ಉಚಿತ ಅನ್ನಕ್ಕೆ ರಾಜಕೀಯ ಕೆಸೆರು

Advertisement

ರಾಜ್ಯದಲ್ಲಿ ಬಡವರಿಗೆ ರೇಷನ್ ಕಾರ್ಡ್ ಮೂಲಕ ಪ್ರತಿಯೊಬ್ಬರಿಗೆ ೧೦ ಕೆಜಿ ಅಕ್ಕಿ ನೀಡುವುದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಮಾತಿನ ಚಕಮಕಿ ನಡೆಯುತ್ತಿದೆ. ಕಡು ಬಡವರಲ್ಲಿ ಪ್ರತಿಯೊಬ್ಬರಿಗೆ ಕೇಂದ್ರ ಸರ್ಕಾರ ೫ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತ ಬಂದಿದೆ. ಇದರೊಂದಿಗೆ ಹೆಚ್ಚುವರಿಯಾಗಿ ೫ ಕೆಜಿ ಅಕ್ಕಿಯನ್ನು ಕೇಂದ್ರದ ಆಹಾರ ನಿಗಮದಿಂದ ಖರೀದಿ ಮಾಡಲು ಕಾಂಗ್ರೆಸ್ ಸರ್ಕಾರ ಬಯಸಿತ್ತು. ಈಗ ಕೇಂದ್ರ ಆಹಾರ ಖಾತೆ ಹೆಚ್ಚುವರಿ ಅಕ್ಕಿ ಮತ್ತು ಗೋಧಿಯನ್ನು ಯಾವ ರಾಜ್ಯಕ್ಕೂ ನೀಡದಂತೆ ಸೂಚನೆ ನೀಡಿದೆ. ಇದು ಈಗ ಎರಡು ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ನುಡಿದಂತೆ ನಡೆಯಬೇಕು. ಇಲ್ಲವೆ ಪ್ರತಿಭಟನೆ ಅನಿವಾರ್ಯ ಎಂದು ಬಿಜೆಪಿ ಹೇಳಿದೆ. ಇಂದಿನ ಪರಿಸ್ಥಿತಿಯನ್ನು ನೋಡಿದರೆ ಎರಡೂ ಪಕ್ಷಗಳು ಸೇರಿ ಬಡವರಿಗೆ ಅಕ್ಕಿ ಸಿಗದಂತೆ ಮಾಡುವುದು ಖಚಿತ. ಚುನಾವಣೆಗೆ ಮುನ್ನ ಎರಡೂ ಪಕ್ಷಗಳಿಗೆ ಮತದಾರ ಬೇಕಿತ್ತು. ಈಗ ಸೋತವರಿಗೆ ಬೇಕಿಲ್ಲ. ಗೆದ್ದವರಿಗೆ ತಮ್ಮ ವಾಗ್ದಾನ ಪೂರೈಸುವ ತವಕ. ಹೀಗಾಗಿ ಕೇಂದ್ರ ಸರ್ಕಾರದ ಆಹಾರ ನಿಗಮದಿಂದ ಅಕ್ಕಿ ಖರೀದಿ ಮಾಡಲು ಆಡಳಿತ ಪಕ್ಷ ಮುಂದಾಗಿದೆ. ಕೇಂದ್ರ ಸರ್ಕಾರ ಅಕ್ಕಿ ಖರೀದಿಗೆ ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ ೩ ರೂ. ದರ ನಿಗದಿಪಡಿಸಿದೆ. ಅದರಂತೆ ರಾಜ್ಯ ಸರ್ಕಾರ ಖರೀದಿಸಿ ಸಾರಿಗೆ ಮತ್ತು ಪಡಿತರ ಅಂಗಡಿಗಳಿಗೆ ನೀಡುವ ಕಮಿಷನ್ ಮಾತ್ರ ಭರಿಸಬೇಕಿತ್ತು. ಕೇಂದ್ರ ಸರ್ಕಾರ ನೀಡುವ ೫ ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿ ೫ ಕೆಜಿ ಅಕ್ಕಿ ಖರೀದಿಸಿ ಜನರಿಗೆ ಹಂಚಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ನಮ್ಮ ರಾಜ್ಯದ ಬಡವರಿಗೆ ಇದು ಸಿಗುತ್ತದೆ ಎಂದು ಪ್ರತಿಪಕ್ಷ ಉದಾರ ನಿಲುವು ತಳೆದಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ. ಬಿಜೆಪಿ ಪಕ್ಷವೇ ಕೇಂದ್ರದ ಮೇಲೆ ಒತ್ತಡ ತಂದು ಹೆಚ್ಚುವರಿ ೫ ಕೆಜಿ ಸಿಗುವಂತೆ ಮಾಡಬಹುದಾಗಿತ್ತು. ಆದರೆ ಇಲ್ಲಿ ಪಕ್ಷ ರಾಜಕಾರಣವೇ ಪ್ರಮುಖವಾಗಿದೆ. ಇದರಿಂದ ಸಾಧನೆ ಏನೂ ಆಗುವುದಿಲ್ಲ. ಕಡು ಬಡವರು ೧೦ ಕೆಜಿ ಲಭಿಸಿದರೆ ಅದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿತ್ತು. ಕೇಂದ್ರ ಸರ್ಕಾರ ಹೇಳುವಂತೆ ಹಣದುಬ್ಬರ ಇಳಿಮುಖಗೊಂಡಿದೆ. ಆದರೆ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಇಳಿಮುಖಗೊಂಡಿಲ್ಲ. ಹೀಗಿರುವಾಗ ಪಕ್ಷ ರಾಜಕಾರಣಕ್ಕಾಗಿ ಮಾನವೀಯತೆ ಮರೆತು ವರ್ತಿಸುವುದು ಸರಿಯಲ್ಲ. ಅನ್ನದಾನ ಮಾಡುವಾಗ ದಾನಿಗಳು ಎಲ್ಲೂ ತಮ್ಮ ಹೆಸರು ಹೇಳಬಾರದು ಎಂದಿದೆ. ಇಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಅನ್ನದಾನಕ್ಕೆ ಕಲ್ಲು ಹಾಕಲು ಒಂದು ರಾಜಕೀಯ ಪಕ್ಷ ಯತ್ನಿಸುತ್ತಿದ್ದರೆ ಇನ್ನೊಂದು ಪಕ್ಷ ಅನ್ನದಾನಕ್ಕೆ ಬೇರೆಯವರು ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸುತ್ತಿದೆ. ಎರಡು ಪಕ್ಷಗಳ ರಾಜಕೀಯಕ್ಕೆ ಕಡು ಬಡವರು ಬಲಿಯಾಗಬೇಕಾಗಿ ಬಂದಿದೆ. ಈಗಲೂ ಕಾಲ ಮಿಂಚಿಲ್ಲ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಒಂದುಗೂಡಿ ಬಡವರಿಗೆ ಸಕಾಲದಲ್ಲಿ ಅನ್ನ ಸಿಗುವಂತೆ ಮಾಡಿದರೆ ಜನ ಎರಡೂ ಪಕ್ಷಗಳಿಗೆ ಒಳಿತು ಬಯಸುವುದಂತೂ ನಿಶ್ಚಿತ. ಭಾರತೀಯ ನಂಬಿಕೆಯಂತೆ ಅನ್ನದ ಋಣ ಇರುತ್ತದೆ. ಯಾರೇ ಅನ್ನ ಸೇವಿಸಲು ಅವರ ಹೆಸರಿಗೆ ಅದು ಬರೆದಿರಬೇಕು ಎನ್ನುತ್ತಾರೆ. ಈಗ ಆ ನಂಬಿಕೆ ಬದಲಾಗಿದೆ. ನಾವೇ ಅನ್ನ ಕೊಡುತ್ತಿದ್ದೇವೆ ಎಂದು ರಾಜಕೀಯ ಪಕ್ಷಗಳು ಹೇಳತೊಡಗಿವೆ. ಇದು ನಮ್ಮ ಸಂಸ್ಕೃತಿಗೆ ತಕ್ಕುದ್ದಲ್ಲ ಎಂಬುದಂತೂ ನಿಜ. ಯಾರೂ ಬಡವರಾಗಿ ಹುಟ್ಟಲು ಬಯಸುವುದಿಲ್ಲ. ಅಲ್ಲದೆ ಬಡತನದಲ್ಲೇ ಇರಲು ಇಚ್ಛಿಸುವುದಿಲ್ಲ. ಹೀಗಿರುವಾಗ ಬಡವರ ಹೆಸರಿನಲ್ಲಿ ರಾಜಕೀಯ ನಡೆಸುವುದು ಸರಿಯಾದ ಕ್ರಮವಲ್ಲ. ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕನಿಷ್ಟ ಶೋಷಣೆ ಎಂದರೆ ಬಡವರ ಅನ್ನದ ಮೇಲೆ ಚೆಲ್ಲಾಟವಾಡುವುದು. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಕೈಬಿಡುವುದು ಒಳಿತು. ಕಡು ಬಡವರಿಗೆ ೫ ಕೆಜಿ ಅಕ್ಕಿ ಕೇಂದ್ರ ನೀಡುವುದನ್ನು ತೆಗೆದುಕೊಂಡು ಎಲ್ಲ ರಾಜಕೀಯ ಪಕ್ಷಗಳು ಸೇರಿ ಮತ್ತೆ ೫ ಕೆಜಿ ಅಕ್ಕಿ ದೊರಕುವಂತೆ ಮಾಡುವುದು ನಾಡಿನ ಎಲ್ಲ ರಾಜಕಾರಣಿಗಳ ಆದ್ಯ ಕರ್ತವ್ಯ. ಮೊದಲು ಜನರ ಹಿತ. ಆಮೇಲೆ ರಾಜಕೀಯ. ಇತರ ರಾಜ್ಯಗಳಲ್ಲಿ ಈ ನೀತಿಯನ್ನು ಅಲ್ಲಿಯ ರಾಜಕಾರಣಿಗಳು ಅನುಸರಿಸುತ್ತಿದ್ದಾರೆ. ನಮ್ಮಲ್ಲೇ ಸಂಕುಚಿತ ಮನೋಭಾವದ ರಾಜಕಾರಣ ಮನೆಮಾಡಿದೆ. ಇದಕ್ಕೆ ಇಂದೇ ಕೊನೆಹಾಡಬೇಕು. ಪಕ್ಕದ ಆಂಧ್ರ, ತೆಲಂಗಾಣಗಳಲ್ಲಿ ಅಲ್ಲಿಯ ಜನ ಉಚಿತ ಅಕ್ಕಿಯನ್ನು ನಿರಾತಂಕವಾಗಿ ಪಡೆಯುತ್ತಿದ್ದಾರೆ. ಅದರಿಂದ ಅಲ್ಲಿಯ ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಸಾಧ್ಯವಾಗಿದೆ. ಹೆಚ್ಚುವರಿ ಅಕ್ಕಿ ನೀಡಿದರೆ ಜನ ಸೋಮಾರಿಗಳಾಗುತ್ತಾರೆ ಎಂಬ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ. ಶ್ರೀಮಂತರು ಕುಳಿತು ತಿನ್ನುವಷ್ಟು ಹಣವಿದ್ದರೂ ಇನ್ನಷ್ಟು ಹಣ ಸಂಪಾದಿಸಲು ಬಯಸುವುದಿಲ್ಲವೇ? ಅದೇರೀತಿ ಬಡವರು ಕೂಡ ಅನ್ನದ ಚಿಂತೆ ಇಲ್ಲ ಎಂದರೆ ಬೇರೆ ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮಿಸುತ್ತಾರೆ. ಬಡವರ ಸಮಸ್ಯೆ ಕೇವಲ ಅಕ್ಕಿ ವಿತರಣೆಯಿಂದ ಬಗೆಹರಿಯುವುದಿಲ್ಲ ಎಂಬುದನ್ನು ಮನಗಾಣಬೇಕು. ಚುನಾವಣೆ ಕಾಲದಲ್ಲಿ ಭರವಸೆ ನೀಡುವುದು ಸುಲಭ. ಆದರೆ ಅದನ್ನು ಜಾರಿಗೆ ತರುವುದು ಕಷ್ಟ. ಹಾಗೆಂದು ಅನ್ನದ ಪ್ರಶ್ನೆ ಬಂದಾಗ ಯಾರೂ ಅಡ್ಡ ಬರುವುದು ಸರಿಯಲ್ಲ. ಆಡಳಿತ ಪಕ್ಷ ಬೇರೆ ರಂಗದಲ್ಲಿ ಉಳಿತಾಯ ಮಾಡಿ ಅಕ್ಕಿ ಖರೀದಿ ಮಾಡಿ ಬಡವರಿಗೆ ನೀಡಲಿ. ಅದಕ್ಕೆ ಪ್ರತಿಪಕ್ಷ ಅಡ್ಡಿಪಡಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ- ಪ್ರತಿಪಕ್ಷ ಪಾತ್ರ ಕಾಯಂ ಏನೂ ಅಲ್ಲ.