ನು ಚುನಾವಣೆ ಆಯೋಗ ಮೇ ೧೫ ರಂದು ಹಿಂದಕ್ಕೆ ಪಡೆದಿದೆ. ಗ್ರಾಹಕರು ಮತದಾನ ಮಾಡಿ ಆಗಿರುವುದರಿಂದ ವಿದ್ಯುತ್ ದರ ಏರಿಕೆಯ ಪ್ರಭಾವ ಇರುವುದಿಲ್ಲ ಎಂದು ಹೇಳಲಾಗಿದೆ. ಆದರೆ ವಿದ್ಯುತ್ ದರ ಏರಿಕೆ ಏಪ್ರಿಲ್‌ನಿಂದ ಪೂರ್ವಾನ್ವಯ. ಹೀಗಿರುವಾಗ ಆದೇಶವನ್ನು ಒಂದೆರಡು ದಿನ ಮುಂದೂಡಿದ್ದರೆ ಏನೂ ಆಗುತ್ತಿರಲಿಲ್ಲ. ಈಗ ಸರ್ಕಾರವೇ ಇಲ್ಲ.
ಮುಖ್ಯಮಂತ್ರಿಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಆಡಳಿತದಲ್ಲಿ ಶೂನ್ಯ ಸೃಷ್ಟಿಯಾಗಿದೆ. ಹೊಸ ಮುಖ್ಯಮಂತ್ರಿ ಇನ್ನೂ ಬಂದಿಲ್ಲ. ಈ ಸಮಯದಲ್ಲಿ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳುವುದು ಸರಿಯಾದ ಕ್ರಮವಲ್ಲ. ಸರ್ಕಾರವೇ ಅತ್ಯಂತ ಗ್ರಾಹಕ. ಈಗಿನ ದರ ಏರಿಕೆ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಆಗಲಿದೆ. ಇದರ ಬಗ್ಗೆ ಚಿಂತಿಸಲು ಸರ್ಕಾರದಲ್ಲಿ ಯಾವ ಜನಪ್ರತಿನಿಧಿಯೂ ಇಲ್ಲ ಎಂದ ಮೇಲೆ ಕೆಇಆರ್‌ಸಿ ಆದೇಶವನ್ನು ಪ್ರಶ್ನಿಸುವವರು ಯಾರು? ಕೆಇಆರ್‌ಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವ ಹಾಗಿದ್ದರೆ ಮಾರ್ಚ್ ತಿಂಗಳಲ್ಲೇ ತೀರ್ಮಾನ ಕೈಗೊಳ್ಳಬಹುದಿತ್ತು. ಅಲ್ಲದೆ ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ಪ್ರತಿ ಗ್ರಾಹಕರ ಮನೆಗಳಿಗೆ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಗ್ಯಾರಂಟಿ ನೀಡಿ ಗ್ರಾಹಕರಿಗೆ ಕಾರ್ಡ್ ಕೊಟ್ಟಿದೆ.
ಹೊಸ ಸರ್ಕಾರ ಮೊದಲ ಸಚಿವ ಸಂಪುಟದಲ್ಲೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಪ್ರಕಟಿಸಿದೆ. ಹೀಗಿರುವಾಗ ಕೆಇಆರ್‌ಸಿ ದರ ಏರಿಕೆ ಪ್ರಕಟಿಸಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಕೆಲವು ಕಡೆ ಜನ ವಿದ್ಯುತ್ ಬಿಲ್ ಪಾವತಿ ಮಾಡೋಲ್ಲ ಎಂದು ಮೀಟರ್ ರೀಡರ್‌ನನ್ನೇ ಓಡಿಸಿದ ಘಟನೆ ನಡೆದಿದೆ. ಇದಕ್ಕೆ ಈಗ ಕೆಇಆರ್‌ಸಿ ಉತ್ತರ ನೀಡಬೇಕಾಗಿ ಬಂದಿದೆ.
ಒಂದು ವೇಳೆ ಪ್ರತಿಯೊಬ್ಬರಿಗೆ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕು ಎಂದರೆ ಒಟ್ಟು ೧.೯೨ ಲಕ್ಷ ಗ್ರಾಹಕರ ಮನೆಗಳಿಗೆ ವಾರ್ಷಿಕ ೪೦೪೦೪ ಕೋಟಿ ರೂ. ಸಹಾಯಧನ ನೀಡಬೇಕು. ಇದಕ್ಕೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಬೇಕು. ಅದೇರೀತಿ ಐಪಿ ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡಬೇಕು ಎಂದರೆ ಮೀಟರ್ ನಂಬರ್ ಆಧಾರ್‌ಗೆ ಜೋಡಣೆಯಾಗಬೇಕು ಎಂದು ಕೆಇಆರ್‌ಸಿ ಆದೇಶಿಸಿದೆ. ಆಧಾರ್‌ಗೆ ಜೋಡಣೆಯಾಗಲಿಲ್ಲ ಎಂದರೆ ವಿದ್ಯುತ್ ವಿತರಣ ಕಂಪನಿಗೆ ಸರ್ಕಾರದ ಸಹಾಯಧನ ಬರುವುದಿಲ್ಲ. ಇದು ಸರ್ಕಾರ ಕೈಗೊಳ್ಳಬೇಕಾದ ತೀರ್ಮಾನ. ರಾಜ್ಯದಲ್ಲಿ ೩೦೪೨೯೨೮ ಐಪಿ ಸೆಟ್‌ಗಳಿವೆ. ಐಪಿಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವಾಗ ರೈತರು ಆರಂಭಿಕ ಶುಲ್ಕ ಪಾವತಿ ಮಾಡಿ ಆರ್. ಆರ್. ನಂಬರ್ ಪಡೆದಿರುತ್ತಾರೆ. ಈಗ ಒಬ್ಬನೇ ರೈತ ೩-೪ ಪಂಪ್‌ಸೆಟ್ ಹೊಂದಿದ್ದರೆ ಒಂದೇ ಐಪಿ ಸೆಟ್‌ಗೆ ಮಾತ್ರ ಆಧಾರ್ ಜೋಡಣೆಯಾಗುತ್ತದೆ. ಉಳಿದ ಐಪಿಸೆಟ್ ಕತೆ ಏನು ಎಂಬುದು ಸ್ಪಷ್ಟಗೊಂಡಿಲ್ಲ.
ವಿದ್ಯುತ್ ದರ ಏರಿಕೆಯಲ್ಲಿ ಈ ಬಾರಿ ವಿದ್ಯುತ್ ಬಳಕೆದರಕ್ಕಿಂತ ನಿಗದಿತ ಶುಲ್ಕವನ್ನು ಹೆಚ್ಚಿಸಲಾಗಿದೆ. ವಿದ್ಯುತ್ ಬಳಕೆ ದರ ಮತ್ತು ನಿಗದಿತ ಶುಲ್ಕ ನಡುವೆ ಸಮೀಕರಣ ಇರಬೇಕು. ನಿಗದಿತ ಶುಲ್ಕ ವಿಧಿಸುವುದಕ್ಕೆ ಕೆಲವು ನಿಯಮಗಳಿವೆ. ವಿದ್ಯುತ್ ಮಾರ್ಗ ನಿರ್ವಹಣೆಗೆ ನಿಗದಿತ ಶುಲ್ಕ ಪಡೆಯುವುದು ರೂಢಿ. ಆದರೆ ಹಳೆ ಮಾರ್ಗಗಳಿಗೂ ನಿಗದಿತ ಶುಲ್ಕ ಹೆಚ್ಚಿಸುವುದು ಸೂಕ್ತವಲ್ಲ. ಗುರುಚರಣ್ ಸಮಿತಿ ಬೇರೆ ರಾಜ್ಯಗಳಿಗೆ ಹೋಲಿಸಿ ನಿಗದಿತ ಶುಲ್ಕ ಕಡಿಮೆ ಇದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಆಗುವ ವೆಚ್ಚ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.
ವಿದ್ಯುತ್ ಪರಿಷ್ಕರಿಸುವಾಗ ಬೇರೆ ರಾಜ್ಯದ ವಿದ್ಯುತ್ ದರವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಈಗ ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಬಳಕೆ ದರಕ್ಕಿಂತ ನಿಗದಿತ ಶುಲ್ಕವೇ ಅಧಿಕಗೊಂಡಿದೆ. ಸಣ್ಣ ಕೈಗಾರಿಕೆಗಳಿಗೆ ಪ್ರತಿ ಅಶ್ವಶಕ್ತಿಗೆ ಈಗ ಪ್ರತಿ ತಿಂಗಳು ೧೭೦ ರೂ. ನಿಗದಿತ ಶುಲ್ಕ ವಿಧಿಸಲಾಗಿದೆ. ಇದನ್ನು ವಿದ್ಯುತ್ ಬಳಸದೇ ಇದ್ದರೂ ಪಾವತಿಸಬೇಕು. ಎಚ್.ಟಿ. ಬಳಕೆದಾರರು ೩೦೦ ಅಶ್ವಶಕ್ತಿ ವಿದ್ಯುತ್ ಬಳಸುತ್ತಿದ್ದರೆ ೫೧ ಸಾವಿರ ನಿಗದಿತ ಶುಲ್ಕವನ್ನೇ ಪಾವತಿಸಬೇಕು. ಇಷ್ಟು ಆರ್ಥಿಕ ಹೊರೆ ಇರುವಾಗ ಚುನಾವಣೆ ಕಾಲದಲ್ಲಿ ಕೈಗೊಳ್ಳುವುದು ಸಮಂಜಸವೇ ಎಂಬುದನ್ನು ಕೆಇಆರ್‌ಸಿ ತಿಳಿಸಬೇಕು.
ಚುನಾವಣೆ ಆಯೋಗ ಇದಕ್ಕೆ ಅನುಮತಿ ಕೊಡಬಾರದಿತ್ತು. ಹಿಂದೆ ಕೆಇಆರ್‌ಸಿ ಸಾರ್ವಜನಿಕ ವಿಚಾರಣೆ ನಡೆಸುವಾಗ ಇಂಧನ ಇಲಾಖೆ ಅಧಿಕಾರಿಗಳು ಸರ್ಕಾರದ ಪರ ಹಾಜರಿರುತ್ತಿದ್ದರು. ಸರ್ಕಾರ ನೀಡುವ ಸಹಾಯಧನದ ಪ್ರಮಾಣವನ್ನು ಮೊದಲೇ ತಿಳಿಸಬೇಕಿತ್ತು. ಸರ್ಕಾರ ಸಹಾಯಧನ ನೀಡುವುದನ್ನು ಮೊದಲೇ ಖಚಿತಪಡಿಸಬೇಕು. ಹೀಗಿರುವಾಗ ಕೆಇಆರ್‌ಸಿ ತೀರ್ಮಾನ ಮತ್ತಷ್ಟು ಗೊಂದಲ ಮೂಡಿಸುವ ಸಂಭವವಿದೆ.