ಈ ಸಲ ಕಪ್ ನಮ್ದೇ…!

Advertisement

ನವದೆಹಲಿ: ೨ನೇ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಫೈಟ್ ಇಂದು ನಡೆಯಲಿದ್ದು, ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಇತ್ತ ಆರ್‌ಸಿಬಿ ತಂಡಗಳು ಎದುರು ಮುಖಾಮುಖಿಯಾಗಲಿವೆ. ಈ ಲೀಗ್‌ನ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ತಂಡಗಳೇ ಫೈನಲ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಪುರುಷರ ಐಪಿಎಲ್‌ನಲ್ಲೂ ಈ ತಂಡಗಳು ಈವರೆಗೂ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಇಂದು ನಡೆಯಲಿರುವ ಫೈನಲ್ ಪಂದ್ಯ ಉಭಯ ತಂಡಗಳಿಗೆ ವಿಶೇಷವಾಗಿರಲಿದೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಅವೃತ್ತಿಯ ಫೈನಲ್‌ನಲ್ಲಿ ಸೋತು ಟ್ರೋಫಿ ಕೈ ಚೆಲ್ಲಿಕೊಂಡಿತ್ತು. ಈ ಬಾರಿ ೧೨ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಉಳಿದುಕೊಳ್ಳುವ ಮೂಲಕ ನೇರವಾಗಿ ಫೈನಲ್‌ಗೇರಿದೆ. ಆರ್‌ಸಿಬಿ ಕಳೆದ ಆವೃತ್ತಿಯಲ್ಲಿ ಕೇವಲ ೨ ಗೆಲುವುಗಳನ್ನು ಕಂಡು ಮುಖಭಂಗ ಅನುಭವಿಸಿತ್ತು. ಈ ಬಾರಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎಲಿಮಿನೇಟರ್‌ನಲ್ಲಿ ಮಣಿಸಿ ಫೈನಲ್‌ಗೇರಿದೆ. ಈ ಎರಡೂ ತಂಡಗಳು ಈಗ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು ಕ್ವೀನ್‌ಡಮ್ ಯಾರ ಮುಡಿಗೇರಲಿದೆ ಅನ್ನುವ ಕುತೂಹಲವಿದೆ.
ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ
ಈ ಫೈನಲ್ ಪಂದ್ಯ ಟ್ರೋಫಿಗಷ್ಟೇ ಅಲ್ಲ, ಆರೆಂಜ್ ಕ್ಯಾಪ್‌ಗೂ ಪೈಪೋಟಿಯಿದೆ. ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರಾಗಿ ಆರ್‌ಸಿಬಿಯ ಎಲೈಸಿ ಪೆರಿ ಹಾಗೂ ಡೆಲ್ಲಿ ನಾಯಕಿ ಮೆಗ್ ಲಾನಿಂಗ್ ಕಾಣಿಸಿಕೊಂಡಿದ್ದಾರೆ. ಪೆರಿ ಈವರೆಗೂ ಆಡಿದ ೮ ಪಂದ್ಯಗಳಲ್ಲಿ ೨ ಅರ್ಧಶತಕಗಳೊಂದಿಗೆ ೩೧೨ ರನ್ ಗಳಿಸಿದ್ದಾರೆ. ಮೆಗ್ ಲಾನಿಂಗ್ ಕೂಡ ೮ ಪಂದ್ಯಗಳಲ್ಲಿ ೪ ಅರ್ಧಶತಕಗಳೊಂದಿಗೆ ೩೦೮ ರನ್ ಗಳಿಸಿದ್ದಾರೆ. ಈ ಇಬ್ಬರ ಮಧ್ಯೆ ಕೇವಲ ೪ ರನ್‌ಗಳ ಅಂತರವಿದ್ದು, ಈ ಪಂದ್ಯದಲ್ಲಿ ಮೊದಲ ಸ್ಥಾನದಲ್ಲಿ ಕೂರುವವರು ಯಾರು ಅನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.
ಇದರ ಜೊತೆಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರಲ್ಲೂ ಈ ಎರಡೂ ತಂಡಗಳೇ ಮುಂಚೂಣಿಯಲ್ಲಿವೆ. ಡೆಲ್ಲಿ ತಂಡದ ಶಫಾಲಿ ವರ್ಮಾ ೧೭ ಸಿಕ್ಸರ್‌ಗಳನ್ನು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೆರಡು ಸ್ಥಾನಗಳಲ್ಲಿರುವ ಆರ್‌ಸಿಬಿಯ ರಿಚಾ ಘೋಷ್ ಹಾಗೂ ಸ್ಮೃತಿ ಮಂಧಾನ ತಲಾ ೧೦ ಸಿಕ್ಸರ್‌ಗಳನ್ನು ಬಾರಿಸಿದ್ದು, ಇಂದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗುತ್ತಿದೆ.
ಡೆಲ್ಲಿ ಪರ ಬಲಿಷ್ಠ ಬೌಲಿಂಗ್
ಇಂದಿನ ಪಂದ್ಯದಲ್ಲಿ ಬೌಲಿಂಗ್ ಪಡೆಯನ್ನು ಅವಲೋಕಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಬಲವಾಗಿ ಕಾಣಿಸಿಕೊಳ್ಳುತ್ತಿದೆ. ಮೇರಿಜನ್ ಕಾಪ್ ೬ ಪಂದ್ಯಗಳಲ್ಲಿ ೧೧ ವಿಕೆಟ್ ಪಡೆದು ಟಾಪರ್ ಆಗಿದ್ದಾರೆ. ಜೆಸ್ ಜಾನಸನ್ ಹಾಗೂ ರಾಧಾ ಯಾದವ್ ಕೂಡ ಕ್ರಮವಾಗಿ ೧೧ ಹಾಗೂ ೧೦ ವಿಕೆಟ್‌ಗಳನ್ನು ಸಂಪಾದಿಸಿ ಟಾಪ್ ೪ರಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಸಿಬಿಗೆ ಆಶಾ ಶೋಭನಾ, ಸೋಫಿ ಮಾಲಿನಿಕ್ಸ್ ಹಾಗೂ ಎಲೈಸಿ ಪೆರಿ ವರದಾನವಾಗಬೇಕಿದೆ. ಈ ಇಬ್ಬರ ಕಳೆದ ಮುಖಾಮುಖಿಯಲ್ಲಿ ಆರ್‌ಸಿಬಿ ಕೇವಲ ೧ ರನ್‌ನಿಂದ ಸೋಲುಂಡಿತ್ತು. ಹಾಗಾಗಿ, ಇಂದು ಆರ್‌ಸಿಬಿ ಗೆದ್ದು ಸೇಡನ್ನು ತೀರಿಸಿಕೊಳ್ಳುವುದರ ಜೊತೆಗೆ ಟ್ರೋಫಿ ಎತ್ತಿಹಿಡಿಯುತ್ತಾ ಅನ್ನುವ ಕುತೂಹಲವಿದೆ.
ಸಂಭಾವ್ಯ ಡೆಲ್ಲಿ ತಂಡ: ಮೆಗ್ ಲಾನಿಂಗ್ (ನಾಯಕಿ), ಶಫಾಲಿ ವರ್ಮಾ, ಅಲೈಸಾ ಕ್ಯಾಪ್ಸಿ, ಜೆಮಿಮಾ ರೋಡ್ರಿಗ್ಸ್, ಜೆಸ್ ಜಾನಸನ್, ರಾಧಾ ಯಾದವ್, ಶಿಖಾ ಪಾಂಡೆ, ಮ್ಯಾರಿಜಾನ್ ಕಾಪ್, ಸ್ನೇಹಾ ದೀಪ್ತಿ, ಪೂನಮ್ ಯಾದವ್, ಮಿನ್ನು ಮಣಿ.
ಸಂಭಾವ್ಯ ಆರ್‌ಸಿಬಿ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲೈಸಿ ಪೆರಿ, ದಿಶಾ ಕಸಟ್, ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ಜಾರ್ಜಿಯಾ ವಾರ್ಹೆಮ್, ಎಸ್. ಮೇಘನಾ, ಸೋಫೀ ಮಾಲಿನಿಕ್ಸ್, ಆಶಾ ಶೋಭನಾ, ಕನಿಕಾ ಅಹುಜಾ

ಸ್ಥಳ: ಅರುಣ್ ಜೇಟ್ಲಿ ಸ್ಟೇಡಿಯಂ
ಸಮಯ: ರಾತ್ರಿ ೭.೩೦ಕ್ಕೆ